ನ್ಯೂಸ್ ನಾಟೌಟ್: ಕಳೆದ 28 ವರ್ಷಗಳ ಬಹುಬೇಡಿಕೆಯಾಗಿದ್ದ ಅರಂತೋಡು-ಅಡ್ತಲೆ-ಎಲಿಮಲೆ ರಸ್ತೆ ಅಭಿವೃದ್ಧಿಗೆ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿದೆ.ಸುಮಾರು ಮೂರು ಕೋಟಿ ರೂಪಾಯಿ ವೆಚ್ಚದಲ್ಲಿ ರಸ್ತೆ ಕಾಮಗಾರಿ ನಡೆಯಲಿದ್ದು,ಸಚಿವ ಎಸ್.ಅಂಗಾರ ಅವರು ಗುದ್ದಲಿ ಪೂಜೆ ನೆರವೇರಿಸಿದರು.
1 ವಾರದಲ್ಲಿ ಕಾಮಗಾರಿ ಶುರು:
ಈ ಸಂದರ್ಭ ಮಾತನಾಡಿದ ಸಚಿವ ಎಸ್.ಅಂಗಾರ ಅವರು “ಬಿಜೆಪಿ ಸರಕಾರ ಬಂದ ಬಳಿಕ ರಸ್ತೆ ಅಭಿವೃದ್ಧಿಗೆ ಸಾಕಷ್ಟು ಅನುದಾನ ನೀಡಿದೆ. ರಸ್ತೆ ಅಭಿವೃದ್ಧಿಗೆ ಮೂರು ಕೋಟಿ ರೂ ಅನುದಾನವಿದ್ದು,ಒಂದು ವಾರದೊಳಗೆ ಕಾಮಗಾರಿ ಶುರುವಾಗಲಿದೆ ಎಂದರು. ೧೧೦ ಕೆವಿ, ಕಾಮಗಾರಿ ಕೂಡ ಸುಳ್ಯ ಭಾಗದ ಬಹು ಕಾಲದ ಬೇಡಿಕೆಯಾಗಿತ್ತು.ಇದೀಗ ಅದಕ್ಕಿದ್ದ ಎಲ್ಲಾ ಸಮಸ್ಯೆಗಳು ನಿವಾರಣೆಯಾಗಿದ್ದು, ಜನವರಿ ೧೦ಕ್ಕೆ ಶಿಲಾನ್ಯಾಸ ನೆರವೇರಲಿದೆ ಎಂದು ಹೇಳಿದರು.
‘ಬಹಿಷ್ಕಾರ, ಪ್ರತಿಭಟನೆಗಳಿಗೆ ಹೆದರಲ್ಲ’
”ರಸ್ತೆ ಅಭಿವೃದ್ಧಿಗಾಗಿ ಹಲವು ಪ್ರತಿಭಟನೆ,ಬಹಿಷ್ಕಾರಗಳು ನಡೆದಿವೆ. ಇದಕ್ಕೆ ನಾವು ಜಗ್ಗುವುದಿಲ್ಲ. ಸಚಿವ ಅಂಗಾರರು ಈ ರಸ್ತೆ ಅಭಿವೃದ್ಧಿಗಾಗಿ ೩ ಕೋಟಿ ರೂ. ಅನುದಾನ ಇರಿಸಿದ್ದಾರೆ. ರಾಜ್ಯದಲ್ಲಿ ಮತ್ತು ಕೇಂದ್ರದಲ್ಲಿ ಬಿಜೆಪಿ ಸರಕಾರ ಉತ್ತಮ ರೀತಿಯಲ್ಲಿ ಕೆಲಸ ಮಾಡುತ್ತಿದೆ.ಹಲವು ಕಡೆ ಅಭಿವೃದ್ದಿ ಕೆಲಸಗಳಾಗಿವೆ.ಅಭಿವೃದ್ದಿ ಪಥದತ್ತ ನಮ್ಮ ಕನಸು,ನಮ್ಮ ಗುರಿ ಏನಿದ್ದರೂ ಅಭಿವೃದ್ದಿ ಮಾತ್ರ.ಅದು ಬಿಟ್ಟರೆ ಬೇರೆ ಯಾವುದಕ್ಕೂ ನಾವು ತಲೆ ಕೆಡಿಸಿಕೊಳ್ಳುವುದಿಲ್ಲ ಎಂದು ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ಹರೀಶ್ ಕಂಜಿಪಿಲಿ ಹೇಳಿದರು.
ಅರಂತೋಡು ಗ್ರಾ.ಪಂ. ಸದಸ್ಯ ಕೇಶವ ಅಡ್ತಲೆ ಸ್ವಾಗತಿಸಿದರು. ಅರಂತೋಡು ಗ್ರಾಮ ಪಂಚಾಯತ್ ಅಧ್ಯಕ್ಷೆ ಹರಿಣಿ ದೇರಾಜೆ, ಮರ್ಕಂಜ ಗ್ರಾ.ಪಂ. ಅಧ್ಯಕ್ಷೆ ಪವಿತ್ರ ಗುಂಡಿ, ಉಪಾಧ್ಯಕ್ಷ ಗೋವಿಂದ ಅಳವುಪಾರೆ, ಅರಂತೋಡು ಸಹಕಾರಿ ಸಂಘದ ಅಧ್ಯಕ್ಷ ಸಂತೋಷ್ ಕುತ್ತಮೊಟ್ಟೆ, ಅರಂತೋಡು ಗ್ರಾ.ಪಂ. ಸದಸ್ಯ ಶಿವಾನಂದ ಕುಕ್ಕುಂಬಳ, ಸಂಪಾಜೆ, ಅರಂತೋಡು, ತೊಡಿಕಾನ, ಮರ್ಕಂಜ ದ ಬಿಜೆಪಿ ಕಾರ್ಯಕರ್ತರು ಜತೆಗಿದ್ದರು.