ಪುತ್ತೂರು: ಇಬ್ಬರು ಹಿಂದೂ ಯುವತಿಯರ ಜತೆಗೆ ಅನ್ಯಕೋಮಿನ ಯುವಕನೊಬ್ಬ ಪುತ್ತೂರಿನಿಂದ ಬೆಂಗಳೂರಿಗೆ ಬಸ್ ನಲ್ಲಿ ತೆರಳುತ್ತಿದ್ದಾನೆ ಎಂಬ ಸುಳ್ಳು ಸುದ್ದಿ ಹರಡಿ ಭಜರಂಗ ದಳದ ಕಾರ್ಯಕರ್ತರು ದಾಳಿ ನಡೆಸಿದ ಘಟನೆ ವರದಿಯಾಗಿದೆ.
ಪುತ್ತೂರಿನಿಂದ ಬೆಂಗಳೂರಿಗೆ ನಿನ್ನೆ ರಾತ್ರಿ ಹೋಗುತ್ತಿದ್ದ ಸರಕಾರಿ ಬಸ್ ನಲ್ಲಿ ಇಬ್ಬರು ಯುವತಿಯರು ಪ್ರಯಾಣಿಸುತ್ತಿದ್ದು , ಪಕ್ಕದ ಸೀಟಲ್ಲಿ ಬೆಳ್ಳಾರೆ ಕಡೆಯ ಯುವಕನೊಬ್ಬ ಪ್ರಯಾಣಿಸುತ್ತಿದ್ದುದರಿಂದ ಹಿಂದೂ ಯುವತಿಯರ ಜತೆಗೆ ಮುಸ್ಲಿಂ ಯುವಕ ಬೆಂಗಳೂರಿಗೆ ಪ್ರಯಾಣಿಸುತ್ತಿದ್ದಾನೆಂಬ ತಪ್ಪು ಮಾಹಿತಿಯ ಮೇರೆಗೆ ಭಜರಂಗದಳದವರು ಬಸ್ಸನ್ನು ಬೆನ್ನಟ್ಟಿ ಹಿಡಿದು ಆನೆಗುಂಡಿಯಲ್ಲಿ ಅಡ್ಡಗಟ್ಟಿದರು. ಪೈಚಾರಲ್ಲಿ ಇಳಿದ ಆ ಯುವಕನ ಪರವಾಗಿ ಸಾರ್ವಜನಿಕರು ಸೇರಿದಾಗ ಪೊಲೀಸರು ಬಂದು ಭಜರಂಗದಳದವರನ್ನು ಪೋಲಿಸ್ ಠಾಣೆಗೆ ಕರೆದೊಯ್ದ ಮತ್ತು ಠಾಣೆಯಲ್ಲಿ ಬಜರಂಗ ದಳ ನಾಯಕರಿಗೂ ಪೊಲೀಸರಿಗೂ ಮಾತಿನ ಚಕಮಕಿಯಾಗಿದೆ.
ಏನಿದು ಘಟನೆ?
ಬೆಂಗಳೂರಿನ ಇಬ್ಬರು ಯುವತಿಯರು ಪುತ್ತೂರಿಗೆ ಬಂದಿದ್ದವರು ಪುತ್ತೂರಿನಿಂದ ನಿನ್ನೆ ರಾತ್ರಿ ಬೆಂಗಳೂರಿಗೆ ಹೋಗುವ ಬಸ್ಸಿಗೆ ಹತ್ತಿದ್ದರು. ಅದೇ ಬಸ್ಸಲ್ಲಿ ಕುಂಬ್ರದವರೆಗೆ ಬರಲು ಬೆಳ್ಳಾರೆ ಸಮೀಪದ ನೌಶಾದ್ ಎಂಬ ಮುಸ್ಲಿಂ ಯುವಕನೊಬ್ಬ ಹತ್ತಿದ್ದ. ಬಸ್ಸಿನ ಎದುರುಗಡೆಯ ಸೀಟಿನ ಒಂದು ಬದಿಯ ಸೀಟಲ್ಲಿ ಆ ಯುವತಿಯರು ಕುಳಿತಿದ್ದರೆ, ಇನ್ನೊಂದು ಬದಿಯ ಸೀಟಲ್ಲಿ ನೌಷಾದ್ ಕುಳಿತಿದ್ದನೆನ್ನಲಾಗಿದೆ. ಬಸ್ಸು ಕುಂಬ್ರ ತಲುಪಿದಾಗ ಆ ಯುವಕ ಅಲ್ಲಿ ಇಳಿಯದೆ ಬೆಂಗಳೂರಿಗೆ ಮತ್ತೆ ಟಿಕೆಟ್ ಮಾಡಿದನೆನ್ನಲಾಗಿದೆ. ಕುಂಬ್ರದಲ್ಲಿ ಇಳಿಯಬೇಕಾದ ಯುವಕ ಆ ಯುವತಿಯರ ಜತೆ ವಿಹರಿಸುವುದಕ್ಕಾಗಿಯೇ ಬೆಂಗಳೂರಿಗೆ ತೆರಳುತ್ತಿದ್ದಾನೆಂದು ಬಸ್ಸಲ್ಲಿದ್ದ ಯಾರೋ ಪುತ್ತೂರಿನ ಭಜರಂಗದಳದ ಯುವಕರಿಗೆ ಮಾಹಿತಿ ನೀಡಿದ ಮೇರೆಗೆ ಪುತ್ತೂರಿನ ಐದಾರು ಮಂದಿ ಯುವಕರು ತಮ್ಮ ಕಾರಲ್ಲಿ ಬಸ್ಸನ್ನು ಬೆಂಬತ್ತಿ ಬಂದು ಆನೆಗುಂಡಿಯಲ್ಲಿ ಬಸ್ಸನ್ನು ಅಡ್ಡಗಟ್ಟಿದರು. ಯುವಕರು ಬಸ್ಸು ಹತ್ತಿ ಎದುರು ಸೀಟಲ್ಲಿ ಕುಳಿತಿದ್ದ ನೌಷಾದ್ ನನ್ನು ವಿಚಾರಿಸಿದರಲ್ಲದೆ ಆತನ ಮೊಬೈಲನ್ನು ಎಳೆದುಕೊಂಡರು. ಆ ಸಂದರ್ಭದಲ್ಲಿ ಅದೇ ಬಸ್ಸಲ್ಲಿ ಪ್ರಯಾಣಿಸುತ್ತಿದ್ದ ಪೊಲೀಸರೊಬ್ಬರು, ” ನೀವು ಬಸ್ಸಲ್ಲಿ ಈ ರೀತಿ ಜಗಳ ಮಾಡಿ ಪ್ರಯಾಣಿಕರಿಗೆ ತೊಂದರೆ ಕೊಡುವುದು ಸರಿಯಲ್ಲ. ಏನಿದ್ದರೂ ಸುಳ್ಯ ಪೊಲೀಸ್ ಠಾಣೆಗೆ ಹೋಗಿ ಅಲ್ಲಿ ಇತ್ಯರ್ಥ ಮಾಡಿಕೊಳ್ಳಿ ” ಎಂದು ಸಲಹೆ ನೀಡಿದರು. ಇದನ್ನು ಒಪ್ಪಿಕೊಂಡ ಬಜರಂಗದಳದ ಯುವಕರು ಬಸ್ಸನ್ನು ಪೊಲೀಸ್ ಠಾಣೆಗೆ ಕೊಂಡೊಯ್ಯಬೇಕೆಂದು ಬಸ್ ಚಾಲಕ ಮತ್ತು ಕಂಡಕ್ಟರ್ ಗೆ ತಾಕೀತು ಮಾಡಿ, ನೌಷಾದ್ ನ ಮೊಬೈಲ್ ಸಮೇತ ಬಸ್ಸಿನಿಂದ ಕೆಳಗಿಳಿದು ತಮ್ಮ ಕಾರಲ್ಲಿ ಬಸ್ಸಲ್ಲಿ ಹಿಂಬಾಲಿಸ ತೊಡಗಿದರು.
ಪೈಚಾರಲ್ಲಿ ಪ್ರಯಾಣಿಕರೊಬ್ಬರನ್ನು ಇಳಿಸುವುದಕ್ಕಾಗಿ ಬಸ್ಸು ನಿಂತಾಗ ನೌಷಾದ್ ಕೂಡ ಬಸ್ಸಿಂದ ಇಳಿದು ತನ್ನ ಸ್ವಜಾತಿ ಬಾಂಧವರಿಗೆ ವಿಷಯ ತಿಳಿಸಿ ತನ್ನ ಮೊಬೈಲನ್ನು ವಿನಾಕಾರಣ ಭಜರಂಗದಳದ ಯುವಕರು ಇಟ್ಟುಕೊಂಡಿರುವುದಾಗಿ ತಿಳಿಸಿದನೆನ್ನಲಾಗಿದೆ. ಆ ಸಂದರ್ಭದಲ್ಲಿ ಅಲ್ಲಿಯ ಹತ್ತಿಪ್ಪತ್ತು ಮಂದಿ ನೌಶಾದ್ ನ ಸ್ವಜಾತಿ ಬಾಂಧವರು ಬಸ್ ಮತ್ತು ಕಾರಿನೆದುರು ಸೇರಿದರು.ಬಸ್ಸನ್ನು ಭಜರಂಗದಳದ ಯುವಕರು ಹಿಂಬಾಲಿಸುತ್ತಿರುವ ಮಾಹಿತಿ ಮೊದಲೇ ಬಂದ ಹಿನ್ನೆಲೆಯಲ್ಲಿ ಸುಳ್ಯ ಎಸ್ಸೈ ಹರೀಶ್ ಎಂ.ಆರ್.ರವರು ಪೈಚಾರ್ ಗೆ ಧಾವಿಸಿದರು. ಆ ವೇಳೆಗೆ ಬಸ್ಸು ನಿಂತು ಜನ ಸೇರಿದ್ದರು. ಎಸೈಯವರು ಭಜರಂಗದಳದ ಐವರು ಯುವಕರನ್ನು ಕರೆದುಕೊಂಡು ಪೊಲೀಸ್ ಠಾಣೆಗೆ ಬಂದರು. ಬಸ್ಸನ್ನು ಕೂಡ ಠಾಣೆಗೆ ತರುವಂತೆ ಸೂಚಿಸಿದರು. ಠಾಣೆಯಲ್ಲಿ ಬಸ್ಸಲ್ಲಿದ್ದ ಆ ಇಬ್ಬರು ಯುವತಿಯರನ್ನು ಮತ್ತು ನೌಷಾದ್ ನನ್ನು ವಿಚಾರಣೆಗೆ ಒಳಪಡಿಸಲಾಯಿತು.
ಆ ವೇಳೆಗೆ ಪುತ್ತೂರಿನಿಂದ ಭಜರಂಗದಳದ ಮುಖಂಡರುಗಳಾದ ಅಜಿತ್ ರೈ ಹೊಸಮನೆ, ನ್ಯಾಯವಾದಿ ಚಿನ್ಮಯ್ ಮತ್ತಿತರ ಹಲವು ಯುವಕರು ಮತ್ತು ಸುಳ್ಯದ ಭಜರಂಗದಳದ ಹಲವು ಯುವಕರು ಪೊಲೀಸ್ ಠಾಣೆಗೆ ಬಂದರು. ನೌಷಾದ್ ನ ಮೊಬೈಲನ್ನು ಪರಿಶೀಲಿಸಿದಾಗ ಮತ್ತು ಆ ಯುವತಿಯರ ಮೊಬೈಲ್ ಅನ್ನು ಪರಿಶೀಲಿಸಿದಾಗ ಅವರ ನಂಬರ್ ಗಳು ಎರಡೂ ಮೊಬೈಲ್ ಗಳಲ್ಲಿ ಇರಲಿಲ್ಲ. ಮತ್ತು ಎರಡೂ ಕಡೆಯವರು ತಮಗೆ ಈ ಮೊದಲು ಪರಿಚಯವೇ ಇಲ್ಲದ ಬಗ್ಗೆ ಹೇಳಿಕೊಂಡರಲ್ಲದೆ ಬಸ್ಸಲ್ಲಿ ಕೂಡ ಪರಸ್ಪರ ಮಾತುಕತೆ ನಡೆಸಿಲ್ಲ ಎಂದು ತಿಳಿಸಿದರೆನ್ನಲಾಗಿದೆ. ಇದನ್ನು ಬಸ್ ಕಂಡಕ್ಟರ್ ಕೂಡ ಖಚಿತಪಡಿಸಿದ್ದರಿಂದ ಭಜರಂಗದಳದವರು ತಪ್ಪು ಮಾಹಿತಿಯಿಂದ ಬಸ್ಸನ್ನು ಅಡ್ಡಗಟ್ಟಿದರೆಂಬುದು ಸ್ಪಷ್ಟಗೊಂಡಿತು. ಆ ಮಹಿಳೆಯರು ಹಿಂದೂ ಧರ್ಮದಿಂದ ಮುಸ್ಲಿಂ ಧರ್ಮಕ್ಕೆ ಮತಾಂತರಗೊಂಡವರೆಂದೂ ವಿಚಾರಣೆ ವೇಳೆ ತಿಳಿಯಿತೆನ್ನಲಾಗಿದೆ.