ನ್ಯೂಸ್ ನಾಟೌಟ್ : ಕನ್ನಡ ಚಿತ್ರರಂಗದಲ್ಲಿ 300ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿರುವ ನಟ ಲಕ್ಷ್ಮಣ್ ಕೊನೆಯುಸಿರೆಳೆದಿದ್ದಾರೆ.
ಲಕ್ಷ್ಮಣ್ ಅವರಿಗೆ ಏನಾಗಿತ್ತು?
ಭಾನುವಾರ ರಾತ್ರಿ ಲಕ್ಷ್ಮಣ್ ಅವರಿಗೆ ಎದೆನೋವು ಕಾಣಿಸಿಕೊಂಡಿತ್ತು. ಆ ನಂತರ ಅವರನ್ನು ಬೆಂಗಳೂರಿನ ನಾಗರಬಾವಿಯಲ್ಲಿರುವ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಇಸಿಜಿ ಮಾಡಿಸಲಾಗಿತ್ತು. ಅದಾದ ನಂತರದಲ್ಲಿ ಲಕ್ಷ್ಮಣ್ ಅವರನ್ನು ಮನೆಗೆ ಕರೆದುಕೊಂಡು ಬರಲಾಗಿತ್ತು. ಇಂದು ಬೆಳಗಿನ ಜಾವ ನಾಲ್ಕು ಗಂಟೆಗೆ ಅವರು ಹೃದಯಾಘಾತದಿಂದ ( ಜನವರಿ 23 ) ಕೊನೆಯುಸಿರೆಳೆದಿದ್ದಾರೆ.
ಆರ್ಮಿಗೆ ಹೋಗಬೇಕಿದ್ದ ಲಕ್ಷ್ಮಣ್ ನಟರಾದ್ರು
ಆರ್ಮಿಗೆ ಆಯ್ಕೆಯಾಗಿದ್ದ ಲಕ್ಷ್ಮಣ್ ಅವರು ಭೂಪಾಲ್ನಲ್ಲಿ ಕೆಲಸ ಮಾಡಲು ಹೊರಟಾಗ ಅವರ ತಾಯಿ ತಡೆದರಂತೆ. ಅಂಬರೀಶ್, ವಿಷ್ಣುವರ್ಧನ್, ಶಂಕರ್ ನಾಗ್ ಸೇರಿದಂತೆ ಕನ್ನಡದ ದಿಗ್ಗಜರ ಜೊತೆ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿರುವ ಲಕ್ಷ್ಮಣ್ ಅವರು, ‘ಯಜಮಾನ’ , ‘ಸೂರ್ಯವಂಶ’, ‘ಒಲವಿನ ಉಡುಗೊರೆ, ‘ಸಾಂಗ್ಲಿಯಾನ’, ‘ದಾದಾ’, ‘ಅಂತ’ ಸಿನಿಮಾಗಳಲ್ಲಿ ನಟಿಸಿದ್ದಾರೆ. ರವಿಚಂದ್ರನ್ ಅವರ ಜೊತೆ ‘ರವಿ ಬೋಪಣ್ಣ’, ‘ಮಲ್ಲ’ ಸಿನಿಮಾದಲ್ಲಿಯೂ ಲಕ್ಷ್ಮಣ್ ಅವರು ನಟಿಸಿದ್ದರು.
ಎಸ್ಎಸ್ಎಲ್ಸಿ ಓದಿದ್ದ ಲಕ್ಷ್ಮಣ್
ರಾಜ್ಕುಮಾರ್, ವಿಷ್ಣುವರ್ಧನ್, ಅಂಬರೀಶ್ ಸೇರಿದಂತೆ ದಿಗ್ಗಜ ನಟರೊಂದಿಗೆ ಲಕ್ಷ್ಮಣ್ ಅಭಿನಯಿಸಿದ್ದಾರೆ. ಲಕ್ಷ್ಮಣ್ ಮೂಲತಃ ಬೆಂಗಳೂರಿನವರಾಗಿದ್ದು. ಲಕ್ಷ್ಮಣ್ ಜೊತೆ ಹುಟ್ಟಿದ್ದವರು 5 ಸಹೋದರಿಯರು ಮತ್ತು ಇಬ್ಬರು ಸಹೋದರರು. ಎಸ್ಎಸ್ಎಲ್ಸಿ ಮಾತ್ರ ಓದಿದ್ದ ಲಕ್ಷ್ಮಣ್ ಅವರು ಬಡ ಕುಟುಂಬದಿಂದ ಬಂದವರು. ಸಣ್ಣ ಕಾರ್ಖಾನೆಯಲ್ಲಿ ಕೆಲಸ ಪಡೆದುಕೊಂಡ ಅವರು ತಿಂಗಳಿಗೆ 15 ರೂಪಾಯಿ ಸಂಬಳ ಪಡೆದುಕೊಳ್ಳುತ್ತಿದ್ದರಂತೆ!.ತಂದೆ ಸೈನಿಕರಾಗಿದ್ದರು. ಸಹೋದರ ಕೂಡ ಪೊಲೀಸ್ ಇಲಾಖೆಯಲ್ಲಿದ್ದರು. ಹಾಗಾಗಿ ಸಹಜವಾಗಿಯೇ ಲಕ್ಷ್ಮಣ ಅವರ ಸೆಳೆತ ಖಾಕಿ ಮೇಲೆಯೇ ಇತ್ತು. ಆದರೆ, ತಾಯಿ ಒಪ್ಪದ ಕಾರಣದಿಂದಾಗಿ ಬಣ್ಣದ ಪ್ರಪಂಚಕ್ಕೆ ಬಂದರು. ಕೆಲವು ಕಾಲ ಫ್ಯಾಕ್ಟರಿಯಲ್ಲೂ ಕೆಲಸ ಮಾಡುತ್ತಿದ್ದರು. ರಂಗಭೂಮಿಯಲ್ಲಿ ಹಲವು ವರ್ಷಗಳ ಕಾಲ ನಟನರಾಗಿ ಸೇವೆ ಸಲ್ಲಿಸಿ, ಆನಂತರ ಸಿನಿಮಾ ರಂಗಕ್ಕೆ ಬಂದರು. ಸಿನಿಮಾದಲ್ಲಿ ಸಾಕಷ್ಟು ಅವಕಾಶಗಳನ್ನು ಪಡೆದರು.