ನ್ಯೂಸ್ ನಾಟೌಟ್ : ಚುನಾವಣಾ ಕಣ ರಂಗೇರುತ್ತಿದೆ. ವಿಧಾನಸಭಾ ಚುನಾವಣೆ 2023 ಕ್ಕೆ ಇನ್ನೇನು ಕೆಲವೇ ತಿಂಗಳುಗಳಷ್ಟೇ ಬಾಕಿ ಉಳಿದಿವೆ.ಎದುರಾಳಿಗಳ ವಿರುದ್ಧ ರಣತಂತ್ರ ರೂಪಿಸುವುದಕ್ಕೆ ಎಲ್ಲಾ ಪಕ್ಷಗಳು ಸನ್ನದ್ಧವಾಗಿ ನಿಂತಿವೆ. ಸದ್ಯ ಕಾರ್ಕಳ ವಿಧಾನಸಭಾ ಕ್ಷೇತ್ರ ಕುತೂಹಲದ ಕೇಂದ್ರ ಬಿಂದುವಾಗಿದೆ.
ಅಧಿಕೃತ ಘೋಷಣೆ:
ಕಳೆದ ಕೆಲವು ತಿಂಗಳಿನಿಂದ ಕಾರ್ಕಳ ವಿಧಾನಸಭೆ ಕ್ಷೇತ್ರದಲ್ಲಿ ಚುನಾವಣೆಗೆ ಶ್ರೀರಾಮ ಸೇನೆ ಸಂಘಟನೆಯ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಸ್ಪರ್ಧೆ ಮಾಡುವ ಬಗ್ಗೆ ಬಾರಿ ಸುದ್ದಿಯಾಗಿತ್ತು. ಇದೀಗ ಅವರು ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ . ಕಾರ್ಕಳ ಕ್ಷೇತ್ರದಲ್ಲಿ ಮುಂದಿನ ವಿಧಾನಸಭೆ ಚುನಾವಣೆಗೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುವುದಾಗಿ ಘೋಷಿಸಿದ್ದಾರೆ.ಚುನಾವಣಾ ಕಾವು ಜೋರಾಗಿದೆ. ಈ ನಿಟ್ಟಿನಲ್ಲಿ ಭರದ ಸಿದ್ಧತೆಗಳು ನಡಿತಿವೆ. ಇದೀಗ ಪ್ರಮೋದ್ ಮುತಾಲಿಕ್ ಅವರು ಇಂಧನ ಸಚಿವ ವಿ ಸುನೀಲ್ ಕುಮಾರ್ ಅವರ ಕ್ಷೇತ್ರದಲ್ಲಿ ಸ್ಪರ್ಧಿಸುವುದಾಗಿ ಹೇಳಿದ್ದಾರೆ. ಕಾರ್ಕಳದಲ್ಲಿ ಸುದ್ದಿಗೋಷ್ಟಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು, ಯಾವುದೇ ಕಾರಣಕ್ಕೂ ನಾನು ಸ್ಪರ್ಧೆಯಿಂದ ಹಿಂದೆ ಸರಿಯುವುದಿಲ್ಲ ಎಂದಿದ್ದಾರೆ.
ಬಿಜೆಪಿ ವಿರೋಧಿಯಲ್ಲ:
ಮುಂದುವರಿದು ಮಾತನಾಡಿದ ಅವರು ನಾನು ಬಿಜೆಪಿ ವಿರೋಧಿಯಲ್ಲ. ನಾನು ಪ್ರಧಾನಿ ಮೋದಿ ಪರವಾಗಿ, ಹಿಂದುತ್ವದ ಪರವಾಗಿದ್ದೇನೆ, ಗೆದ್ದ ನಂತರವೂ ನನ್ನ ಬೆಂಬಲ ಬಿಜೆಪಿಗೆ ಇರಲಿದೆ. ನನ್ನ ಸ್ಪರ್ಧೆ ಏನಿದ್ದರೂ ವ್ಯಕ್ತಿಗಳ ವಿರುದ್ಧ, ಭ್ರಷ್ಟರ ವಿರುದ್ಧ, ಹಿಂದು ವಿರೋಧಿಗಳ ವಿರುದ್ಧ ಹೊರತು ಬಿಜೆಪಿಯ ಮೇಲೆ ಇಲ್ಲ ಎಂದರು.ನಾನು ಎಂದಿಗೂ ಕಾಂಗ್ರೆಸ್ ವಿರುದ್ಧ ಹೋರಾಟ ಮಾಡಿಕೊಂಡು ಬಂದವ. ಇಲ್ಲಿ ನಾನು ಗೆಲ್ಲಬೇಕು, ಹಿಂದುತ್ವ ಗೆಲ್ಲಬೇಕು ಅಷ್ಟೇ ಎಂದಿದ್ದಾರೆ.