ನ್ಯೂಸ್ ನಾಟೌಟ್ : ಅಧ್ಯಾಪಕರ ಎಡವಟ್ಟಿನಿಂದಾಗಿ ಮಕ್ಕಳಿಗೆ ಮೆದುಳು ಜ್ವರ ನಿಯಂತ್ರಣಕ್ಕೆ ಮುನ್ನೆಚ್ಚರಿಕೆಯಾಗಿ ಹಾಕಿಸುವ ಲಸಿಕೆಯನ್ನು ನಾಲ್ಕನೇ ತರಗತಿ ಶಾಲಾ ಬಾಲಕಿಯೊಬ್ಬಳಿಗೆ ಎರಡು ಸಲ ಹಾಕಿಸಿದ ಆರೋಪ ಕೇಳಿ ಬಂದಿದೆ. ಈ ಬೆನ್ನಲ್ಲೇ ಪೋಷಕರು ಸಹಿತ ಸಾರ್ವಜನಿಕರಿಂದ ಭಾರಿ ಆಕ್ರೋಶ ವ್ಯಕ್ತವಾಗಿದೆ ಎಂದು ನ್ಯೂಸ್ ನಾಟೌಟ್ ಗೆ ಮೂಲಗಳಿಂದ ತಿಳಿದು ಬಂದಿದೆ.
ಸುಳ್ಯ ತಾಲೂಕಿನ ಮುರುಳ್ಯ ಗ್ರಾಮದ ಬಾಲಕಿಯೊಬ್ಬಳು ಇತ್ತೀಚೆಗೆ ಶಾಲೆಯಲ್ಲಿ ಮೆದುಳು ಜ್ವರಕ್ಕೆ ನೀಡಲಾಗುವ ಲಸಿಕೆಯನ್ನು ಎಲ್ಲ ಮಕ್ಕಳೊಂದಿಗೆ ಪಡೆದುಕೊಂಡಿದ್ದಾಳೆ. ನಂತರದಲ್ಲಿ ಲಸಿಕೆ ನೀಡಿದ ದಿನದಂದು ಯಾವ ಮಕ್ಕಳು ಬರಲಿಲ್ಲವೋ ಅಂತಹ ಮಕ್ಕಳಿಗೆ ಮತ್ತೆ ಲಸಿಕೆ ನೀಡಲಾಗಿದೆ. ಹೀಗೆ ಲಸಿಕೆ ಪಡೆಯದ ಮಕ್ಕಳ ಪಟ್ಟಿಯಲ್ಲಿ ಮೊದಲು ಲಸಿಕೆ ಪಡೆದಿರುವ ಬಾಲಕಿಯ ಹೆಸರನ್ನೂ ಸೇರಿಸಿ ಶಾಲೆಯಿಂದ ಕಳುಹಿಸಿಕೊಡಲಾಗಿದೆ ಎಂದು ನ್ಯೂಸ್ ನಾಟೌಟ್ ಗೆ ಮೂಲಗಳು ತಿಳಿಸಿವೆ.
ಎರಡನೇ ಸಲ ಲಸಿಕೆ ಪಡೆಯುತ್ತಿದ್ದಂತೆ ಮಗುವಿನ ಆರೋಗ್ಯದಲ್ಲಿ ಭಾರಿ ವ್ಯತ್ಯಯವಾಗಿದೆ. ತೀವ್ರ ಜ್ವರ ಹಾಗೂ ನಡೆದಾಡಲು ಸಾಧ್ಯವಾಗದಿರುವ ಪರಿಸ್ಥಿತಿಯಲ್ಲಿದ್ದ ಮಗುವನ್ನು ಕಂಡು ಪೋಷಕರು ಗಾಬರಿಯಾಗಿದ್ದಾರೆ. ತಡಮಾಡದೆ ಹತ್ತಿರದ ಆಸ್ಪತ್ರೆಗೆ ಸೇರಿಸಿದ್ದಾರೆ. ಮಗುವಿನ ಕಣ್ಣುಗಳು ದಪ್ಪಗಾಗಿದ್ದು ಸದ್ಯ ಸುಳ್ಯ ಸರಕಾರಿ ಆಸ್ಪತ್ರೆಯಲ್ಲಿಚಿಕಿತ್ಸೆ ನೀಡಲಾಗುತ್ತಿದೆ. ಮಗು ಚೇತರಿಸಿಕೊಳ್ಳುತ್ತಿದೆ ಎಂದು ತಿಳಿದು ಬಂದಿದೆ.
ಮಗುವಿನ ಆರೋಗ್ಯದಲ್ಲಿ ಏರುಪೇರಾಗಿದ್ದು ತಿಳಿದು ಯಾರಿಗೂ ಹೇಳಬೇಡ ಎಂದು ಶಿಕ್ಷಕರು 100 ರೂ. ಕೊಟ್ಟಿದ್ದಾರೆ ಎಂದು ಆರೋಪಿಸಲಾಗಿದೆ. ಇನ್ನೂ ಎಳೆಯ ಮಗುವಿನ ಭವಿಷ್ಯದಲ್ಲಿ ಶಿಕ್ಷಕರೇ ಇಂತಹ ಆಟ ಆಡಿರುವುದು ವಿಪರ್ಯಾಸವೇ ಸರಿ ಅನ್ನುವ ಅಭಿಪ್ರಾಯ ವ್ಯಕ್ತವಾಗುತ್ತಿದೆ. ಕ್ಷೇತ್ರ ಶಿಕ್ಷಣಾಧಿಕಾರಿಗಳು ಸಂಬಂಧಪಟ್ಟವರನ್ನು ವಿಚಾರಿಸಿ ಅವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವ ಅವಶ್ಯಕತೆ ಇದೆ.