ನ್ಯೂಸ್ ನಾಟೌಟ್ : ಕರಾವಳಿ ಅಡಿಕೆ ಬೆಳೆಗಾರರಿಗೆ ಸಂಕಷ್ಟ ಎದುರಾಗಿದೆ. ಅದರಲ್ಲೂ ಸುಳ್ಯ ಭಾಗದವರಂತು ಅಡಿಕೆಗೆ ಬಾಧಿಸಿದ ವಿವಿಧ ರೋಗಗಳಿಂದ ತತ್ತರಿಸಿ ಹೋಗಿದ್ದಾರೆ.ಲಕ್ಷಾಂತರ ರೂಪಾಯಿ ಸಾಲ ಮಾಡಿ ಅಡಿಕೆ ಕೃಷಿ ಮಾಡಿದ ರೈತರಿಗೆ ಹಳದಿ ಎಲೆರೋಗ, ಎಲೆ ಚುಕ್ಕಿ ರೋಗ ಎನ್ನುವ ಹೊಸ ರೋಗವು ಬೆಂಬಿಡದೇ ಕಾಡುತ್ತಿದೆ. ಹೊಸ ರೋಗದಿಂದ ಅಡಿಕೆ ಸಸಿಗಳು ಹಾಳಾಗುತ್ತಿವೆ. ಅಡಿಕೆ ಸಸಿಗಳಿಗೆ ಎಲೆಚುಕ್ಕಿ ಹೊಡೆತದಿಂದಾಗಿ ರೈತರು ಕಂಗಾಲಾಗಿದ್ದಾರೆ.ಆದರೂ ಇದರ ನಿವಾರಣೆಗೆ ಶತಪ್ರಯತ್ನಗಳು ನಡಿತಿವೆ.ಇದಕ್ಕಾಗಿ ರೈತರು ಔಷಧಿ ಸಿಂಪಡಣೆ ಮಾಡುತ್ತಿದ್ದಾರೆ.ಆದರೆ ರೈತರಿಗೆ ಎದುರಾಗುತ್ತಿರುವ ಇನ್ನೊಂದು ಸಮಸ್ಯೆಯೆಂದರೆ ಕಾರ್ಮಿಕರ ಕೊರತೆ.ಇದಕ್ಕಾಗಿ ಇದೀಗ ಡ್ರೋನ್ ತಂತ್ರಜ್ಞಾನ ಬಂದಿದ್ದು,ಔಷಧಿ ಸಿಂಪಡಣೆಗೆ ಇದು ಅನುಕೂಲವಾಗಲಿದೆ.ಈ ಪ್ರಯೋಗ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದಲ್ಲಿ ಪ್ರಥಮವಾಗಿ ನಡಿತಿದೆ.
ಇದೊಂದು ಉತ್ತಮ ಪ್ರಯೋಗ:
ಈ ಸುಧಾರಿತ ತಂತ್ರಜ್ಞಾನದಿಂದ ಔಷಧಿ ಸಿಂಪಡಣೆ ಮಾಡಲಾಗುತ್ತಿದ್ದು,ಅದೀಗ ನೆರವಿಗೆ ಬರುತ್ತಿದೆ. ಕಳಂಜ ಗ್ರಾಮದ ಗಿರಿಕೃಪಾ ಫಾರ್ಮ್ ನ ಸುದರ್ಶನ ಕೋಟೆ ಅವರು ಡ್ರೋನ್ ಪ್ರಾಯೋಗಿಕ ಬಳಕೆಗೆ ಮುಂದಾಗಿರುವ ಕೃಷಿಕ.ಇದರಿಂದ ಕೃಷಿಕರು ಕೊಂಚ ಮಟ್ಟಿಗೆ ನಿರಾಳರಾಗಿದ್ದಾರೆ.ಆದರೆ ಫಲಿತಾಂಶ ಇನ್ನಷ್ಟೇ ಹೊರಬರಬೇಕಿದೆ. ಇದೊಂದು ಉತ್ತಮ ಪ್ರಯೋಗ ಎಂಬುದು ಕೃಷಿಕರ ಅಭಿಪ್ರಾಯ. ಮಲ್ಟಿಪ್ಲೆಕ್ಸ್ ಎಂಬ ಸಂಸ್ಥೆಯವರ ಡ್ರೋನ್ ಬಳಕೆಯಾಗುತ್ತಿದ್ದು, 10 ಲೀಟರ್ ಸಾಮರ್ಥ್ಯದ ಟ್ಯಾಂಕ್ ಇದು ಹೊಂದಿದೆ. ಔಷಧ ತುಂಬಿದ ಬಳಿಕ ಒಟ್ಟು ತೂಕ 25 ಕೆ.ಜಿ. ಆಗುತ್ತೆ. 10 ಲೀಟರ್ ಔಷಧವನ್ನು ಅರ್ಧ ಎಕ್ರೆ ತೋಟಕ್ಕೆ 15 ನಿಮಿಷಗಳಲ್ಲಿ ಸಿಂಪಡಿಸಬಹುದು. ಡ್ರೋನ್ ಅಡಿಕೆ ಮರಗಳ ಮೇಲ್ಭಾಗಕ್ಕೆ ತೆರಳಿ ಎಲೆಗಳ ಮೇಲೆ ಔಷಧ ಸಿಂಪಡಿಸುತ್ತದೆ. ಆದರೆ ಇದು ಅಡಿಕೆ ಎಲೆಗೆ ಔಷಧ ಸಿಂಪಡಿಸಲಷ್ಟೇ ಸಹಕಾರಿ. ಸಿಂಗಾರ, ಗೊಂಚಲಿಗೆ ಸಿಂಪಡಿಸಲು ಸಾಧ್ಯವಾಗುತ್ತಿಲ್ಲ. ಸುಧಾರಣೆ ಕಂಡಲ್ಲಿ ಕೃಷಿಕರಿಗೆ ಇನ್ನಷ್ಟು ಸಹಕಾರಿಯಾಗಲಿದೆ.
ಲಾಭಗಳು:
ಡ್ರೋನ್ ಮೂಲಕ ಔಷಧ ಸಿಂಪಡಣೆಗೆ ಕಡಿಮೆ ಖರ್ಚು ತಗಲುತ್ತದೆ. ಕಡಿಮೆ ಸಮಯದಲ್ಲಿ ಮದ್ದು ಸಿಂಪಡಣೆ ಮಾಡಬಹುದು.ಇದಕ್ಕೆ ಬಾರಿ ಬೇಡಿಕೆ ವ್ಯಕ್ತವಾಗಿದೆ. ಸಂಸ್ಥೆಯವರು ಜಿಲ್ಲೆಗೆ 3 ಡ್ರೋನ್ ನೀಡಲಿದ್ದಾರೆ ಎನ್ನಲಾಗಿದೆ. ಸುಳ್ಯ ತಾಲೂಕಿನ ಕಳಂಜ, ಅಮರಮುಡ್ನೂರು, ಅಮರಪಡ್ನೂರು, ಮರ್ಕಂಜ, ದೊಡ್ಡತೋಟ, ಪಂಜ, ಬಳ್ಳ, ಯೇನೆಕಲ್ಲು, ಸುಬ್ರಹ್ಮಣ್ಯ ಭಾಗದ ಕೃಷಿಕರೂ ಈಗಾಗಲೇ ಔಷಧ ಸಿಂಪಡಣೆಗೆ ಡ್ರೋನ್ ಕಾದಿರಿಸಿದ್ದಾರೆ ಎಂದು ತಿಳಿದು ಬಂದಿದೆ.