ನ್ಯೂಸ್ ನಾಟೌಟ್ : ಭೈರವೈಕ್ಯ ಶ್ರೀ ಡಾ.ಬಾಲಗಂಗಾಧರನಾಥ ಮಹಾ ಸ್ವಾಮೀಜಿ ಅವರ 78ನೇ ಜಯಂತ್ಯೋತ್ಸವ ಕಾರ್ಯಕ್ರಮ ಜ.22 ರಂದು ನಡೆಯಲಿದೆ. ಈ ಅದ್ದೂರಿ ಕಾರ್ಯಕ್ರಮ ಪುತ್ತೂರಿನ ಮಹಾಲಿಂಗೇಶ್ವರ ದೇವಸ್ಥಾನದ ಮೈದಾನದಲ್ಲಿ ನಡೆಯಲಿದ್ದು,ಜಿಲ್ಲೆಯ ವಿವಿಧ ಭಾಗಗಳಿಂದ ಸಾವಿರಾರು ಸಂಖ್ಯೆಯಲ್ಲಿ ಭಾಗವಹಿಸುವ ನಿರೀಕ್ಷೆ ಇದೆ. ಸುಳ್ಯ ತಾಲೂಕಿನಿಂದಲೇ ಸುಮಾರು 20 ಸಾವಿರ ಮಂದಿ ಭಾಗವಹಿಸಲಿದ್ದಾರೆ.ಈಗಾಗಲೇ ಸಿದ್ದತೆಗಳು ನಡಿತಾ ಇದ್ದು, ಒಕ್ಕಲಿಗ ಗೌಡ ಸಮುದಾಯಕ್ಕೆ ಮಾತ್ರ ಸೀಮಿತವಾದ ಕಾರ್ಯಕ್ರಮ ಅಲ್ಲ. ಪ್ರತೀ ಮನೆಯವರೂ ಪಾಲುದಾರರಾಗಬೇಕು’ ಎಂದು ಸುಳ್ಯ ತಾಲೂಕು ಗೌಡರ ಯುವ ಸೇವಾ ಸಂಘದ ಅಧ್ಯಕ್ಷ ಚಂದ್ರ ಕೋಲ್ಚಾರ್ ಮನವಿ ಮಾಡಿದರು.
ಅಧ್ಯಯನ ಗ್ರಂಥ ಲೋಕಾರ್ಪಣೆ
ನಂತರ ಮಾತನಾಡಿದ ಅವರು “ಭೈರವೈಕ್ಯ ಪರಮಪೂಜ್ಯ ಜಗದ್ಗುರು ಶ್ರೀ ಶ್ರೀ ಶ್ರೀ ಡಾ. ಬಾಲಗಂಗಾಧರನಾಥ ಮಹಾಸ್ವಾಮೀಜಿ ಅವರ 78 ನೆಯ ಜಯಂತ್ಯೋತ್ಸವ ಸಂಸ್ಮರಣ ಕಾರ್ಯಕ್ರಮ ಹಾಗೂ ಮಂಗಳೂರು ಶಾಖಾಮಠ ಡಾ. ಶ್ರೀ ಧರ್ಮಪಾಲನಾಥ ಸ್ವಾಮೀಜಿ ಅವರು ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಮಂಡಿಸಿರುವ ಮಹಾಪ್ರಭಂದ ‘ ಸಂಸ್ಕೃತ – ಸಂಸ್ಕೃತಿಗೆ ಶ್ರೀ ಶ್ರೀ ಶ್ರೀ ಬಾಲಗಂಗಾಧರನಾಥ ಮಹಾಸ್ವಾಮೀಜಿ ಅವರ ಕೊಡುಗೆ ‘ ಒಂದು ಅಧ್ಯಯನ ಗ್ರಂಥವನ್ನು ಲೋಕಾರ್ಪಣೆ ಮಾಡಲಾಗುವುದು. ಈ ಕಾರ್ಯಕ್ರಮದಲ್ಲಿ ನಾಡಿನ ಮಠಾಧೀಶರು, ಸಾಹಿತಿಗಳು, ಸಾಧುಸಂತರು,ರಾಜಕೀಯ ನೇತಾರರು ಶ್ರೀ ಮಠದ ಸದ್ಭಕ್ತರು ಪಾಲ್ಗೊಳ್ಳಲಿದ್ದಾರೆ” ಎಂದವರು ತಿಳಿಸಿದರು.
20 ಮಂದಿ ತಲಾ ಒಂದು ಕೆಜಿ ಬೆಳ್ಳಿ:
ಜ.21 ರಂದು ಸುಳ್ಯದಿಂದ ಮದ್ಯಾಹ್ನ 2 ಗಂಟೆಗೆ ಸರಿಯಾಗಿ ವೆಂಕಟರಮಣ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ಮುಂಭಾಗದಿಂದ ಹಸಿರುವಾಣಿ ಕಾರ್ಯಕ್ರಮ ಜರುಗಲಿದೆ. ಈ ಹಸಿರುವಾಣಿ ಕಾರ್ಯಕ್ರಮದಲ್ಲಿ 150 ಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ವಾಹನಗಳು ಭಾಗವಹಿಸಲಿವೆ . ಬೆಳ್ಳಿಯ ತುಲಾಭಾರಕ್ಕೆ ಸುಳ್ಯ ತಾಲೂಕಿನಿಂದ 20 ಮಂದಿ ತಲಾ ಒಂದು ಕೆಜಿ ಬೆಳ್ಳಿ ನೀಡಲಿದ್ದಾರೆ ಎಂದು ಚಂದ್ರ ಕೋಲ್ಚಾರ್ ಹೇಳಿದರು.ಸುದ್ದಿಗೋಷ್ಠಿಯಲ್ಲಿ ಕಾರ್ಯಕ್ರಮದ ಸ್ವಾಗತ ಸಮಿತಿಯ ಸಂಚಾಲಕ ಎ.ವಿ.ತೀರ್ಥರಾಮ, ವಲಯ ಸಮಿತಿ ಸದಸ್ಯರಾದ ಡಾ.ಎನ್.ಎ.ಜ್ಞಾನೇಶ್, ದಿನೇಶ್ ಮಡಪ್ಪಾಡಿ ಉಪಸ್ಥಿತರಿದ್ದರು.