ಮುಂಬೈ: ಪ್ರೊ ಕಬಡ್ಡಿ ಆಟಗಾರರ ಹರಾಜು ಪ್ರಕ್ರಿಯೆ ದಿನಗಣನೆ ನಡೆಯುತ್ತಿರುವಾಗಲೇ ಕೂಟದ ಎಲ್ಲ ತಂಡಗಳು ಕೂಡ ಉಳಿಕೆ ಆಟಗಾರರ ಪಟ್ಟಿಯನ್ನು ಶುಕ್ರವಾರ ಪ್ರಕಟಿಸಿದೆ. 8ನೇ ಆವೃತ್ತಿಗಾಗಿ ವಿವಿಧ ತಂಡಗಳ ಪ್ರಾಂಚೈಸಿ ಒಟ್ಟು 28 ಆಟಗಾರರನ್ನು ಉಳಿಕೆ ಮಾಡಿಕೊಂಡಿದೆ. ಬೆಂಗಳೂರು ಬುಲ್ಸ್ ತಂಡದ ತಾರಾ ಆಟಗಾರ ಪವನ್ ಸೆಹ್ರಾವತ್ ಅವರನ್ನು ಉಳಿಸಿಕೊಂಡಿದೆ. ಇನ್ನು ಹಾಲಿ ಚಾಂಪಿಯನ್ ಬೆಂಗಾಲ್ ವಾರಿಯರ್ಸ್ ಮಣಿಂದರ್ ಸಿಂಗ್ ಅವರನ್ನು ಉಳಿಸಿಕೊಂಡಿದೆ. ಇರಾನ್ ನ ತಾರಾ ಆಟಗಾರ ಫಜಲ್ ಅತ್ರಾಚಲಿ ಅವರನ್ನು ಯು ಮುಂಬಾ ತಂಡ ಉಳಿಕೆ ಮಾಡಿಕೊಂಡಿದ್ದರೆ ಬೆಂಗಾಲ್ ವಾರಿಯರ್ಸ್ ಮೊಹಮ್ಮದ್ ನಭಿಭಕ್ಷ್ ಅವರನ್ನು ಉಳಿಸಿಕೊಂಡಿದೆ.
ಎಷ್ಟು ಆಟಗಾರರು ಉಳಿಕೆ?
ಒಟ್ಟು ಮೂರು ವಿಭಾಗದಲ್ಲಿ 59 ಆಟಗಾರರನ್ನು ಉಳಿಕೆ ಮಾಡಲಾಗಿದೆ. ಎಲೈಟ್ ರಿಟೇನ್ ಪ್ಲೇಯರ್ಸ್ (ಇಆರ್ ಪಿ) ವಿಭಾಗದಲ್ಲಿ 23, ರಿಟೇನ್ ಯಂಗ್ ಪ್ಲೇಯರ್ಸ್ ವಿಭಾಗದಲ್ಲಿ 6 ಹಾಗೂ ನ್ಯೂ ಯಂಗ್ ಪ್ಲೇಯರ್ಸ್ (ಎನ್ವೈಪಿ) ವಿಭಾಗದಲ್ಲಿ ಒಟ್ಟು 31 ಆಟಗಾರರನ್ನು ಉಳಿಸಿಕೊಳ್ಳಲಾಗಿದೆ.
ಯಾವ ತಂಡದಲ್ಲಿ ಯಾರು ಉಳಿಕೆ?
*ಬೆಂಗಾಲ್ ವಾರಿಯರ್ಸ್: ಮಣಿಂದರ್ ಸಿಂಗ್, ಮೊಹಮ್ಮದ್ ನಬಿಭಕ್ಷ್, ರಿಂಕು ನರ್ವಲ್
*ಬೆಂಗಳೂರು ಬುಲ್ಸ್: ಪವನ್ ಕುಮಾರ್ ಸೆಹ್ರಾವತ್, ಅಮಿತ್ ಶೆರಾನ್
*ದಬಾಂಗ್ ಡೆಲ್ಲಿ: ವಿಜಯ್, ನೀರಜ್ ನರ್ವಲ್
*ಗುಜರಾತ್ ಗಿಯಾಂಟ್ಸ್: ಪರ್ವೆಶ್, ಸುನಿಲ್ ಕುಮಾರ್
*ಹರಿಯಾಣ ಸ್ಟೀಲರ್ಸ್: ವಿಕಾಸ್ ಕಾಂಡೋಲ
*ಜೈಪುರ ಪಿಂಕ್ ಪ್ಯಾಂಥರ್ಸ್: ಅಮಿತ್ ಹೂಡಾ, ವಿಶಾಲ್
*ಪಾಟ್ನಾ ಪಿರೇಟ್ಸ್: ನೀರಜ್ ಕುಮಾರ್, ಮೋನು
*ಪುನೇರಿ ಪಲ್ಟಾನ್: ಬಿ.ಜಾಧವ್, ಪವನ್ ಕುಮಾರ್ ಕಾಡಿಯಾನ್, ತಾಜಿಕ್
*ತೆಲುಗು ಟೈಟಾನ್ಸ್: ರಾಕೇಶ್ ಗೌಡ
*ಯು ಮುಂಬಾ: ಫಜಲ್ ಅಟ್ರಾಚಲಿ, ಅಭಿಷೇಕ್ ಸಿಂಗ್, ಅಜಿಂಕ್ಯ ರೊಹಿದಾಸ್, ಹರೇಂದ್ರ ಕುಮಾರ್
ಬೆಂಗಳೂರಿಗೆ ಪವನ್ ಉಳಿಕೆ, ರೋಹಿತ್ ಔಟ್
ಬೆಂಗಳೂರು ಬುಲ್ಸ್ ನಿರೀಕ್ಷೆಯಂತೆ ಪವನ್ ಸೆಹ್ರಾವತ್ ಅವರನ್ನು ಉಳಿಸಿಕೊಂಡಿದೆ. ಕಳೆದ ಎರಡು ಆವೃತ್ತಿಗಳಲ್ಲಿ ಬೆಂಗಳೂರು ಪರ ಮುಖ್ಯ ರೈಡರ್ ಆಗಿ ಪವನ್ ಸೆಹ್ರಾವತ್ ಎದುರಾಳಿ ತಂಡಗಳಿಗೆ ಕಬ್ಬಿಣದ ಕಡಲೆಯಾಗಿದ್ದಾರೆ. ಕಳೆದ ಆವೃತ್ತಿಯಲ್ಲಿ 24 ಪಂದ್ಯವನ್ನಾಡಿರುವ ಪವನ್ ಸೆಹ್ರಾವತ್ ಒಟ್ಟು 360 ಪಾಯಿಂಟ್ಸ್ ಪಡೆದಿದ್ದರು. ಪಂದ್ಯವೊಂದರಲ್ಲಿ 39 ಅಂಕ ಪಡೆದಿದ್ದು ಗರಿಷ್ಠವಾಗಿದೆ. ಇನ್ನು ಮಾಜಿ ನಾಯಕ ರೋಹಿತ್ ಕುಮಾರ್ ಅವರನ್ನು ಬೆಂಗಳೂರು ತಂಡ ಹೊರಕ್ಕೆ ಕಳಿಸಿದೆ. ಅವರು ಕಳೆದ ಆವೃತ್ತಿಯಲ್ಲಿ 19 ಪಂದ್ಯದಿಂದ 100 ಅಂಕವನ್ನಷ್ಟೇ ಪಡೆದಿದ್ದರು. ಕಳಪೆ ಸಾಧನೆ ಹಿನ್ನೆಲೆಯಲ್ಲಿ ಅವರನ್ನು ತಂಡದಿಂದ ಹೊರಕ್ಕೆ ಹಾಕಲಾಗಿದೆ. ಇವರು ಮುಂದಿನ ಹರಾಜಿನಲ್ಲಿ ಖರೀದಿಗೆ ಲಭ್ಯವಿದ್ದಾರೆ.
ಆಗಸ್ಟ್ 29 ರಿಂದ 31ರ ತನಕ ಹರಾಜು
ಕರೊನಾ ಕಾರಣಕ್ಕೆ ಕಳೆದೆರಡು ವರ್ಷಗಳಿಂದ ನಡೆಸಲಾಗದ ಪ್ರೊ ಕಬಡ್ಡಿ ೮ನೇ ಆವೃತ್ತಿಯನ್ನು ನಡೆಸುವುದಕ್ಕೆ ಪೂರ್ಣ ತಯಾರಿ ಮಾಡಿಕೊಂಡಿರುವುದಾಗಿ ಕೂಟದ ನೇರಪ್ರಸಾರಕ ಸ್ಟಾರ್ ಸ್ಪೋರ್ಟ್ಸ್ ವಾಹಿನಿ ಪ್ರಕಟಣೆಯಲ್ಲಿ ತಿಳಿಸಿದೆ. ಈ ಹಿನ್ನೆಲೆಯಲ್ಲಿ ಆಗಸ್ಟ್ 29 ರಿಂದ 31ರ ತನಕ ಹರಾಜು ಪ್ರಕ್ರಿಯೆ ನಡೆಯಲಿದೆ ಎಂದು ಸಂಘಟಕರು ತಿಳಿಸಿದ್ದಾರೆ.