ನ್ಯೂಸ್ ನಾಟೌಟ್ :ಕನ್ನಡದ ಖ್ಯಾತ ಲೇಖಕಿ ನಾಡೋಜ ಸಾರಾ ಅಬೂಬಕ್ಕರ್ ನಿಧನರಾಗಿದ್ದಾರೆ. 87 ವರ್ಷದ ಸಾರಾ ಅಬೂಬಕರ್ ಅನಾರೋಗ್ಯದಿಂದಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ಅವರಿಗೆ ರಾಜ್ಯೋತ್ಸವ ಪ್ರಶಸ್ತಿ, ನಾಡೋಜ ಗೌರವ ಸೇರಿದಂತೆ ಹಲವು ಪ್ರಶಸ್ತಿ ಪುರಸ್ಕಾರಗಳು ಬಂದಿವೆ. ಪ್ರಕಾಶಕಿಯೂ ಆಗಿದ್ದ ಅವರು ಚಂದ್ರಗಿರಿ ಪ್ರಕಾಶನದ ಮೂಲಕ ಅನೇಕ ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ಮಂಗಳೂರು ವಿಶ್ವವಿದ್ಯಾಲಯವು ಅವರಿಗೆ 2008ರಲ್ಲಿ ಗೌರವ ಡಾಕ್ಟರೇಟ್ ನೀಡಿತ್ತು.ಮೃತರು ನಾಲ್ವರು ಪುತ್ರರು ಹಾಗೂ ಅಪಾರ ಅಭಿಮಾನಿಗಳನ್ನು ಅಗಲಿದ್ದಾರೆ. ಕನ್ನಡದ ಪ್ರಖ್ಯಾತ ಲೇಖಕಿ ಸಾರಾ ಅಬೂಬಕ್ಕರ್ ಅವರು ಜೂನ್ 30, 1936 ರಂದು ಕಾಸರಗೋಡಿನ ಚಂದ್ರಗಿರಿ ತೀರದ ಗ್ರಾಮವೊಂದರಲ್ಲಿ ಜನಿಸಿದರು. ವಿವಾಹದ ನಂತರ ಮಂಗಳೂರಿನ ಹ್ಯಾಟ್ ಹಿಲ್ ಬಳಿ ವಾಸವಾಗಿದ್ದರು.
ಚಂದ್ರಗಿರಿ ತೀರದಲ್ಲಿ ಕಾದಂಬರಿ ಮೂಲಕ ಪ್ರಸಿದ್ಧಿಯಾಗಿದ್ದ ಸಾರಾ ಅಬೂಬಕ್ಕರ್ ಅನೇಕ ಕೃತಿ ರಚಿಸಿ ಖ್ಯಾತರಾಗಿದ್ದರು. ಮಂಗಳವಾರ ರಾತ್ರಿ 8 ಗಂಟೆಗೆ ಮಂಗಳೂರಿನ ಬಂದರ್ ಝೀನತ್ ಬಕ್ಷ್ ಮಸೀದಿ ಆವರಣದ ದಫನ ಭೂಮಿಯಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂಬ ಮಾಹಿತಿ ಲಭ್ಯವಾಗಿದೆ.ಸಾರಾ ಅಬೂಬಕ್ಕರ್ ಅಗಲಿಕೆಗೆ ಅನೇಕ ಗಣ್ಯರು ಕಂಬನಿ ಮಿಡಿದ್ದಾರೆ.
ಸಾರಾ ಅಬೂಬಕ್ಕರ್ ಕಾದಂಬರಿಗಳು:
ಚಂದ್ರಗಿರಿಯ ತೀರದಲ್ಲಿ- 1984, ಸಹನಾ, – 1985, ವಜ್ರಗಳು, ಕದನವಿರಾಮ, – 1988, ಸುಳಿಯಲ್ಲಿ ಸಿಕ್ಕವರು 1994 ಪ್ರವಾಹ-ಸುಳಿ (ಸುಳಿಯಲ್ಲಿ ಸಿಕ್ಕವರು ಕೃತಿಯ ಭಾಗ-೨), ತಳ ಒಡೆದ ದೋಣಿ 1997, ಪಂಜರ, ಇಳಿಜಾರು, ಕಾಣಿಕೆ
ಕಥಾ ಸಂಕಲನಗಳು:
ಚಪ್ಪಲಿಗಳು, ಪಯಣ ಮತ್ತು ಇತರ ಕಥೆಗಳು, ಅರ್ಧರಾತ್ರಿಯಲ್ಲಿ ಹುಟ್ಟಿದ ಕೂಸು (1992), ಖೆಡ್ಡ, ಸುಮಯ್ಯಾ (ಜನಪದ ಆಧರಿಸಿದ ಕಥೆಗಳು) 2004, ಗಗನ ಸಖಿ 2007