ನ್ಯೂಸ್ ನಾಟೌಟ್: ನೀವು ಉದ್ಯೋಗ ಹುಡುಕಾಟದಲ್ಲಿದ್ದೀರಾ? ಹಾಗಾದರೆ ನೀವು ಇಲ್ಲಿ ತಿಳಿಸಲಾದ ಕೆಲಸಕ್ಕೆ ಅರ್ಜಿ ಸಲ್ಲಿಸಬಹುದು.ದಿ. ಭಾರತ್ ಕೋ-ಆಪರೇಟಿವ್ ಬ್ಯಾಂಕ್ ಲಿ. ಜಯನಗರ ಬೆಂಗಳೂರು ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ. ವೆಬ್ಸೈಟ್ ಮೂಲಕ ಅರ್ಜಿ ಡೌನ್ಲೋಡ್ ಮಾಡಿಕೊಂಡು ಸಲ್ಲಿಸಬೇಕು. ಅರ್ಜಿ ಸಲ್ಲಿಕೆಗೆ 27/1/2023 ಕೊನೆಯ ದಿನವಾಗಿದೆ.ಒಟ್ಟು 22 ಹುದ್ದೆಗಳನ್ನು ಲಿಖಿತ ಪರೀಕ್ಷೆ ಹಾಗೂ ಸಂದರ್ಶನದ ಮೂಲಕ ಭರ್ತಿ ಮಾಡಲಾಗುತ್ತಿದೆ.
ಅಭ್ಯರ್ಥಿಗಳು ಬ್ಯಾಂಕ್ ವೆಬ್ಸೈಟ್ಗೆ ಭೇಟಿ ನೀಡಿ ಅರ್ಜಿಗಳನ್ನು ಪಡೆಯಬೇಕು. ಖುದ್ದಾಗಿ/ ಅಂಚೆ/ ಕೊರಿಯರ್ ಮೂಲಕ ಅರ್ಜಿಗಳನ್ನು ಸಲ್ಲಿಕೆ ಮಾಡಬಹುದು. ಅರ್ಜಿಗಳನ್ನು 27/1/2023ರ ಸಂಜೆ 5 ಗಂಟೆಯೊಳಗೆ ಸಲ್ಲಿಸಬೇಕು.ಲಿಖಿತ ಪರೀಕ್ಷೆಗೆ ಅರ್ಹರಿರುವ ಅಭ್ಯರ್ಥಿಗಳಿಗೆ ಪ್ರವೇಶ ಪತ್ರ ಹಾಗೂ ಲಿಖಿತ ಪರೀಕ್ಷೆಯ ದಿನಾಂಕ, ಸ್ಥಳ, ಸಮಯವನ್ನು ಅಧಿಕೃತ ವೆಬ್ಸೈಟ್ ಮೂಲಕ ತಿಳಿಸಲಾಗುತ್ತದೆ. ಅರ್ಹ ಅಭ್ಯರ್ಥಿಗಳಿಗೆ ಲಿಖಿತ ಪರೀಕ್ಷೆ ಪ್ರವೇಶ ಪತ್ರಗಳನ್ನು ಅಂಚೆ ಮೂಲಕ ಅಭ್ಯರ್ಥಿಗಳು ನೀಡಿದ ಇ-ಮೇಲ್ ವಿಳಾಸಕ್ಕೆ ಕಳಿಸಲಾಗುತ್ತದೆ ಎಂದು ತಿಳಿಸಲಾಗಿದೆ.
ಯಾವ-ಯಾವ ಹುದ್ದೆಗಳು?
ಮುಖ್ಯ ಕಾರ್ಯ ನಿರ್ವಹಣಾಧಿಕಾರಿ (1), ಹಿರಿಯ ವ್ಯವಸ್ಥಾಪಕರು (1), ಕಂಪ್ಯೂಟರ್ ಮ್ಯಾನೇಜರ್ (ಸಿಸ್ಟಂ ಅಡ್ಮಿನಿಸ್ಟ್ರೇಟರ್ ಮುಖ್ಯಸ್ಥ) 1, ವ್ಯವಸ್ಥಾಪಕರು (3), ಅಕೌಟೆಂಟ್ (2), ಅಸಿಸ್ಟೆಂಟ್ ಅಕೌಟೆಂಟ್ (2), ದ್ವಿತೀಯ ದರ್ಜೆ ಸಹಾಯಕರು (2), ಅಟೆಂಡರ್ (10) ಸೇರಿದಂತೆ ಒಟ್ಟು 22 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಅರ್ಜಿಸಲ್ಲಿಸುವ ಅಭ್ಯರ್ಥಿಗಳಿಗೆ ಕನ್ನಡದಲ್ಲಿ ವ್ಯವಹಾರ ಜ್ಞಾನ, ಸ್ಪಷ್ಟವಾಗಿ ಓದಲು, ಬರೆಯಲು ಬರಬೇಕು. ಅಭ್ಯರ್ಥಿ ಭಾರತೀಯ ನಾಗರಿಕನಾಗಿದ್ದು, ಕನಿಷ್ಠ 10 ವರ್ಷ ಕರ್ನಾಟಕದಲ್ಲಿ ವಾಸವಾಗಿರಬೇಕು.
ವೇತನ ಶ್ರೇಣಿಗಳ ವಿವರ
ಮುಖ್ಯ ಕಾರ್ಯ ನಿರ್ವಹಣಾಧಿಕಾರಿ 40,050-56,550 ಹಿರಿಯ ವ್ಯವಸ್ಥಾಪಕರು 36,300-53,850, ಕಂಪ್ಯೂಟರ್ ಮ್ಯಾನೇಜರ್ 28,100-50,100, ವ್ಯವಸ್ಥಾಪಕರು 28,100-50,100, ಅಕೌಟೆಂಟ್ 24,000-45,300, ಅಸಿಸ್ಟೆಂಟ್ ಅಕೌಟೆಂಟ್ 21,600-40,050, ದ್ವಿತೀಯ ದರ್ಜೆ ಸಹಾಯಕರು 17,650-32,000, ಅಟೆಂಡರ್ 12,500-24,000 ರೂ.ಗಳು. ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡದ ಅಭ್ಯರ್ಥಿಗಳು, ಇತರೆ ಹಿಂದುಳಿದ ವರ್ಗಗಳ ಅಭ್ಯರ್ಥಿಗಳು ಮೀಸಲಾತಿಗಾಗಿ ಜಾತಿ ಪ್ರಮಾಣ ಪತ್ರಗಳನ್ನು ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕದೊಳಗೆ ಸಂಬಂಧಿಸಿದ ಪ್ರಾಧಿಕಾರದಿಂದ ಪಡೆದು ಸಲ್ಲಿಸಬೇಕು.
ಅರ್ಜಿ ಶುಲ್ಕದ ವಿವರಗಳು
ಅರ್ಜಿಗಳನ್ನು ಸಲ್ಲಿಕೆ ಮಾಡುವ ಸಾಮಾನ್ಯ ಹಾಗೂ ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ 1000 ರೂ. ಶುಲ್ಕ ನಿಗದಿ ಮಾಡಲಾಗಿದೆ. ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ/ ಹಿಂದುಳಿದ ವರ್ಗ-1ರ ಅಭ್ಯರ್ಥಿಗಳಿಗೆ ರೂ. 500. ಅರ್ಜಿ ಶುಲ್ಕವನ್ನು ದಿ ಭಾರತ್ ಕೋ-ಆಪರೇಟಿವ್ ಬ್ಯಾಂಕ್ ಲಿ. ಇವರ ಹೆಸರಿಗೆ ಡಿಡಿ/ ಪೇ ಆರ್ಡರ್ಸ್/ ಪೋಸ್ಟಲ್ ಆರ್ಡರ್ಸ್ ಮೂಲಕ ಪಾವತಿ ಮಾಡಬೇಕು. ಒಮ್ಮೆ ಸಲ್ಲಿಕೆ ಮಾಡಿದ ಅರ್ಜಿ ಶುಲ್ಕವನ್ನು ಯಾವುದೇ ಕಾರಣಕ್ಕೂ ವಾಪಸ್ ನೀಡುವುದಿಲ್ಲ. ಅಭ್ಯರ್ಥಿಗಳ ಆಯ್ಕೆಯಲ್ಲಿ ಬ್ಯಾಂಕಿನ ನೇಮಕಾತಿ ಪ್ರಾಧಿಕಾರದ ಶಿಫಾರಸಿನಂತೆ ಆಡಳಿತ ಮಂಡಳಿಯೇ ತೀರ್ಮಾನವೇ ಅಂತಿಮವಾಗಿರುತ್ತದೆ.