ನ್ಯೂಸ್ ನಾಟೌಟ್ : ಸುಳ್ಯ ಜಾತ್ರೋತ್ಸವದಲ್ಲಿ ಎಲ್ಲರಿಗೂ ಅವಕಾಶ ನೀಡಬೇಕು. ಅನ್ಯಧರ್ಮೀಯರೂ ಬಂದು ವ್ಯಾಪಾರ ಮಾಡಬೇಕು ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ಪ್ಯಾನಲಿಸ್ಟ್ ಭರತ್ ಮುಂಡೋಡಿ ತಿಳಿಸಿದ್ದಾರೆ.
ಸುಳ್ಯದಲ್ಲಿ ಶುಕ್ರವಾರ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಭರತ್ ಮುಂಡೋಡಿಯವರು, ಸುಳ್ಯ ಚೆನ್ನಕೇಶವ ದೇವಸ್ಥಾನದ ಜಾತ್ರೋತ್ಸವದಲ್ಲಿ ಮೊದಲು ಸಂತೆಯಲ್ಲಿ ವ್ಯಾಪಾರಕ್ಕೆ ಮುಕ್ತ ಅವಕಾಶ ನೀಡಲು ತೀರ್ಮಾನಿಸಲಾಗಿತ್ತು. ಆದರೆ ದಿಢೀರ್ ನಿರ್ಧಾರದಲ್ಲಿ ಹಿಂದೂಗಳಿಗೆ ಮಾತ್ರ ಅವಕಾಶ ನೀಡುವುದಾಗಿ ಘೋಷಣೆ ಮಾಡಿದ್ದಾರೆ. ದೇವಸ್ಥಾನದ ಆಡಳಿತ ಮಂಡಳಿ ಕೈಗೊಂಡಿರುವ ನಿರ್ಧಾರ ಸರಿ ಇಲ್ಲ ಎಂದು ಟೀಕಿಸಿದರು.
ಬೀದಿ ಬದಿಯಲ್ಲಿ ವ್ಯಾಪಾರ ಮಾಡುವ ಅನ್ಯಧರ್ಮೀಯರು ತೀರ ಬಡವರಾಗಿದ್ದಾರೆ. ಒಂದು ತುತ್ತಿಗಾಗಿ ಅವರು ಜಾತ್ರೆಗೆ ಬಂದು ವ್ಯಾಪಾರ ಮಾಡುತ್ತಾರೆ. ಆದರೆ ಅವರಿಗೆ ಅವಕಾಶ ನಿರಾಕರಣೆ ಮಾಡಬಾರದಾಗಿತ್ತು. ದೇವಾಸ್ಥಾನದ ಆಡಳಿತ ಮಂಡಳಿಯವರು ವೈಯುಕ್ತಿಕವಾಗಿ ನಿರ್ಧಾರ ತೆಗೆದುಕೊಂಡಿದ್ದು ಮನಸ್ಸಿಗೆ ಬಹಳ ಬೇಸರವಾಗಿದೆ. ಜಾತ್ರೋತ್ಸವ ಸಾರ್ವಜನಿಕ ಸ್ಥಳ ಆಗಿದ್ದರಿಂದ ಎಲ್ಲ ಧರ್ಮದವರಿಗೂ ಅವಕಾಶವಿದೆ. ಸಂತೆಯಲ್ಲಿ ಬೀದಿ ವ್ಯಾಪಾರ ಮಾಡುವ ಹಿಂದೂಗಳು ಬಡ ವ್ಯಾಪಾರಿಗಳಾಗಿದ್ದಾರೆ. ಅವರಿಗೆ ಸಹಾಯ ಮಾಡುವ ಉದ್ದೇಶದಿಂದ ಅನ್ಯಧರ್ಮೀಯರ ಪ್ರವೇಶಕ್ಕೆ ನಿರಾಕರಿಸುವುದಾದರೆ ಹಿಂದೂ ಧರ್ಮದವರಿಗೆ ಶುಲ್ಕ ವಿಧಿಸುವುದನ್ನು ಮೊದಲು ನಿಲ್ಲಿಸಬೇಕು. ಎಲ್ಲ ಧರ್ಮೀಯರನ್ನು ಸಮಾನವಾಗಿ ನೋಡಬೇಕು. ಸುಳ್ಯದಲ್ಲಿ ಮಾತ್ರವಲ್ಲ ಇಡೀ ರಾಜ್ಯದಲ್ಲಿ ಅನ್ಯ ಧರ್ಮದ ಬಡ ವ್ಯಾಪಾರಿಗಳಿಗೆ ವ್ಯಾಪಾರ ನಡೆಸುವುದಕ್ಕೆ ಅವಕಾಶ ನೀಡಬೇಕು ಎಂದು ತಿಳಿಸಿದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ಸಿ ಜಯರಾಮ್ , ಬ್ಲಾಕ್ ಕಾಂಗ್ರೆಸ್ ನ ಪ್ರಧಾನ ಕಾರ್ಯದರ್ಶಿ ಪಿ.ಸಿ ಗಂಗಾಧರ್, ನಗರ ಕಾಂಗ್ರೆಸ್ ಅಧ್ಯಕ್ಷ ಎಂ.ಜೆ. ಶಶಿಧರ್, ಕಾಂಗ್ರೆಸ್ ವಕ್ತಾರ ನಂದರಾಜ ಸಂಕೇಶ ಉಪಸ್ಥಿತರಿದ್ದರು.