ನ್ಯೂಸ್ ನಾಟೌಟ್ : ಪಾಕಿಸ್ತಾನವು ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿರುವ ಕಾರಣ ಅಡುಗೆಯ ಅಗತ್ಯ ಆಹಾರ ವಸ್ತುಗಳಾದ ಗೋಧಿ ಹಿಟ್ಟು ಮತ್ತು ಇತರ ಆಹಾರ ಸಾಮಗ್ರಿಗಳನ್ನು ಪಡೆಯಲು ಪಾಕಿಸ್ತಾನದ ಜನರು ಹೆಣಗಾಡುತ್ತಿದ್ದಾರೆ. ಪಾಕಿಸ್ತಾನದಲ್ಲಿ ನಡೆಯುತ್ತಿರುವ ಈ ಆಹಾರ ಬಿಕ್ಕಟ್ಟಿನ ಮಧ್ಯೆ ಗೋಧಿ ಮತ್ತು ಹಿಟ್ಟಿನ ಬೆಲೆಗಳು ಗಗನಕ್ಕೇರಿವೆ ಎಂದು ಪಾಕಿಸ್ತಾನದ ಪತ್ರಿಕೆಯಾದ ಎಕ್ಸ್ಪ್ರೆಸ್ ಟ್ರಿಬ್ಯೂನ್ ವರದಿ ಮಾಡಿದೆ.
ಕರಾಚಿಯಲ್ಲಿ ಆಹಾರ ಧಾನ್ಯಗಳ ಹಿಟ್ಟು ಪ್ರತಿ ಕಿಲೋಗ್ರಾಂಗೆ 140 ರೂ.ನಿಂದ 160 ರೂ.ಗೆ ಮಾರಾಟವಾಗುತ್ತಿದೆ. ಇಸ್ಲಾಮಾಬಾದ್ ಮತ್ತು ಪೇಶಾವರದಲ್ಲಿ 10 ಕೆಜಿ ಹಿಟ್ಟು ಪ್ರತಿ ಕಿಲೋಗ್ರಾಂಗೆ 1,500 ರೂ.ಗೆ ಮಾರಾಟವಾಗುತ್ತಿದ್ದು, 20 ಕೆಜಿ ಹಿಟ್ಟು 2,800 ರೂ.ಗೆ ಮಾರಾಟವಾಗುತ್ತಿರುವುದು ಅಲ್ಲಿನ ಶೋಚನೀಯ ಸ್ಥಿತಿಗೆ ಕೈಗನ್ನಡಿ ಹಿಡಿದಂತಿದೆ.
ಪಾಕಿಸ್ತಾನದ ಜನರು ಹಣದುಬ್ಬರದ ಪರಿಣಾಮಗಳನ್ನು ಅನುಭವಿಸುತ್ತಿದ್ದಾರೆ ಮತ್ತು ದೇಶದಲ್ಲಿ ಆಹಾರದ ಬಿಕ್ಕಟ್ಟಿನೊಂದಿಗೆ ಹೋರಾಡುತ್ತಿದ್ದಾರೆ,ಈ ನಡುವೆ ಅಧಿಕಾರಿಗಳು ಜನರಿಗೆ ಗೋಧಿ ಹಿಟ್ಟನ್ನು ವಿತರಿಸುತ್ತಿರುವಾಗ ಒಬ್ಬ ವ್ಯಕ್ತಿ ಇತರ ಜನರನ್ನು ತೆರೆದ ಚರಂಡಿಗೆ ತಳ್ಳುತ್ತಿರುವ ವೀಡಿಯೊವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಸಾಮಾಜಿಕ ಮಾಧ್ಯಮ ಗಳಲ್ಲಿ ವೈರಲ್ ಆಗುತ್ತಿರುವ ವೀಡಿಯೊದಲ್ಲಿ, ಒಬ್ಬ ವ್ಯಕ್ತಿಯು ಹಿಟ್ಟು ಪಡೆಯಲು ದಾರಿ ಮಾಡಿಕೊಡಲು ಇನ್ನೊಬ್ಬ ವ್ಯಕ್ತಿಯನ್ನು ತೆರೆದ ಚರಂಡಿಗೆ ತಳ್ಳುತ್ತಾನೆ ಮತ್ತು ನಂತರ ಅವನು ತಿರುಗಿ ಇನ್ನೊಬ್ಬ ವ್ಯಕ್ತಿಯನ್ನು ತಳ್ಳಲು ಪ್ರಯತ್ನಿಸುತ್ತಿರುವುದನ್ನು ಕಾಣಬಹುದು. ನಂತರ ಅವರು ಜನನಿಬಿಡ ಸ್ಥಳದಿಂದ ಹೊರಬರುವ ದಾರಿಯಲ್ಲಿ ಇನ್ನೊಬ್ಬ ವ್ಯಕ್ತಿಯನ್ನು ಚರಂಡಿಗೆ ತಳ್ಳಿತ್ತಾರೆ. ಇದು ಅಲ್ಲಿನ ಹಣದುಬ್ಬರದ ಪರಿಣಾಮದಿಂದಾಗಿ ಜನರು ಅನುಭವಿಸುತ್ತಿರುವ ಆಹಾಕಾರಕ್ಕೆ ಉದಾಹರಣೆಯಾಗಿದೆ.
ಪಂಜಾಬ್ ಪ್ರಾಂತ್ಯದ ಗಿರಣಿ ಮಾಲೀಕರು ಹಿಟ್ಟಿನ ಬೆಲೆಯನ್ನು ಕಿಲೋಗ್ರಾಂಗೆ 160 ರೂ.ಗೆ ಹೆಚ್ಚಿಸಿದ್ದಾರೆ. ಬಲೂಚಿಸ್ತಾನದ ಆಹಾರ ಸಚಿವ ಝಮಾರಕ್ ಅಚಕ್ಝೈ (Zamarak Achakzai) ಅವರು ಇ ಬಗ್ಗೆ ಹೇಳಿಕೆ ನೀಡಿದ್ದು, “ಕರಾಚಿ ಪ್ರಾಂತ್ಯದಲ್ಲಿ ಗೋಧಿ ದಾಸ್ತಾನು ಸಂಪೂರ್ಣವಾಗಿ ಖಾಲಿಯಾಗಿದೆ” ಎಂದು ಹೇಳಿದ್ದಾರೆ. ಬಲೂಚಿಸ್ತಾನಕ್ಕೆ ತಕ್ಷಣವೇ 400,000 ಚೀಲಗಳಷ್ಟು ಗೋಧಿಯ ಅಗತ್ಯವಿದೆ ಎಂದು ಅವರು ಹೇಳಿದರು ಮತ್ತು ಇಲ್ಲದಿದ್ದರೆ, ಬಿಕ್ಕಟ್ಟು ತೀವ್ರಗೊಳ್ಳಬಹುದು ಎಂದು ಅವರು ಎಚ್ಚರಿಸಿದರು. ಸರ್ಕಾರವು ಆಹಾರ ಮಾರುಕಟ್ಟೆಯ ಬೆಲೆಯಲ್ಲಿ ಸ್ಥಿರತೆ ತರಲು ವಿಫಲವಾಗಿದೆ ಎಂದು ದಿ ನ್ಯೂಸ್ ಇಂಟರ್ನ್ಯಾಷನಲ್ ವರದಿಯಲ್ಲಿ ತಿಳಿಸಿದೆ.