ನ್ಯೂಸ್ ನಾಟೌಟ್: ಮತ್ತೊಮ್ಮೆ ಕರ್ನಾಟಕಕ್ಕೆ ಪ್ರಧಾನಿ ನರೇಂದ್ರ ಮೋದಿ ಆಗಮಿಸುತ್ತಿದ್ದಾರೆ. ಚುನಾವಣೆ ಹೊಸ್ತಿಲಲ್ಲಿ ಕಾಲಿಗೆ ಚಕ್ರ ಕಟ್ಟಿಕೊಂಡಂತೆ ಬಿಜೆಪಿ ನಾಯಕರು ರಾಜ್ಯಾದ್ಯಂತ ಸಂಚರಿಸುತ್ತಿದ್ದಾರೆ. ಅಮಿತ್ ಶಾ, ನಡ್ಡಾ, ಗಡ್ಕರಿ ಬಳಿಕ ಈಗ ಪ್ರಧಾನಿ ಮೋದಿ ಕರ್ನಾಟಕಕ್ಕೆ ಬರುತ್ತಿರುವುದು ವಿಶೇಷವಾಗಿದೆ.
ಸ್ವಾಮಿ ವಿವೇಕಾನಂದರ ಜಯಂತಿ ನಿಮಿತ್ತ ಧಾರವಾಡದಲ್ಲಿ 26 ನೇ ರಾಷ್ಟ್ರೀಯ ಯುವಜನೋತ್ಸವ ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮ ಉದ್ಘಾಟನೆಗೆಂದು ಆಗಮಿಸಿಸೋ ನಮೋ ಸ್ವಾಗತಕ್ಕೆ ಧಾರವಾಡ ಜಿಲ್ಲೆ ಸಕಲ ರೀತಿಯಲ್ಲಿ ಸಜ್ಜಾಗಿದೆ. ಇಂದಿನಿಂದ 4 ದಿನಗಳ ಕಾಲ ನಡೆಯುವ ರಾಷ್ಟ್ರೀಯ ಯುವ ಜನೋತ್ಸವಕ್ಕೆ ಇಂದು ಸಂಜೆ 4 ಗಂಟೆಗೆ ಪ್ರಧಾನಿ ಮೋದಿಯವರು ಚಾಲನೆ ನೀಡಿದ್ದಾರೆ. ಕಾರ್ಯಕ್ರಮಕ್ಕಾಗಿ ರೈಲ್ವೆ ಮೈದಾನದಲ್ಲಿ ಬೃಹತ್ ವೇದಿಕೆ ನಿರ್ಮಾಣ ಮಾಡಲಾಗಿದ್ದು, 30 ಸಾವಿರ ಜನಕ್ಕೆ ಆಸನದ ವ್ಯವಸ್ಥೆ ಕಲ್ಪಿಸಲಾಗಿದೆ. ಮೋದಿ ಕಾರ್ಯಕ್ರಮಕ್ಕೂ ಮುನ್ನ ದೇಶದ ಯುವ ಸಾಂಸ್ಕೃತಿಕ ಗತವೈಭವ ಅನಾವರಣಗೊಳಲಿದ್ದು, ವಿವಿಧ ರಾಜ್ಯದ ಜಾನಪದ ಕಲೆ, ಯೋಗಾ, ಮಲ್ಲಗಂಭ ಪ್ರದರ್ಶನ ನಡೆಯಲಿದೆ. 28 ರಾಜ್ಯದ 6 ಕೇಂದ್ರಾಡಳಿತ ಪ್ರದೇಶಗಳ ವಾಕ್‍ಥಾನ್ ನಡೆಯಲಿದೆ. ಬಳಿಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮೋದಿ ದೇಶದ ಜನರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಮೋದಿ ಕಾರ್ಯಕ್ರಮದಲ್ಲಿ ರಾಜ್ಯಪಾಲ ಗೆಹ್ಲೋಟ್, ಸಿಎಂ ಬೊಮ್ಮಾಯಿ, ಕೇಂದ್ರ ಕ್ರೀಡಾ ಸಚಿವ ಅನುರಾಗ್ ಸಿಂಗ್ ಠಾಕೂರ್, ಸಂಸದೀಯ ವ್ಯವಹಾರ ಸಚಿವ ಪ್ರಹ್ಲಾದ್ ಜೋಶಿ, ಸೇರಿ ಹಲವರು ಭಾಗಿಯಾಗಲಿದ್ದಾರೆ.
ಮಧ್ಯಾಹ್ನ 3.40ಕ್ಕೆ ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಬರುವ ಪ್ರಧಾನಿ ಮೋದಿಗೆ ಸಿಎಂ ಬೊಮ್ಮಾಯಿ ಸ್ವಾಗತ ನೀಡಲಿದ್ದಾರೆ. 3.45 ರಿಂದ 4 ಗಂಟೆ ವರೆಗೂ 15 ನಿಮಿಷ ರೋಡ್ ಶೋ ಮಾಡಲಿದ್ದಾರೆ. ಮಾರ್ಗ ಮಧ್ಯೆ ಐದು ಕಡೆ ಮೋದಿ ವಾಹನ ನಿಲ್ಲಿಸೋ ಸಾಧ್ಯತೆ ಇದ್ದು, ವಾಹನ ನಿಲ್ಲಿಸಿ ಜನರತ್ತ ಮೋದಿ ಕೈಬೀಸಲಿದ್ದಾರೆ. ಏರಪೋರ್ಟ್‍ನಿಂದ ಗೋಕುಲ್ ರೋಡ್, ಅಕ್ಷಯಪಾರ್ಕ್, ಹೊಸೂರು ಸರ್ಕಲ್, ದೇಶಪಾಂಡೆ ನಗರ,ಕೋರ್ಟ್ ಸರ್ಕಲ್ ಮೂಲಕ ರೇಲ್ವೆ ಮೈದಾನಕ್ಕೆ ಆಗಮಿಸಲಿದ್ದಾರೆ. 4 ಗಂಟೆಗೆ ವೇದಿಕೆ ಕಾರ್ಯಕ್ರಮ ಆರಂಭವಾಗಲಿದ್ದು, ಮೋದಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ 5.15 ಕಾರ್ಯಕ್ರಮ ಮುಕ್ತಾಯವಾಗಲಿದೆ.
ಹುಬ್ಬಳ್ಳಿಗೆ ಬರುತ್ತಿರುವ ಪ್ರಧಾನಿ ಮೋದಿಗಾಗಿ ಬಿದರಿ ಕಲೆಯಲ್ಲಿ ಅರಳಿದ ಸ್ವಾಮಿ ವಿವೇಕಾನಂದರ ಮನಮೋಹಕ ಮೂರ್ತಿಯನ್ನು ಸ್ಮರಣಿಯಾಗಿ ನೀಡಿ ಗೌರವಿಸಲಾಗುತ್ತಿದೆ. ಧಾರವಾಡ ಜಿಲ್ಲೆಯ ಗರಗ ಹಾಗೂ ಬೆಂಗೇರಿಯಲ್ಲಿ ತಯಾರಿಸಲಾದ ತಿರಂಗವನ್ನು ಸಹ ಉಡುಗೊರೆಯಾಗಿ ನೀಡಿ ಗೌರವಿಸಲಾಗುತ್ತಿದೆ. ಹಾವೇರಿಯ ಏಲಕ್ಕಿ ಹಾರವನ್ನು ಸಿದ್ಧಪಡಿಸಲಾಗಿದೆ.