ನ್ಯೂಸ್ ನಾಟೌಟ್ : ಶ್ರೀ ಧವಲಾ ಮಹಾವಿದ್ಯಾಲಯ ಹಾಗೂ ಲಲಿತಸಂಘ ಇದರ ವತಿಯಿಂದ ನಡೆದ ಧವಲಾ ಸಿರಿ-2023 ಮಂಗಳೂರು ವಿಶ್ವವಿದ್ಯಾನಿಲಯ ಮಟ್ಟದ ಅಂತರ ಕಾಲೇಜು ಸಾಂಸ್ಕೃತಿಕ ವೈವಿಧ್ಯ ಸ್ಪರ್ಧೆ ಮೂಡಬಿದಿರೆಯ ನಡೆಯಿತು.ಶಾಸಕ ಉಮಾನಾಥ್ ಎ. ಕೋಟ್ಯಾನ್ ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು ವಿದ್ಯಾರ್ಥಿಗಳು ವಿದ್ಯಾರ್ಜನೆಯ ಜತೆಜತೆಗೆ ತಮ್ಮಲ್ಲಿರುವ ಪ್ರತಿಭೆಯನ್ನು ಪ್ರದರ್ಶಿಸಲು ಅವಕಾಶವನ್ನು ಕಲ್ಪಿಸುವಂತಹ ಕಾರ್ಯಕ್ರಮ ಧವಲಾ ಸಿರಿ. ಸ್ಪರ್ಧೆ ಎಂದ ತಕ್ಷಣ ತಾವು ಪದಕ ಅಥವಾ ಶಿಲ್ಡನ್ನು ಪಡೆದುಕೊಂಡು ಹೋಗಲು ಬಂದಿರುವುದೆಂದು ಅಂದುಕೊಂಡರೆ ಅದು ತಪ್ಪು ಕಲ್ಪನೆ. ಯಾವುದೇ ಕ್ಷೇತ್ರದಲ್ಲಿ ಸ್ಪರ್ಧೆ ಏರ್ಪಡಿಸುವ ಉದ್ದೇಶ ತಮ್ಮಲ್ಲಿರುವ ಸಾಮರ್ಥ್ಯವನ್ನು ಇನ್ನೂ ಉತ್ತಮಪಡಿಸಲು ಇರುವಂತಹ ಅವಕಾಶವೇ ಸ್ಪರ್ಧೆ ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.
ಈ ವೇಳೆ ಮುಖ್ಯ ಅತಿಥಿಯಾಗಿ ಭಾಗವಹಿಸಿದ ತುಳು ಚಲನಚಿತ್ರ ಹಾಗೂ ರಂಗಭೂಮಿಯ ಹಾಸ್ಯಕಲಾವಿದ ಅರವಿಂದ್ ಬೋಳಾರ್ ಅವರನ್ನು ಕಾಲೇಜು ವತಿಯಿಂದ ಸನ್ಮಾನಿಸಲಾಯಿತು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಬೋಳಾರ್, ಪ್ರತಿಯೊಬ್ಬ ವಿದ್ಯಾರ್ಥಿಗೂ ಸಮಯ ಪ್ರಜ್ಞೆ ಅನ್ನುವುದು ಇರಬೇಕು. ಸಮಯಪ್ರಜ್ಞೆ ಇರುವವನನ್ನು ಸಮಯವೇ ಕಾಪಾಡುತ್ತದೆಂಬುದು ಸತ್ಯ. ಮಕ್ಕಳು ತಂದೆ-ತಾಯಿ, ಗುರುಗಳು ನಮಗಾಗಿ ಕಷ್ಟಪಡುತ್ತಾರೆಂಬುದನ್ನು ತಲೆಯಲ್ಲಿಟ್ಟುಕೊಂಡು ಪೋಷಕರು, ಗುರುಗಳು ಕಲಿಸಿದ ವಿದ್ಯೆಯನ್ನು ವಿದ್ಯಾರ್ಥಿಗಳು ಅರ್ಥೈಸಿಕೊಂಡರೆ ಉನ್ನತ ಮಟ್ಟದಲ್ಲಿ ಬೆಳೆಯಲು ಸಾಧ್ಯ ಎಂದರು.
ಕಾಲೇಜಿನ ಪ್ರಾಂಶುಪಾಲ ಮಹಾವೀರ ಅಜ್ರಿ ಅವರು ಅಧ್ಯಕ್ಷತೆ ವಹಿಸಿದ್ದರು.ಕಾಲೇಜು ಆಡಳಿತ ಮಂಡಳಿಯ ಕಾರ್ಯದರ್ಶಿ ಅಭಿಜಿತ್ ಎಂ.ಕಾಲೇಜಿನ ಹಳೆವಿದ್ಯಾರ್ಥಿ ಹಾಗೂ ಕಿರುತೆರೆ ನಟ ಶ್ರೀನಿಧಿ ಭಟ್, ನಿಕಟ ಪೂರ್ವ ಪ್ರಾಚಾರ್ಯ ಸುದರ್ಶನ್ ಕುಮಾರ್, ದಿನೇಶ್, ವಿದ್ಯಾರ್ಥಿ ಸಂಘದ ನಾಯಕ ನಿಖಿತ್ , ಲಲಿತಾ ಕಲಾ ಸಂಘದ ಕಾರ್ಯದರ್ಶಿ ಶ್ರವಣ್ ಕುಮಾರ್, ವಿವಿಧ ಕಾಲೇಜಿನ ವಿದ್ಯಾರ್ಥಿಗಳು, ಉಪನ್ಯಾಸಕ ವೃಂದ ಸೇರಿದಂತೆ ಸಿಬ್ಬಂದಿಗಳು ಉಪಸ್ಥಿತರಿದ್ದರು.ಉಪನ್ಯಾಸಕ ಪ್ರೊ. ಪಾರ್ಶ್ವನಾಥ ಅಜ್ರಿ ಪ್ರಾಸ್ತವಿಕವಾಗಿ ಮಾತನಾಡಿ ಸ್ವಾಗತಿಸಿದರು. ಲಲಿತಾ ಕಲಾಸಂಘದ ಸಂಯೋಜಕಿ ಮಲ್ಲಿಕಾ ರಾವ್ ಅತಿಥಿಗಳ ಪಾತ್ರ ಪರಿಚಯವನ್ನು ವಾಚಿಸಿದರು. ವಿದ್ಯಾರ್ಥಿನಿ ಕಲ್ಪನಾ ನಿರೂಪಿಸಿ, ಲಲಿತಾ ಕಲಾ ಸಂಘದ ಕಾರ್ಯದರ್ಶಿ ತನ್ವಿ ಧನ್ಯವಾದಗೈದರು.