ನ್ಯೂಸ್ ನಾಟೌಟ್ : ಚಿತ್ರಕಲೆ ಎಂಬುದು ವಿಶ್ವಭಾಷೆ.ಅದು ಎಲ್ಲರಿಗೂ ಒಲಿದು ಬರೋದಿಲ್ಲ. ಒಂದು ಸಲ ಅದು ನಮ್ಮ ಕೈ ಹಿಡಿದ್ರೆ ನಂತರ ನಮ್ಮ ನೆರಳಲ್ಲೇ ಇರುತ್ತೆ. ಅದೊಂದು ತಪಸ್ಸು ಇದ್ದ ಹಾಗೆ. ಕರಗತ ಮಾಡಿಕೊಂಡರೆ ಚಿತ್ರಕಲೆ ಇನ್ನೂ ಸುಲಭ.ಇಲ್ಲೊಬ್ಬರಿದ್ದಾರೆ ಅಶ್ವತ್ಥ ಮರದ ಎಲೆಯಲ್ಲಿ ಸೃಜನಾತ್ಮಕ ಕಲಾಕೃತಿಗಳನ್ನು ರಚಿಸುವ ಮೂಲಕ ಎಲ್ಲರ ಗಮನ ಸೆಳೆಯುತ್ತಿದ್ದಾರೆ.ಇವರ ಈ ಸಾಧನೆಗೆ ಎಲ್ಲೆಡೆಯಿಂದ ಮೆಚ್ಚುಗೆ ಮಾತುಗಳು ಕೇಳಿ ಬಂದಿವೆ.ಜತೆಗೆ ಇವರು ರಚಿಸಿದ ಕಲಾಕೃತಿಗಳು ಎಲ್ಲೆಡೆ ವೈರಲ್ ಆಗಿವೆ.
ಅಪರೂಪದ ಕಲಾವಿದರಲ್ಲೊಬ್ಬರು:
ಬಂಟ್ವಾಳ ತಾಲೂಕಿನ ಅಮ್ಮುಂಜೆ ಗ್ರಾಮದ ಬೆಂಜನಪದವು ಶಿವಾಜಿ ನಗರದ ನಿವಾಸಿ.ಹೆಸರು ಶಿವಪ್ರಶಾಂತ್ .ಇವರ ಅಪರೂಪದ ಕಲೆಗೆ ವಿಶೇಷ ತಾಳ್ಮೆ ಮತ್ತು ಸೃಜನಶೀಲತೆ ಅಗತ್ಯವಿದ್ದು, ಯಾವುದೇ ತರಬೇತಿಯಿಲ್ಲದೇ ತಮ್ಮ ಸ್ವ ಇಚ್ಚೆಯಿಂದ ಯೂ ಟ್ಯೂಬ್ ನೋಡಿ ಈ ವಿದ್ಯೆಯನ್ನು ಕರಗತ ಮಾಡಿಕೊಂಡಿದ್ದಾರೆ ಎಂಬುದು ವಿಶೇಷ. ಈಗಾಗಲೇ ತನ್ನ ಕೈಚಳಕದಲ್ಲಿ ಶ್ರೀ ಕೃಷ್ಣ, ಅಯ್ಯಪ್ಪ ಸ್ವಾಮಿ, ಕಟೀಲು ಶ್ರೀ ದುರ್ಗಾಪರಮೇಶ್ವರಿ, ಪೊಳಲಿ ಶ್ರೀ ರಾಜರಾಜೇಶ್ವರಿ, ಗಣಪತಿ, ಶಿವ, ದೇವಿ, , ಅಂಬೇಡ್ಕರ್, ನರೇಂದ್ರ ಮೋದಿ, ಚಾರ್ಲಿ ಚಾಪ್ಲಿನ್, ಹುಲಿ ಚಿತ್ರಗಳು ಮೂಡಿ ಬಂದಿವೆ.
ಎಲೆಯಲ್ಲಿ ವರಾಹರೂಪಂ ಪಂಜುರ್ಲಿ ದೈವ!
ಇತ್ತೀಚೆಗೆ ಇಡೀ ವಿಶ್ವ ಮಟ್ಟದಲ್ಲಿ ಸುದ್ದಿಯಾದ ಕಾಂತಾರ ಸಿನಿಮಾ ಜನ ಮೆಚ್ಚುಗೆ ಗಳಿಸಿತ್ತು.ಕೋಟ್ಯಂತರ ರೂಪಾಯಿಗಳನ್ನು ಬಾಚಿಕೊಂಡ ಈ ಸಿನಿಮಾದ ಹೊಸ ದಾಖಲೆಯನ್ನೇ ಬರೆಯಿತು.ಇದೀಗ ಶಿವಪ್ರಶಾಂತ್ ಅವರ ಕೈ ಚಳಕದಲ್ಲಿ ಕಾಂತಾರ ಸಿನೆಮಾದ ವರಾಹರೂಪ ಪಂಜುರ್ಲಿ ದೈವ ಕೂಡ ಮೂಡಿ ಬಂದಿದೆ.ಇದು ಅಚ್ಚರಿಗೂ ಕಾರಣವಾಗಿದೆ.ಇಷ್ಟು ಮಾತ್ರವಲ್ಲದೇ ತೆಂಗಿನ ಹಸಿ ಗರಿಯಲ್ಲಿ ಕೂಡ ಚಿತ್ರಗಳು ರೂಪ ಪಡೆದುಕೊಂಡಿವೆ.