ನ್ಯೂಸ್ ನಾಟೌಟ್: ಜೀವನದಲ್ಲಿ ಅದೃಷ್ಟ ಯಾವಾಗ ಬೇಕಾದರೂ ಬರಬಹುದು. ಕೆಲವೊಮ್ಮೆ ಅದೃಷ್ಟ ಬೇಗ ಒಲಿದು ಬಂದರೆ ಇನ್ನೂ ಕೆಲವು ಸಲ ಸತಾಯಿಸಿ ಒಲಿಯುತ್ತದೆ. ಆದರೆ ಕೆಲವೊಬ್ಬರಿಗೆ ಅವರ ಇಡೀ ಜೀವನದಲ್ಲಿ ಅದೃಷ್ಟ ಅನ್ನುವುದು ಮರೀಚಿಕೆಯಾಗಿಯೇ ಉಳಿದಿರುತ್ತದೆ. ಅಂತಹವರು ಕಷ್ಟಪಟ್ಟು ದುಡಿಯುವುದರಲ್ಲೇ ಸಂತೃಪ್ತಿ ಕಾಣಬೇಕಾಗುತ್ತದೆ. ಆದರೆ ಇಲ್ಲೊಬ್ಬ ಛಲದಂಕ ಮಲ್ಲ ಅಜ್ಜ ಇದೆಲ್ಲವನ್ನು ಮೀರಿ ಸತತ ಪ್ರಯತ್ನದ ಬಳಿಕ ಲಾಟರಿಯಲ್ಲಿ ಬರೋಬ್ಬರಿ 5 ಕೋಟಿ ಗೆದ್ದು ವೈರಲ್ ಆಗಿದ್ದಾನೆ. ಆತ ಗೆಲುವಿನ ಸಾಧನೆಗಾಗಿ ತೆಗೆದುಕೊಂಡ ತಾಳ್ಮೆ ಕಂಡು ಇದೀಗ ಎಲ್ಲರೂ ಬೆರಗಾಗಿದ್ದಾರೆ.
ಮಹಂತ ದ್ವಾರಕ ದಾಸ್,ಪಂಜಾಬ್ ಮೂಲದವರು. ಅವರಿಗೆ 88 ವರ್ಷವಾಗಿದೆ. ಕಳೆದ 35-40 ವರ್ಷಗಳಿಂದ ಅವರು ನಿರಂತರವಾಗಿ ಲಾಟರಿ ಖರೀದಿಸುತ್ತಿದ್ದರು. ಆದರೆ ಅವರಿಗೆ ಗೆಲುವು ಸಿಕ್ಕಿರಲಿಲ್ಲ. ಆದರೆ ಇದೀಗ ಒಂದು ಹಗಲು -ರಾತ್ರಿಯಾಗುವ ವೇಳೆ ಅಜ್ಜ 5 ಕೋಟಿ ರೂ. ಒಡೆಯರಾಗಿದ್ದಾರೆ. ಅಜ್ಜನ ಲಾಟರಿ ಹುಚ್ಚು ಒಂದು ದಿನ ಈ ರೀತಿಯ ಕೋಟಿ ಆಗುತ್ತದೆ ಎಂದು ಸ್ವತಃ ಅಜ್ಜನ ಕುಟುಂಬದ ಸದಸ್ಯರಿಗೂ ಗೊತ್ತಿರಲಿಲ್ಲ. ಲೊಹ್ರಿ ಮಕರ ಸಂಕ್ರಾಂತಿ ಬಂಪರ್ ಲಾಟರಿಯಲ್ಲಿ ಈ ಹಣ ಸಿಕ್ಕಿದೆ. ಸದ್ಯ ಅಪ್ಪನ ಸಾಧನೆಗೆ ಮಕ್ಕಳು ಫುಲ್ ಖುಷಿ ಆಗಿದ್ದಾರೆ. ಈ ಬಗ್ಗೆ ಮಾತನಾಡಿದ ಮಹಂತ ಅವರ ಮಗ ನರೇಂದ್ರ ಕುಮಾರ್ ಶರ್ಮ, ನನ್ನ ತಂದೆಯವರು ಅಳಿಯನ ಜೊತೆ ಲಾಟರಿ ಟಿಕೇಟ್ ತರುವಂತೆ ಹಣ ನೀಡಿದ್ದರು. ಈ ಪ್ರಕಾರವಾಗಿ ತಂದ ಲಾಟರಿ ಟಿಕೇಟ್ ನಲ್ಲಿ ಕೋಟ್ಯಂತರ ರೂ. ನಮ್ಮ ಕೈ ಸೇರಿದೆ ಎಂದು ತಿಳಿಸಿದರು. ಗೆಲುವಿನ ಖುಷಿಯಲ್ಲಿರುವ ಮಹಂತ ಅವರು ಮಾತನಾಡಿ, ನನಗೆ ತುಂಬಾ ಸಂತೋಷವಾಗುತ್ತಿದೆ. ಕಳೆದ 35-40 ವರ್ಷಗಳಿಂದ ಲಾಟರಿ ಖರೀದಿಸುತ್ತಿದ್ದೆ. ನನಗೆ ಸಿಕ್ಕಿರುವ ಹಣವನ್ನು ಇಬ್ಬರು ಮಕ್ಕಳಿಗೆ ಹಂಚುತ್ತೇನೆ ಎಂದು ತಿಳಿಸಿದ್ದಾರೆ. ಸದ್ಯ ಶೇ. 30% ರಷ್ಟು ತೆರಿಗೆ ಹಣ ಕಡಿತಗೊಂಡು ಉಳಿದ ಹಣ ಮಹಂತ ಅವರ ಕೈ ಸೇರಲಿದೆ ಎಂದು ಪಂಜಾಬ್ ರಾಜ್ಯ ಲಾಟರಿಯ ಸಹಾಯಕ ನಿರ್ದೇಶಕ ಕರಮ್ ಸಿಂಗ್ ತಿಳಿಸಿದ್ದಾರೆ.