ನ್ಯೂಸ್ ನಾಟೌಟ್ : ಕೆಲವು ವರ್ಷಗಳ ಹಿಂದೆ ಹೃದಯಾಘಾತ ವಯಸ್ಸಾದವರಿಗೆ ಮಾತ್ರ ಅನ್ನುವ ಅಭಿಪ್ರಾಯವಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಕಾಲ ಬದಲಾಗಿದೆ. ಇಂದು ಯುವಕರು ಕೂಡ ಹೆಚ್ಚಿನ ಪ್ರಮಾಣದಲ್ಲಿ ಹೃದಯದ ಕಾಯಿಲೆಗೆ ಬಲಿಯಾಗುತ್ತಿದ್ದಾರೆ. ಇದು ಆತಂಕಕಾರಿ ಬೆಳವಣಿಗೆ.
ವರ್ಷಗಳ ಹಿಂದೆ ಕನ್ನಡದ ಖ್ಯಾತ ನಟ ಪುನೀತ್ ರಾಜ್ಕುಮಾರ್ ಹಠಾತ್ ನಿಧನರಾಗಿದ್ದನ್ನು ಜನ ಇನ್ನೂ ಮರೆತಿಲ್ಲ.ಈ ನಡುವೆಯೇ 30 ರಿಂದ 40 ವರ್ಷದ ಹಲವಾರು ಯುವಕರು ಹೃದಯಾಘಾತದಿಂದ ಪ್ರಾಣ ತೆತ್ತಿರುವುದು ಜನಸಾಮಾನ್ಯರ ಆತಂಕವನ್ನು ಮತ್ತಷ್ಟು ಹೆಚ್ಚಿಸಿದೆ. ಹೃದಯಾಘಾತ ಅಂದ್ರೆ ಏನು? ಏಕೆ ಸಂಭವಿಸುತ್ತದೆ? ಇಂದು ಯುವ ಜನರು ಯಾಕೆ ಹೆಚ್ಚು ಹೃದಯ ಸಂಬಂಧಿತ ಕಾಯಿಲೆಗೆ ತುತ್ತಾಗುತ್ತಿದ್ದಾರೆ ಸೇರಿದಂತೆ ಹಲವಾರು ವಿಚಾರವನ್ನು ಸುಳ್ಯದ ಕೆವಿಜಿ ಆಸ್ಪತ್ರೆ ಜನರಲ್ ಔಷಧಿ ವಿಭಾಗದ ಮುಖ್ಯಸ್ಥ ಡಾ. ರಾಮಚಂದ್ರ ಭಟ್ ನ್ಯೂಸ್ ನಾಟೌಟ್ ಕನ್ನಡ ವೆಬ್ಸೈಟ್ ಜೊತೆಗಿನ ಸಂದರ್ಶನದಲ್ಲಿ ಹಂಚಿಕೊಂಡಿದ್ದಾರೆ. ಈ ಬಗೆಗಿನ ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ ಓದಿ.
ಯುವಜನರಲ್ಲಿ ಹೆಚ್ಚುತ್ತಿರುವ ಹೃದಯಾಘಾತ ತೀವ್ರ ಆತಂಕಕಾರಿ ವಿಷಯ. ಭಾರತದಲ್ಲಿ ಹೃದಯಾಘಾತದ ಪ್ರಕರಣಗಳು ತೀವ್ರ ಗತಿಯಲ್ಲಿ ಹೆಚ್ಚಾಗುತ್ತಿದೆ. ಇಂದಿನ ಮಕ್ಕಳಿಗೆ ಶಾಲಾ ದಿನಗಳಿಂದಲೇ ಹೃದಯಘಾತದ ದುಷ್ಪರಿಣಾಮಗಳಿಗೆ ಕಾರಣವಾಗುವ ವಿವಿಧ ಗಂಡಾಂತರಕಾರಿ ಅಂಶಗಳ ಬಗ್ಗೆ ಜಾಗೃತಿಗೊಳಿಸುವ ಅವಶ್ಯಕತೆ ಇದೆ.
ಇತ್ತೀಚಿನ ದಿನದಲ್ಲಿ ಅಪಾಯಕಾರಿ ಜೀವನ ಶೈಲಿ ಹೃದಯಾಘಾತ ಸಾಧ್ಯತೆ ಹೆಚ್ಚಿಸುತ್ತಿದೆ. ಶೇ. 20ರಷ್ಟು ಜನರಿಗೆ ಹೃದ್ರೋಗ ವಂಶವಾಹಿಯಾಗಿದೆ ಎಂದು ಆರೋಗ್ಯ ಸಮೀಕ್ಷೆ ತಿಳಿಸಿದೆ. ಆಧುನಿಕ ಜೀವನಶೈಲಿಯ ಪರಿಣಾಮ ಯುವಜನತೆಯಲ್ಲಿ ಹೃದಯನಾಳ ತೊಂದರೆ, ಹೃದಯಾಘಾತ, ಪಾರ್ಶ್ವಾವಾಯು ಸಂಭವವನ್ನು ಮೂರುಪಟ್ಟು ಹೆಚ್ಚಿಸಿದೆ. ಭಾರತದಲ್ಲಿ ಹೃದಯಾಘಾತ ಸಂಭವದ ವಯೋಮಿತಿಯು 40 ರಿಂದ 30 ವರ್ಷಕ್ಕೆ ಇಳಿದಿದೆ. ಇದೊಂದು ಆತಂಕದ ವಿಷಯ. ಕೂತಲ್ಲೇ ಕೆಲಸ, ವಿಶ್ರಾಂತಿ ರಹಿತ ದುಡಿಮೆ, ದೈಹಿಕ ಚಟುವಟಿಕೆ ಇಲ್ಲದಿರುವುದು, ಧೂಮಪಾನ, ಮದ್ಯಪಾನ ಹವ್ಯಾಸ-ಹೃದಯಾಘಾತ ಹೆಚ್ಚಲು ಪ್ರಮುಖ ಕಾರಣವಾಗಿದೆ.
ವಿಶ್ವ ಆರೋಗ್ಯ ಸಂಸ್ಥೆ (WHO) ಪ್ರಕಾರ, ಪ್ರಪಂಚದ ನಂಬರ್ ಒನ್ ಕಿಲ್ಲರ್ ಹೃದಯಾಘಾತ. ಒತ್ತಡದ ಜೀವನ, ದೇಹದಲ್ಲಿ ಹೆಚ್ಚಿನ ಕೊಬ್ಬಿನಂಶ, ಧೂಮಪಾನ, ಮದ್ಯಪಾನ, ದೈಹಿಕ ಶ್ರಮ ರಹಿತ ಜೀವನ ಹೃದಯಾಘಾತ ಸಂಭವ ಹೆಚ್ಚಲು ಪ್ರಮುಖ ಕಾರಣ.
ಹೃದಯಯದ ಮಾಂಸಖಂಡಗಳಿಗೆ ಹಲವು ಪ್ರತ್ಯೇಕ ರಕ್ತನಾಳಗಳು ಅಗತ್ಯವಿರುವ ರಕ್ತವನ್ನು ಪೂರೈಸುತ್ತದೆ. ಈ ರಕ್ತ ನಾಳಗಳು ಸರಿಯಾಗಿ ಕೆಲಸ ಮಾಡಿದರೆ ಹೃದಯದ ಮಾಂಸ ಖಂಡಕ್ಕೆ ರಕ್ತ ಚಲಾವಣೆಯು ಸರಿಯಾಗಿ ಆಗುತ್ತದೆ.ಹಾಗೂ ಹೃದಯವು ಸರಿಯಾಗಿ ಪ್ರವರ್ತಿಸುತ್ತದೆ. ಹೃದಯದ ರಕ್ತ ನಾಳಗಳಲ್ಲಿ ರಕ್ತದ ಹರಿವು ಕುಂಠಿತಗೊಂಡರೆ ಅಥವಾ ನಿಂತರೆ ಹೃದಯದ ಮಾಂಸ ಖಂಡಗಳು ಕ್ಷೀಣಿಸುತ್ತದೆ. (ಅ ಭಾಗದ ಮಾಂಸ ಖಂಡಗಳು ಸಾಯುತ್ತದೆ) ಇದಕ್ಕೆ ಹೃದಯಾಘಾತ ಎಂದು ಹೇಳುತ್ತಾರೆ.
- ಎದೆನೋವು, ಹೃದಯ ಭಾರವಾಗುವಿಕೆ
- ಉಸಿರಾಟದಲ್ಲಿ ತೊಂದರೆ, ಕೆಮ್ಮು
- ಮಾನಸಿಕ ಕ್ಷೋಭೆ ಅಥವಾ ಒತ್ತಡದಂಥ ಲಕ್ಷಣಗಳು
- ಹೊಟ್ಟೆ ,ಹೆಗಲು, ಕುತ್ತಿಗೆ ,ಭುಜ ,ಕೈ ಅಥವಾ ದವಡೆ ನೋವು
- ಅಸ್ವಸ್ಥತೆ, ಸುಸ್ತು
- ಕಡಿಮೆ ನಾಡಿಮಿಡಿತ
- ಅತಿಯಾಗಿ ಬೆವರುವಿಕೆ
- ವಾಂತಿ, ಅಸಿಡಿಟಿ
- ತಲೆಸುತ್ತುವಿಕೆ/ಶಿರೋಭ್ರಮಣೆ/ ಜ್ಞಾನ ತಪ್ಪುವುದು
- ಇಸಿಜಿ
- ಇಕೋ ಟೆಸ್ಟ್
- ರಕ್ತದ ಪರೀಕ್ಷೆಗಳು
- ಡಯಾಬಿಟಿಸ್, ಕೊಲೆಸ್ಟ್ರಾಲ್ ಗೆ ಸಂಬಂಧಿಸಿದ ಟೆಸ್ಟ್ ಗಳು
- ಕೊರೊನರಿ ಆಂಜಿಯೋಗ್ರಫಿ ಮುಂತಾದ ಪರೀಕ್ಷೆಗಳು ಹೃದಯದ ಅರೋಗ್ಯ ತಪಾಸಣೆಗೆ ಸಹಾಯಕಾರಿ
ಇಂದಿನ ಯುವಕರು ಸಣ್ಣ ವಯಸ್ಸಿನಲ್ಲೇ ಹೃದಯ ಸಂಬಂಧಿತ ಕಾಯಿಲೆಯಿಂದ ಅಸುನೀಗುತ್ತಿದ್ದಾರೆ. ಮುಖ್ಯವಾಗಿ ಒಂದನ್ನು ಇಲ್ಲಿ ನೆನಪಿಟ್ಟುಕೊಳ್ಳಬೇಕು. ಇಂದು ಹೆಚ್ಚಿನವರು ಯುವಕರು ಹೃದಯಾಘಾತಕ್ಕೆ ಅಲ್ಲ ಬದಲಾಗಿ ಹೃದಯ ಸ್ಥಂಭನಕ್ಕೆ ಉಸಿರು ಚೆಲ್ಲುತ್ತಿದ್ದಾರೆ. ಇಂದು ಶೇ.10ರಷ್ಟು ಮಂದಿ ಹೃದಯ ವೈಫಲ್ಯ ಅಥವಾ ಹೃದಯ ಸ್ಥಂಭನಕ್ಕೊಳಗಾಗಿ ಸಾವಿಗೀಡಾಗುತ್ತಿದ್ದಾರೆ. ಹೃದಯಕ್ಕೆ ರಕ್ತ ಚಲನೆ ಎಷ್ಟು ಮುಖ್ಯವೋ ಹೃದಯದ ಒಳಗೆ ವಿದ್ಯುತ್ ಸಂಚಲನವೂ ಅತೀ ಅಗತ್ಯ. ಹೃದಯದ ಒಳಗೆ ವಿದ್ಯುತ್ ಸಂಚಲನ ಸ್ಥಂಭನಗೊಂಡರೆ ಹೃದಯವು ಸ್ಥಂಭನವಾಗುತ್ತದೆ. ಇಡೀ ಶರೀರಕ್ಕೆ, ಮೆದುಳಿಗೆ, ನರಮಂಡಲ, ಸ್ವಾಶಕೋಶಕ್ಕೆ ರಕ್ತ ಸಂಚಲನೆ ನಿಲ್ಲುತ್ತದೆ. ಆಗ ಇಂತಹ ವ್ಯಕ್ತಿಗಳು ಪ್ರಜ್ಞೆ ತಪ್ಪಿ ಬೀಳಬಹುದು, ಉಸಿರಾಟ ನಿಲ್ಲಬಹುದು ಮತ್ತು ಕ್ಷಣಾರ್ಧದಲ್ಲಿ ರಕ್ತ ಸಂಚಾರ ಮೆದುಳಿಗೆ ಮರು ಪೊರೈಸದಿದ್ದರೆ ವ್ಯಕ್ತಿ ಸಾವನ್ನಪ್ಪಬಹುದು. ಹೃದಯ ಸ್ತಂಬನಕ್ಕೆ ಉದಾಹರಣೆಯೆಂದರೆ ಪುನೀತ್ ರಾಜ್ ಕುಮಾರ್. ಅವರಿಗೆ ಹೃದಯ ಸ್ಥಂಭನ ಆಗಿ ಮರಣ ಹೊಂದಿದ್ದಾರೆ. ಹೃದಯ ಸ್ಥಂಭನ ಆದ ವೇಳೆಗೆ ರೋಗಿಯ ಎದೆಯ ಭಾಗಕ್ಕೆ ನಿಮಿಷಕ್ಕೆ 200 ಬಾರಿ ಅಂತೆ ನಿಯಮಿತ ಒತ್ತಡವನ್ನು ಕೊಟ್ಟು ಹೃದಯದಿಂದ ಮೆದುಳಿಗೆ ರಕ್ತ ಚಲಾವಣೆ CPR ( Cardiopulmonary Resuscitation) ಆಗುವಂತೆ ನೋಡಿಕೊಳ್ಳಬೇಕು. ವ್ಯೆದ್ಯಕೀಯ ನೆರವು ಲಭ್ಯ ಆಗುವವರೆಗೆ ಈ ರೀತಿ ಮಾಡಬೇಕು. ಆದ್ದರಿಂದ ಪ್ರತಿಯೊಬ್ಬ ಪ್ರಜೆಯು CPR ನ ವಿಧಾನವನ್ನು ಅರಿತರೆ ಹೃದಯ ಸ್ಥಂಭನಗೊಂಡಾಗ ಪ್ರಾಣ ಉಳಿಸಬಹುದು.
- ತಂಬಾಕುಗಳಂತಹ ಯಾವುದೇ ರೂಪದ ಸೇವನೆ ಮಾಡಬಾರದು.
- ಪ್ರತಿದಿನ ನಿಯಮಿತ ವ್ಯಾಯಾಮ ಮಾಡಿ ದೇಹದ ತೂಕವನ್ನು ಹತೋಟಿಯಲ್ಲಿ ಇಟ್ಟುಕೊಳ್ಳುವುದು.
- ಮಾನಸಿಕ ಅರೋಗ್ಯವನ್ನು ಕಾಪಾಡಿಕೊಳ್ಳುವುದು.
- ಶುಗರ್, ಬಿಪಿ ನಿಯಮಿತವಾಗಿ ಪರೀಕ್ಷಿಸಿ ಹತೋಟಿಯಲ್ಲಿ ಇಟ್ಟುಕೊಳ್ಳಬೇಕು.
- ರಕ್ತದಲ್ಲಿ ಕೊಲೆಸ್ಟ್ರಾಲ್ ಅಂಶವನ್ನು ಹತೋಟಿಯಲ್ಲಿ ಇಟ್ಟುಕೊಳ್ಳಬೇಕು.
- 40 ವರ್ಷ ಮೇಲ್ಪಟ್ಟವರು ಪ್ರತಿ 6 ತಿಂಗಳಿಗೊಮ್ಮೆ ವ್ಯೆದ್ಯರನ್ನು ಭೇಟಿ ಮಾಡಿ ತಪಾಸಣೆ ಮಾಡಿಕೊಳ್ಳಬೇಕು.