ನ್ಯೂಸ್ ನಾಟೌಟ್:ಕಳಪೆ ರೈಸ್ ಬಗ್ಗೆ ಕೇಳಿದ್ದೇವೆ.ಆದರೆ ಇದೇನಿದು ಪ್ಲಾಸ್ಟಿಕ್ ರೈಸ್? ಅದು ಕೂಡ ಶಾಲಾ ಮಕ್ಕಳಿಗಾಗಿ ಬಿಸಿಯೂಟಕ್ಕೆಂದು ಸರಬರಾಜಾಗಿರುವ ಅಕ್ಕಿಯಲ್ಲಿ ಕಂಡು ಬಂದ ಭಯಾನಕ ವಿಷಯ.ಬಿಸಿ ಊಟದ ಅಕ್ಕಿಯಲ್ಲೂ ದಂಧೆ ನಡೆಯುತ್ತಿದೆಯಾ? ಹೌದು, ಕೊಡಗು ಜಿಲ್ಲೆಯ ಮಡಿಕೇರಿ ನಗರದ ಸರ್ಕಾರಿ ಪ್ರೌಢಶಾಲೆಯಲ್ಲಿ ಪ್ಲಾಸ್ಟಿಕ್ ಮಿಶ್ರಿತ ಅಕ್ಕಿ ಪತ್ತೆಯಾಗಿದ್ದು, ಪೋಷಕರಲ್ಲಿ ಆತಂಕ ಉಂಟು ಮಾಡಿದೆ. ಬಿಸಿಯೂಟಕ್ಕೆ ಕಲಬೆರಕೆ ಅಕ್ಕಿ ಪೂರೈಕೆ ಮಾಡುತ್ತಿರುವ ಬಗ್ಗೆ ಕೊಡಗು ಜಿಲ್ಲಾಧಿಕಾರಿಗೆ ಪೋಷಕರೂ ಆಗಿರುವ ಮಡಿಕೇರಿ ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗದ ಅಧ್ಯಕ್ಷ ಚಂದ್ರಶೇಖರ ಆರ್.ಪಿ ದೂರು ನೀಡಿರುವ ಬಗ್ಗೆ ವರದಿಯಾಗಿದೆ.
ಕಲಬೆರಕೆ ಪತ್ತೆ:
ಮಕ್ಕಳು ಊಟ ಮಾಡುವ ಅಕ್ಕಿಯಲ್ಲಿ ಪ್ಲಾಸ್ಟಿಕ್ ರೈಸ್ ತೇಲಾಡುತ್ತಿದೆ.ಅಕ್ಕಿ ತೊಳೆಯುತ್ತಿರುವ ಸಂದರ್ಭ ಈ ಭಯಾನಕ ವಿಷಯ ಬೆಳಕಿಗೆ ಬಂದಿದೆ. ಈ ಬಗ್ಗೆ ಪೋಷಕರು ಭಯಭೀತರಾಗಿದ್ದಾರೆ.ಈ ರೀತಿ ಪ್ಲಾಸ್ಟಿಕ್ ತೇಲಾಡುತ್ತಿದ್ದರೆ ಮಕ್ಕಳನ್ನು ಶಾಲೆಗೆ ಕಳುಹಿಸುವುದಕ್ಕು ಭಯವಾಗುತ್ತಿದೆ ಎಂದು ಪೋಷಕರು ಅಳಲು ತೋಡಿಕೊಂಡಿದ್ದಾರೆ. ಕೊಡಗು ಜಿಲ್ಲೆ ಮಡಿಕೇರಿಯ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪೌಢಶಾಲಾ ವಿಭಾಗಕ್ಕೆ ಸರಬರಾಜು ಮಾಡಲಾದ ಬಿಸಿಯೂಟದ ಅಕ್ಕಿಯ ನಡುವೆ ಅಲ್ಲಲ್ಲಿ ಪ್ಲಾಸ್ಟಿಕ್ ಮಣಿಯಂಥ ವಸ್ತುಗಳು ಸಿಕ್ಕಿವೆ. ಇದು ಜಿಲ್ಲೆಯಲ್ಲಿನ ಶಾಲೆಗಳ ಆಡಳಿತ ಮಂಡಳಿಗಳಿಗೆ ಹೊಸ ತಲೆನೋವು ಶುರುವಾಗಿದೆ.
ತಪ್ಪಿದ ಅನಾಹುತ:
ಬಿಸಿಯೂಟಕ್ಕೆ ಸರಬರಾಜಾದ ಅಕ್ಕಿಯನ್ನು ಶಿಕ್ಷಕರು ಪರಿಶೀಲಿಸಿದಾಗ ಶಾಲೆಗೆ ರವಾನೆಯಾದ ಒಂದು ಮೂಟೆಯಲ್ಲಿ ಈ ರೀತಿಯ ಅಕ್ಕಿಯ ರೂಪದಲ್ಲಿರುವ ಮಣಿಗಳು ಪತ್ತೆಯಾಗಿದೆ.ಪ್ಲಾಸ್ಟಿಕ್ ಅಕ್ಕಿ ಪತ್ತೆಯಾದ ಬಗ್ಗೆ ಅಧಿಕಾರಿಗಳಿಗೆ ಎಸ್ಡಿಎಂಸಿ ಕಡೆಯಿಂದ ದೂರು ಹೋಗಿದೆ. ಒಂದು ವೇಳೆ ಅಡುಗೆ ಸಿಬ್ಬಂದಿಗಳು ಸರಿಯಾಗಿ ಗಮನಿಸದೆ ಅಡುಗೆ ಮಾಡಿದಲ್ಲಿ ದೊಡ್ಡದೊಂದು ಅನಾಹುತ ನಡೆಯುತಿತ್ತು ಎಂದು ಪೋಷಕರು ಹೇಳಿದ್ದಾರೆ. ಮಡಿಕೇರಿಯ ಸರ್ಕಾರಿ ಪ್ರೌಢಶಾಲೆಯಲ್ಲಿ 200ಕ್ಕೂ ಹೆಚ್ಚು ವಿದ್ಯಾರ್ಥಿಗಳಿದ್ದು ಎಲ್ಲರೂ ಬಡ ಕುಟುಂಬಕ್ಕೆ ಸೇರಿದವರು. ಈ ಬಡ ಮಕ್ಕಳ ಬಿಸಿಯೂಟದ ಅಕ್ಕಿಯನ್ನೂ ಕೂಡ ಕಲಬೆರಕೆ ಮಾಡಿ ಪೂರೈಸುತ್ತಿರುವುದು ದುರಂತವೆಂದು ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಎರಡು ವಾರದ ಹಿಂದೆಯಷ್ಟೇ ಬಂದ ಅಕ್ಕಿಯ ಒಂದು ಚೀಲದಲ್ಲಿ ಈ ರೀತಿಯ ಮಣಿಗಳು ಪತ್ತೆಯಾಗಿವೆ.ಈ ಬಗ್ಗೆ ಶಾಲಾ ಆಡಳಿತ ಹಾಗೂ ಎಸ್ಡಿಎಂಸಿ ಉನ್ನತ ಮಟ್ಟದ ಅಧಿಕಾರಿಗಳ ಗಮನಕ್ಕೂ ತಂದಿದ್ದು ಸರಬರಾಜಾದ ಅಕ್ಕಿಯನ್ನ ಹಿಂದಿರುಗಿಸಲಾಗಿದೆ ಎಂದು ತಿಳಿದುಬಂದಿದೆ.