“ವಿವೇಕಾನಂದರಲ್ಲಿ ಪ್ರಶ್ನಿಸುವ ಗುಣವಿತ್ತು. ಅವರು ಪ್ರಖರವಾದ ತೇಜಸ್ಸನ್ನು ಹೊಂದಿದ್ದರು. ಅವರ ಜ್ಞಾನ ಮತ್ತು ಕಾರ್ಯಗಳು ಅಪಾರವಾಗಿದ್ದು ಹುಡುಕುವ ಅಂದರೆ ಜ್ಞಾನ ಸಂಗ್ರಹಿಸುವ ಗುಣ ಅವರನ್ನು ಶ್ರೇಷ್ಠರನ್ನಾಗಿಸಿತು. ಸತ್ಯ ಮತ್ತು ಜ್ಞಾನ ಸಂಗ್ರಹದ ಮೂಲಕ ಸಮಾಜಮುಖಿಯಾಗಿ ಬೆಳೆದಿದ್ದರು ಎಂದು ಸ್ನೇಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ. ಚಂದ್ರಶೇಖರ ದಾಮ್ಲೆಯವರು ಹೇಳಿದರು.ಅವರು ಸ್ನೇಹ ಶಿಕ್ಷಣ ಸಂಸ್ಥೆಯಲ್ಲಿ ನಡೆದ ಯುವ ದಿನಾಚರಣೆಯನ್ನು ಉದ್ದೇಶಿಸಿ ಮಾತನಾಡಿದರು.ಸ್ವಾಮಿ ವಿವೇಕಾನಂದ ಅವರು ಧೈರ್ಯವಂತ ಸ್ವಭಾವ ಹೊಂದಿದ್ದರಲ್ಲದೆ ಆತ್ಮಸ್ಥೈರ್ಯ ಅವರಲ್ಲಿ ಮನೆಮಾಡಿತ್ತು. ಮಾತ್ರವಲ್ಲದೆ ಪರಿತ್ಯಾಗಿಯಾಗಿ, ಸಂತನಾಗಿ ಭಾರತದ ಆಧ್ಯಾತ್ಮಿಕ ಸಂಸ್ಕೃತಿಯನ್ನು ಚಿಕಾಗೋ ಸಮ್ಮೇಳನದ ಮೂಲಕ ವಿಶ್ವದೆಲ್ಲೆಡೆ ಪರಿಚಯಿಸಿದವರೇ ಸ್ವಾಮಿ ವಿವೇಕಾನಂದರು. ಸಣ್ಣ ಪ್ರಾಯದಲ್ಲೇ ದೊಡ್ಡ ಸಾಧನೆ ಮಾಡಿದ ಅವರು ಯುವ ಜನರಿಗೆ ಸ್ಫೂರ್ತಿ ದಾಯಕ ವ್ಯಕ್ತಿಯಾಗಿದ್ದಾರೆ” ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಲಾ ಮುಖ್ಯೋಪಾಧ್ಯಾಯಿನಿ ಶೀಮತಿ ಜಯಲಕ್ಷ್ಮಿ ದಾಮ್ಲೆ ಯವರು ಮಾತನಾಡಿ ” ಸಂತನಂತಿದ್ದ ಸ್ವಾಮಿ ವಿವೇಕಾನಂದರು ಸರ್ವ ಮಾನ್ಯರು ಆಗಿದ್ದಾರೆ. ವಿಶ್ವ ಸರ್ವಧರ್ಮ ಸಮ್ಮೇಳನದ ಮೂಲಕ ಭಾರತದ ಹಿಂದೂ ಧರ್ಮದ ಪರಂಪರೆಯನ್ನು ಜಗತ್ತಿಗೆ ತಿಳಿಸಿಕೊಟ್ಟರು. ಅವರು ನಮಗೆಲ್ಲರಿಗೂ ಆದರ್ಶಪ್ರಾಯರಾಗಿದ್ದಾರೆ. ದೀನ ದಲಿತರ ಉನ್ನತಿಗಾಗಿ ರಾಮಕೃಷ್ಣ ಮಿಷನ್ ಸ್ಥಾಪಿಸಿದರು.ಆ ಮೂಲಕ ಸಾಮಾಜಿಕ ಜಾಗೃತಿ ಮತ್ತು ಉನ್ನತಿಗಾಗಿ ಶ್ರಮಿಸಿದ್ದಾರೆ” ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಶಿಕ್ಷಕ ದೇವಿಪ್ರಸಾದ ಜಿ ಸಿ ಸ್ವಾಗತಿಸಿದರು.ಶಿಕ್ಷಕಿ ಶ್ರೀಮತಿ ಹರಿಣಾಕ್ಷಿ ಪಿ.ಎ ವಂದಿಸಿದರು.ಶಿಕ್ಷಕಿ ಶ್ರೀಮತಿ ಸವಿತಾ ಎಂ ನಿರೂಪಿಸಿದರು.
“ಪ್ರಕೃತಿ ನಮಗೆ ಸರ್ವಸ್ವವನ್ನು ನೀಡಿದೆ. ಪ್ರಕೃತಿಯೇ ಅತಿ ದೊಡ್ಡ ಶಿಕ್ಷಕ. ಅದು ನಮಗೆ ಸ್ಪೂರ್ತಿ ಮತ್ತು ಹುಮ್ಮಸ್ಸನ್ನು ನೀಡುತ್ತದೆ. ಎಲ್ಲರೂ ಭೂಮಿಯ ಸಂರಕ್ಷಕರಾಗಬೇಕು. ನಮ್ಮಲ್ಲಿ ಹುದುಗಿರುವ ಆಸಕ್ತಿ ಮತ್ತು ಪ್ರತಿಭೆಯನ್ನು ಹೊರ ತರುವ ಕೆಲಸ ನಮ್ಮಿಂದಾಗಬೇಕು” ಎಂದು ಸ್ಮೃತಿವನದ ರೂವಾರಿ ಡಾ. ರಾಧಾಕೃಷ್ಣ ನಾಯರ್ ಹೇಳಿದರು.
ಅವರು ಜ.೧೦ರಂದು ಸ್ನೇಹ ಶಿಕ್ಷಣ ಸಂಸ್ಥೆಯಲ್ಲಿ ನಡೆದ ಪರಿಸರ ಸಂರಕ್ಷಣೆಯ ಪ್ರಬಂಧ ಸ್ಪರ್ಧೆಯ ಬಹುಮಾನ ವಿತರಣಾ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ, ಬಹುಮಾನದ ಪ್ರಾಯೋಜಕರಾಗಿ ಮಾತನಾಡಿದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಸಂಸ್ಥೆಯ ಅಧ್ಯಕ್ಷ ಡಾ. ಚಂದ್ರಶೇಖರ ದಾಮ್ಲೆಯವರು ವಿದ್ಯಾರ್ಥಿಗಳ ಪ್ರಬಂಧಗಳ ವಿಶ್ಲೇಷಣೆಯೊಂದಿಗೆ ಬಹುಮಾನ ವಿಜೇತರನ್ನು ಘೋಷಿಸಿದರು. ಜಗತ್ ಪಿ ವಿ (ಪ್ರಥಮ ₹೨೫೦೦/-), ಸಂದೇಶ್ ಕೆ ಆರ್ (ದ್ವಿತೀಯ ₹೧೫೦೦/-), ಜ್ಞಾನವಿ ಪಿ ಜೆ (ತೃತೀಯ ₹೧೦೦೦/-) ಬಹುಮಾನ ಪಡೆದುಕೊಂಡರು. ವೇದಿಕೆಯಲ್ಲಿ ಉಪಸ್ಥಿತರಿದ್ದ ಸಂಸ್ಥೆಯ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಜಯಲಕ್ಷ್ಮಿ ದಾಮ್ಲೆಯವರು ಸ್ವಾಗತಿಸಿದರು.ಶಾಲಾ ಶಿಕ್ಷಕ ದೇವಿಪ್ರಸಾದ ಜಿ ಸಿ ವಂದಿಸಿದರು.ಶಿಕ್ಷಕಿ ಸವಿತಾ ಎಂ ನಿರೂಪಿಸಿದರು.