ನ್ಯೂಸ್ ನಾಟೌಟ್: ಮಂಗಳೂರಿನಲ್ಲಿ ಉಗ್ರ ಶಾರಿಕ್ ಕುಕ್ಕರ್ ಬಾಂಬ್ ಸ್ಫೋಟಿಸಿದ ಬಿಸಿ ಇನ್ನೂ ಆರಿಲ್ಲ, ಈ ನಡುವೆ ಕರಾವಳಿಯ ಪ್ರತಿಷ್ಠಿತ ಕಾಲೇಜೊಂದರ ವಿದ್ಯಾರ್ಥಿ ಐಸಿಸ್ ಉಗ್ರರ ಸಂಪರ್ಕ ಇರುವುದು ಇದೀಗ ಬಹಿರಂಗಗೊಂಡಿದೆ. ಇದನ್ನು ಸ್ವತಃ ರಾಷ್ಟ್ರೀಯ ತನಿಖಾ ದಳ (ಎನ್ಐಎ) ಸ್ಪಷ್ಟಪಡಿಸಿದೆ. ಅಚ್ಚರಿ ಎಂದರೆ ಮಂಗಳೂರಿನ ಹೊರವಲಯದಲ್ಲಿರುವ ಪ್ರತಿಷ್ಠಿತ ಕಾಲೇಜೊಂದರ ವಿದ್ಯಾರ್ಥಿ ಸೇರಿದಂತೆ ಇಬ್ಬರು ಐಸಿಸ್ ಉಗ್ರರ ನೇರ ಸಂಪರ್ಕದಲ್ಲಿರುವ ಆಘಾತಕಾರಿ ವಿಚಾರ ಹೊರಬಿದ್ದಿದೆ.
ಉಗ್ರರ ಹೆಜ್ಜೆ ಕರಾವಳಿಯಲ್ಲಿ ಬಲವಾಗಿ ಬೇರೂರುವ ಪ್ರಯತ್ನ, ಷಡ್ಯಂತ್ರ ನಡೆಯುತ್ತಿದೆ ಅನ್ನುವುದು ಮತ್ತೊಮ್ಮೆ ಸಾಬೀತಾಗಿದೆ. ಉಗ್ರರ ಕರಾಳ ಹೆಜ್ಜೆಯ ಒಂದೊಂದೇ ಕಥೆಗಳು ಹೊರಬೀಳುತ್ತಿವೆ. ಆತಂಕ ಕಳವಳದ ನಡುವೆ ನಮ್ಮ ಪೊಲೀಸ್ ಪಡೆ ಉಗ್ರರನ್ನು ಸಮರ್ಥವಾಗಿ ಎದುರಿಸುತ್ತಿದೆ ಅನ್ನುವುದು ಸಮಾಧಾನಕರ ಸಂಗತಿ. ಸದ್ಯ ಸಿಕ್ಕಿಬಿದ್ದ ಕಾಲೇಜು ವಿದ್ಯಾರ್ಥಿಯು ಮಂಗಳೂರಿನ ಕೊಣಾಜೆಪಿ.ಎ ಇಂಜಿನೀಯರಿಂಗ್ ಕಾಲೇಜಿನ ವಿದ್ಯಾರ್ಥಿ ರೇಶಾನ್ ತಾಜುದ್ದೀನ್ (೨೨) ಮತ್ತು ಶಿವಮೊಗ್ಗದ ಹುಜೈರ್ ಫರ್ಹಾನ್ ಎಂದು ಗುರುತಿಸಲಾಗಿದೆ. ಇವರಿಬ್ಬರು ಐಸಿಸ್ ಉಗ್ರ ಸಂಘಟನೆಯಿಂದ ಕ್ರಿಫ್ಟೋ ಕರೆನ್ಸಿ ಮೂಲಕ ಹಣಕಾಸಿನ ನೆರವು ಪಡೆದಿದ್ದರು. ಈ ವಿಚಾರ ಇದೀಗ ಎನ್ಐಎ ಅಧಿಕಾರಿಗಳ ದಾಳಿ ವೇಳೆ ಸಾಕ್ಷ್ಯಾಧಾರಗಳಿಂದ ದೃಢಪಟ್ಟಿದೆ.
ಇವರಿಬ್ಬರು ಉಗ್ರರಿಂದ ಹಣ ಪಡೆದುಕೊಂಡು ಅವರ ಆದೇಶದಂತೆ ರಾಜ್ಯದ ವಿವಿಧ ಕಡೆ ಸ್ಫೋಟಕ್ಕೆ ಸಂಚು ರೂಪಿಸಿದ್ದರು ಎನ್ನಲಾಗಿದೆ. ಈ ಕುರಿತು ಎನ್ಐಎ ಈಗ ಚುರುಕಿನ ತನಿಖೆ ನಡೆಸುತ್ತಿದೆ. ಇನ್ನಷ್ಟು ಮಾಹಿತಿ ವಿಚಾರಣೆ ವೇಳೆ ಉಗ್ರರಿಂದ ಹೊರ ಬೀಳುವ ಸಾಧ್ಯತೆ ಇದೆ.