ನ್ಯೂಸ್ ನಾಟೌಟ್ : ಸಂಪಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಶತಮಾನೋತ್ಸವ ಕಾರ್ಯಕ್ರಮದ ಉದ್ಘಾಟನಾ ಸಮಾರಂಭ ಕಲ್ಲುಗುಂಡಿ ಹಿ.ಪ್ರಾ ಶಾಲೆಯ ವಠಾರದಲ್ಲಿ ಮೊಳಹಳ್ಳಿ ಶಿವರಾಯ ಸಭಾ ವೇದಿಕೆಯಲ್ಲಿ ನಡೆಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಒಡಿಯೂರು ಗುರುದೇವಾನಂದ ಸ್ವಾಮೀಜಿ ಮತ್ತು ಡಾ. ಎಮ್ .ಎನ್ ರಾಜೇಂದ್ರಕುಮಾರ್ ನೆರವೇರಿಸಿದರು.
ಅದ್ದೂರಿ ಮೆರವಣಿಗೆ:
ಸಮಾರಂಭದ ಮೊದಲು ಕಲ್ಲುಗುಂಡಿ ಕೂಲಿ ಶೆಡ್ ನಿಂದ ಶತಮಾನೋತ್ಸವದ ಸಭಾಂಗಣದ ವರೆಗೆ ಅದ್ದೂರಿಯ ಮೆರವಣಿಗೆ ನಡೆಯಿತು. ಸಹಕಾರಿ ರತ್ನ ಪ್ರಶಸ್ತಿ ಪುರಸ್ಕೃತರಾದ ನಿತ್ಯಾನಂದ ಮುಂಡೋಡಿ ಚಾಲನೆ ನೀಡಿದರು. ಮೆರವಣಿಗೆಯಲ್ಲಿ ನೂರಾರು ಮಂದಿ ಪಾಲ್ಗೊಂಡು ಜೈಕಾರ ಹಾಕಿದರು.ಸಂಘದ ಕಚೇರಿಯಲ್ಲಿ ದ್ವಜಾರೋಹಣವನ್ನು ಸಹಕಾರಿ ಯೂನಿಯನ್ ಮಂಗಳೂರಿನ ಅಧ್ಯಕ್ಷ ಪ್ರಸಾದ್ ಶೆಟ್ಟಿ , ಕೌಶಲ್ ಶೆಟ್ಟಿ ನೆರವೇರಿಸಿದರು.
ಅಮೋಘ ಸಾಧನೆ ಮಾಡಿದೆ:
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾ ಮಂಡಲ ಬೆಂಗಳೂರು ಹಾಗೂ ದ.ಕ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಮಂಗಳೂರು ಇದರ ಅಧ್ಯಕ್ಷ ಡಾ. ಎಮ್ . ಎನ್ ರಾಜೇಂದ್ರ ಕುಮಾರ್ ವಹಿಸಿ,ಮಾತನಾಡಿದರು. ಇಂದು ವಾಣಿಜ್ಯ ಬ್ಯಾಂಕ್ ಗಳು ಸಂಕುಚಿತ ಗೊಳ್ಳುತ್ತಿದ್ದರೆ ಸಹಕಾರಿ ಸಂಘ ವಿಕಸನ ಗೊಳ್ಳುತ್ತಿದೆ. ಇಂತಹ ಸಹಕಾರಿ ಸಂಘ ಅಮೋಘ ಸಾಧನೆ ಮಾಡಿದೆ.ಇದಕ್ಕೆ ಪಕ್ಷ ಬೇಧವಿಲ್ಲ ಎಂದರು. ಎಲ್ಲರೂ ಒಗ್ಗಟ್ಟಿನಿಂದ ಸಹಕರಿಸುವಂತಾಗಬೇಕು ಎಂದು ಹೇಳಿದರು.
ಸ್ವಾಮೀಜಿ ಆಶೀರ್ವಚನ:
ಒಡಿಯೂರು ಗುರದೇವದತ್ತ ಸಂಸ್ಥಾನ ಮಠದ ಸ್ವಾಮೀಜಿ ಗುರುದೇವಾನಂದ ಸ್ವಾಮೀಜಿ ಭಾಗವಹಿಸಿ,ಕಾರ್ಯಕ್ರಮಕ್ಕೆ ಶುಭಹಾರೈಸಿದರು.ಶತ ಸಂಭ್ರಮ ಸಹಸ್ರ ಸಂಭ್ರಮಕ್ಕೆ ಮುನ್ನುಡಿಯಾಗಲಿ. ವ್ಯಕ್ತಿತ್ವ ತುಂಬಿರುವ ವ್ಯಕ್ತಿಯಿಂದ ಸಮಾಜ ಕಟ್ಟಬಹುದು ಎನ್ನುವುದಕ್ಕೆ ಸಹಕಾರಿ ಸಂಘ ಉತ್ತಮ ಉದಾಹರಣೆ. ಕೊಡುವುದು ಮತ್ತು ಕೊಳ್ಳುವಿಕೆಯಲ್ಲಿ ಪಾರದರ್ಶಕತೆ ಮೆರೆದಾಗ ಸಮಾಜ ಬೆಳೆಯುತ್ತದೆ ಎಂದು ಆಶೀರ್ವಚನ ನೀಡಿದರು.
ಇನ್ನಷ್ಟು ಅಭಿವೃದ್ದಿಯಾಗಲಿ:
ರಾಜ್ಯ ಬಂದರು ಮೀನುಗಾರಿಕೆ ಒಳನಾಡು ಜಲಸಾರಿಗೆ ಸಚಿವ ಎಸ್ .ಅಂಗಾರ ಭಾಗವಹಿಸಿ, ಸಂಪಾಜೆ ಸಹಕಾರಿ ಸಂಘದ ಸೇವೆಯಿಂದ ಹಲವಾರು ಮಂದಿ ರೈತರು ಪ್ರಯೋಜನ ಪಡೆದುಕೊಂಡಿದ್ದಾರೆ, ಶತಮಾನೋತ್ಸವ ಕಂಡ ಸಂಪಾಜೆ ಸಹಕಾರಿ ಸಂಘ ಇನ್ನಷ್ಟು ಅಭಿವೃದ್ದಿಯಾಗಲಿ ಎಂದರು.
ಕಲ್ಲುಗುಂಡಿ ಚರ್ಚ್ ಧರ್ಮಗುರು ರೆ. ಫಾ. ಪ್ಲಾವ್ ಕ್ರಾಸ್ತಾ ಶುಭ ನುಡಿಗಳನ್ನಾಡಿದರು.ಕಲ್ಲುಗುಂಡಿ ಮುಹಿಯ್ಯದ್ದೀನ್ ಜುಮಾ ಮಸೀದಿ ಖತೀಬರಾದ ಅಹ್ಮದ್ ನ ಈಂ ಫೈಝಿ ಭಾಗವಹಿಸಿ ಭಿನ್ನತೆ, ಬೇಧವನ್ನು ಮರೆತು ಒಂದಾಗಿ ಬಾಳಲು ಸಹಕಾರಿ ಸಂಘ ಕಾರಣವಾಗಲಿ ಎಂದರು.
ರಾಜ್ಯ ಲೋಕಸೇವಾ ಆಯೋಗದ ನಿವೃತ್ತ ಅಧ್ಯಕ್ಷ ಡಾ. ಟಿ. ಶ್ಯಾಮ್ ಭಟ್ ,ದ ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕ ಶಶಿಕುಮಾರ್ ರೈ ಬಾಲ್ಯೋಟ್ಟು, , ಸಂಪಾಜೆ ಗ್ರಾಮ ಪಂಚಯತ್ ಅಧ್ಯಕ್ಷ ಜಿ.ಕೆ. ಹಮೀದ್ ಗೂನಡ್ಕ, ಮಂಗಳೂರು ಸಹಕಾರಿ ಸಂಘದ ಉಪ ನಿಬಂಧಕ ರಮೇಶ್ ಎಚ್ ಎನ್, ಸಹಕಾರಿ ಸಂಘದ ಕಾರ್ಯ ನಿರ್ವಹಣಾಧಿಕಾರಿ ವೀರೇಂದ್ರ ಜೈನ್ ,ಸೆಲ್ಕೋ ಸೋಲಾರ್ ಬೆಂಗಳೂರು ಇದರ ಸಿ ಇ ಒ ಮೋಹನ್ ಭಾಸ್ಕರ ಹೆಗಡೆ, ಸಂಪಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಉಪಾದ್ಯಕ್ಷ ಮಹಮ್ಮದ್ ಕುಂಞಿ ಗೂನಡ್ಕ, ಸಂಘದ ನಿರ್ದೇಶಕರಾದ ಗಣಪತಿ ಭಟ್, ಪಿ.ಎನ್ ಆನಂದ ಪಿ.ಎಲ್, ಉಷಾ ಕೆ.ಎಂ, ಸುಮತಿ ಎಸ್, ಜಗದೀಶ್ ರೈ ಕೆ.ಆರ್, ಯಮುನ ಬಿ.ಎಸ್, ಹಮೀದ್ .ಹೆಚ್ , ಜಾನಿ ಕೆ.ಪಿ. , ಚಂದ್ರಶೇಖರ ಕೆ.ಯು, ಮೊದಲಾದವರಿದ್ದರು.
ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷ ಸೋಮಶೇಖರ ಕೊಯಿಂಗಾಜೆ, ವೀರೇಂದ್ರ ಜೈನ್ ಅವರು ಈ ಕಾರ್ಯಕ್ರಮದಲ್ಲಿ ಸಂಘದ ಮಾಜಿ ಅಧ್ಯಕ್ಷರು, ಮಾಜಿ ನಿರ್ದೇಶಕರು ಹಾಗೂ ಸಹಕಾರಿ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ತಾಲೂಕಿನ ವಿವಿಧ ಗಣ್ಯರು ಮತ್ತು ಸಂಪಾಜೆ ವ್ಯಾಪ್ತಿಗೆ ಒಳಪಟ್ಟ ವಿವಿಧ ಸಾಧಕರನ್ನ ಸನ್ಮಾನಿಸಿದರು.ಕ್ರೀಡಾಕೂಟ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.ಸಂಪಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಸೋಮಶೇಖರ ಕೊಯಿಂಗಾಜೆ ಸ್ವಾಗತಿಸಿದರು.