ನ್ಯೂಸ್ ನಾಟೌಟ್ :ಸದಾ ಒಂದಿಲ್ಲೊಂದು ವಿಶೇಷತೆಗಳಿಂದ ಇಡೀ ರಾಜ್ಯದ ಗಮನ ಸೆಳೆಯುವಂತೆ ಮಾಡುವ ಮೂಡಬಿದ್ರೆಯ ಆಳ್ವಾಸ್ ಕಾಲೇಜ್ ಇದೀಗ ಮತ್ತೊಂದು ವಿಭಿನ್ನ ಕಾರ್ಯಕ್ರಮದ ಮೂಲಕ ಸುದ್ದಿಯಾಗಿದೆ.ಆಳ್ವಾಸ್ ಅಂಗಳದಲ್ಲಿ ಆಳ್ವಾಸ್ ನುಡಿಸಿರಿ ,ಆಳ್ವಾಸ್ ವಿರಾಸತ್ ಮೂಲಕ ಯುವಜನತೆಗೆ ಸಾಹಿತ್ಯ,ಕಲೆ ಬಗ್ಗೆ ಆಸಕ್ತಿಯನ್ನು ಉಂಟುಮಾಡುವ ಕೆಲಸಗಳಾಗುತ್ತಿದೆ.ಇತ್ತೀಚೆಗಷ್ಟೇ ಅಂತರಾಷ್ಟ್ರೀಯ ಮಟ್ಟದ ಜಾಂಬೂರಿ ಸಾಂಸ್ಕೃತಿಕ ಕಾರ್ಯಕ್ರಮ ಇಡೀ ವಿಶ್ವದೆಲ್ಲಡೆ ಪಸರಿಸಿತ್ತು.ಇದೀಗ ಆಳ್ವಾಸ್ ನಲ್ಲಿ ಬರೋಬ್ಬರಿ 27000 ಮಂದಿ ವಿದ್ಯಾರ್ಥಿಗಳು ಏಕಕಾಲದಲ್ಲೇ ಯೋಗಾಸನ ಮಾಡುವುದರ ಮೂಲಕ ಮತ್ತೆ ಸುದ್ದಿಯಲ್ಲಿದೆ.
ಕೋಡ್ ಸ್ಕ್ಯಾನ್ ಮೂಲಕ ಪ್ರವೇಶ :
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದಿಂದ ಯೋಗಥಾನ್ ಕಾರ್ಯಕ್ರಮದ ಯಶಸ್ಸಿಗೆ ಸಕಲ ಸಿದ್ಧತೆಗಳನ್ನು ಮಾಡಲಾಗಿತ್ತು. ಇಡೀ ವೇದಿಕೆಯ ಅಂದವನ್ನು ಹೆಚ್ಚಿಸಲು ರೆಡ್ ಕಾರ್ಪೆಟ್ ಹೊದಿಸಲಾಗಿತ್ತು. ಬಂದ ಯೋಗಾಸಕ್ತರನ್ನು ಕೋಡ್ ಸ್ಕ್ಯಾನ್ ಮಾಡುವುದರ ಮೂಲಕ ವೇದಿಕೆಗೆ ಬಿಡಲಾಯಿತು. ಅತ್ಯಂತ ಶಿಸ್ತು ಸಂಯಮದಿಂದ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಸ್ವಯಂ ಸೇವಕರು ಸಹಕರಿಸಿದರು.
27,632 ಮಂದಿ ಭಾಗಿ :
ರಾಜ್ಯ ಸರಕಾರದ ನಿರ್ದೇಶನದಂತೆ 26ನೇ ರಾಷ್ಟ್ರೀಯ ಯುವ ಜನೋತ್ಸವದ ಅಂಗವಾಗಿ ರಾಜ್ಯ ರಾಜಧಾನಿ ಬೆಂಗಳೂರು, ಬಾಗಲಕೋಟೆ, ಮೈಸೂರು, ಬೆಳಗಾವಿ, ದಾವಣಗೆರೆ, ಮಡಿಕೇರಿ, ಚಾಮರಾಜನಗರ, ಮಂಡ್ಯ, ಹಾವೇರಿ, ಶಿವಮೊಗ್ಗ ಸೇರಿದಂತೆ ರಾಜ್ಯದ ವಿವಿಧೆಡೆ ಈ ಕಾರ್ಯಕ್ರಮ ನಡೆದಿದೆ. ಬಾಗಲಕೋಟೆಯಲ್ಲಿ ನಡೆದ ಯೋಗಥಾನ್ ನಲ್ಲಿ 15 ಸಾವಿರ ಯೋಗಪಟುಗಳು ಭಾಗವಹಿಸಿದ್ದರೆ, ಹಾವೇರಿಯಲ್ಲಿ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಏಕಕಾಲದಲ್ಲಿ 12 ಸಾವಿರ ಯೋಗಪಟುಗಳು ಪಾಲ್ಗೊಂಡಿದ್ದರು.ಆದರೆ ಆಳ್ವಾಸ್ ನಲ್ಲಿ ಸುಮಾರು 45 ನಿಮಿಷಗಳ ಕಾಲ ನಡೆದ ಯೋಗಥಾನ್ನಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಶಿಕ್ಷಣ ಸಂಸ್ಥೆಗಳು ಹಾಗೂ ಆಳ್ವಾಸ್ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳು ಸೇರಿದಂತೆ 27,632 ಮಂದಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು.
ಕರ್ನಾಟಕದ ದಾಖಲೆ:
ಯೋಗಥಾನ್ 2023 ಕರ್ನಾಟಕದ ಹೆಸರಿನಲ್ಲಿ ಗಿನ್ನೀಸ್ ದಾಖಲೆ ಸೇರಿದ್ದು, ಧಾರವಾಡ ಸೇರಿದಂತೆ ರಾಜ್ಯಾದ್ಯಂತ 6 ಲಕ್ಷಕ್ಕೂ ಅಧಿಕ ಜನರು ಏಕಕಾಲಕ್ಕೆ ಯೋಗಾಭ್ಯಾಸ ಮಾಡುವ ಮೂಲಕ ವಿಶ್ವದಾಖಲೆ ಬರೆಯಲಾಗಿದೆ. ಈ ಮೂಲಕ ರಾಜಸ್ಥಾನದಲ್ಲಿ 1.60 ಲಕ್ಷ ಜನರ ಮೂಲಕ ಸೃಷ್ಟಿಯಾಗಿದ್ದ ದಾಖಲೆಯನ್ನು ಕರ್ನಾಟಕ ಅಳಿಸಿ ಹಾಕಿದೆ ಎಂದು ಸಚಿವ ಡಾ.ನಾರಾಯಣಗೌಡ ತಿಳಿಸಿದ್ದಾರೆ. 2018 ರಲ್ಲಿ ರಾಜಸ್ಥಾನದಲ್ಲಿ ಏಕಕಾಲಕ್ಕೆ 1.60 ಲಕ್ಷ ಜನರು ಯೋಗ ಮಾಡಿದ್ದು ದಾಖಲೆಯಾಗಿತ್ತು.