ನ್ಯೂಸ್ ನಾಟೌಟ್: ವ್ಯಕ್ತಿಯೊಬ್ಬನ ವಂಚನೆಯ ಬಲೆಗೆ ಸಿಲುಕಿ ಕೊಡಗಿನ ಮಹಿಳೆಯೊಬ್ಬಳು ಕುವೈತ್ ನಲ್ಲಿ ಅತಂತ್ರ ಸ್ಥಿತಿಗೆ ತಲುಪಿರುವ ವಿಚಾರ ಬೆಳಕಿಗೆ ಬಂದಿದೆ.
ಸಿದ್ದಾಪುರದ ಕರಡಿಗೋಡು ಗ್ರಾಮದ ಮಹಿಳೆ ಪಾರ್ವತಿ ಎಂದು ಗುರುತಿಸಲಾಗಿದೆ. ವಿಸಿಟಿಂಗ್ ವೀಸಾದ ಅವಧಿ ಮೂರು ತಿಂಗಳಿಗೆ ಮುಕ್ತಾಯವಾಗಿದೆ. ಈ ವಿಚಾರ ಮಹಿಳೆಯ ಅರಿವಿಗೆ ಬಾರದ ಹಿನ್ನೆಲೆಯಲ್ಲಿ ಆಕೆ ಅತಂತ್ರ ಸ್ಥಿತಿಗೆ ಬಂದು ತಲುಪಿದ್ದಾಳೆ. ಈ ಬಗ್ಗೆ ತಾಯಿಗೆ ಕರೆ ಮಾಡಿರುವ ಮಹಿಳೆ ತನ್ನ ನೋವನ್ನು ತೋಡಿಕೊಂಡಿದ್ದಾಳೆ. ಈ ಬೆನ್ನಲ್ಲೇ ಪೋಷಕರು ಆಕೆಯನ್ನು ಅಲ್ಲಿಂದ ಸುರಕ್ಷಿತವಾಗಿ ಕರೆ ತರುವಂತೆ ಕೊಡಗು ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದಾರೆ. ಇದಕ್ಕೆ ಸ್ಪಂದಿಸಿರುವ ಜಿಲ್ಲಾಡಳಿತ ಪಾರ್ವತಿಯನ್ನು ಕರೆ ತರುವುದಕ್ಕೆ ಅಗತ್ಯ ಕ್ರಮವನ್ನು ಕೈಗೊಂಡಿದೆ.
ಪತಿ ದೂರವಾದ ಬಳಿಕ ಇಬ್ಬರು ಪುಟ್ಟ ಮಕ್ಕಳು ಹಾಗೂ ತಾಯಿಯೊಂದಿಗೆ ಪಾರ್ವತಿ ಕರಡಿಗೋಡು ಗ್ರಾಮದ ಮನೆಯೊಂದರಲ್ಲಿ ವಾಸವಿದ್ದರು. ಕೇರಳದಲ್ಲಿ ಮನೆ ಕೆಲಸವೊಂದು ಸಿಕ್ಕಿದ ಹಿನ್ನೆಲೆಯಲ್ಲಿ ಪಾರ್ವತಿ ಕೇರಳಕ್ಕೆ ಹೋಗಿದ್ದರು. ಮಕ್ಕಳನ್ನು ತನ್ನ ತಾಯಿಯೊಂದಿಗೆ ಬಿಟ್ಟಿದ್ದರು. ಇತ್ತೀಚಿಗೆ ವ್ಯಕ್ತಿಯೊಬ್ಬನ ಮೂಲಕ ಕುವೈತ್ ಗೆ ಹೋಗಿದ್ದರು. ಬಳಿಕ ಅಲ್ಲಿ ವೀಸಾ ಅವಧಿ ಮುಗಿದು ಹೋಗಿದ್ದರಿಂದ ಆಕೆ ಕೆಲಸ ಕಳೆದುಕೊಂಡು ಅತಂತ್ರಳಾಗಿದ್ದಾಳೆ ಎನ್ನಲಾಗಿದೆ.