ವರದಿ: ನಿಶಾ ಮೂಡುಬಿದಿರೆ
ನ್ಯೂಸ್ ನಾಟೌಟ್ : ಹೊಸ ವರ್ಷ ಬಂತೆಂದರೆ ಹೆಚ್ಚಿನವರು ಮೋಜು ಮಸ್ತಿ ಪಾರ್ಟಿಯ ಬಗ್ಗೆಯೇ ಯೋಚಿಸುತ್ತಿರುತ್ತಾರೆ. ಅದರಲ್ಲೂ ಕಾಲೇಜಿನ ಯುವ ಸಮೂಹವಂತೂ ಅಪ್ಪ -ಅಮ್ಮನ ದುಡ್ಡಿನಲ್ಲಿ ಹೇಗೆ ಮಜಾ ಮಾಡಬಹುದು ಅನ್ನುವ ಪ್ಲಾನ್ ರೂಪಿಸುವವರೇ ಹೆಚ್ಚು. ಆದರೆ ಇಲ್ಲಿಬ್ಬರು ಬಾಲಕಿಯರು ಹೊಸ ವರ್ಷದ ಆರಂಭದಲ್ಲಿ ಮಕ್ಕಳಿಗೆ ಧನ ಸಹಾಯ ಮಾಡುವುದರ ಮೂಲಕ ವಿಶೇಷವಾಗಿ ಮಾನವೀಯ ಕಾರ್ಯ ಮಾಡಿದ್ದಾರೆ. ನೂರಲ್ಲ ಇನ್ನೂರಲ್ಲ ಬರೋಬ್ಬರಿ 10,650 ರೂಪಾಯಿ ಸಂಗ್ರಹಿಸಿರುವುದಕ್ಕೆ ಎಲ್ಲೆಡೆಯಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.
ಮಹಾವೀರ ಕಾಲೇಜಿನ ಪ್ರಥಮ ಪಿಯುಸಿಯ ವಾಣಿಜ್ಯ ವಿಭಾಗದ ವಿದ್ಯಾರ್ಥಿನಿಯರಾದ ತ್ರಿಶಾ, ತುಶಿತಾ ಸದಾ ಚಟುವಟಿಕೆಯುಳ್ಳ ವಿಭಿನ್ನ ಯೋಚನಾ ಲಹರಿಯನ್ನು ಒಳಗೊಂಡವರು. ಹೊಸ ವರ್ಷಕ್ಕೆ ಏನು ಮಾಡೋಣ ಎಂದಾಗ ಅವರು ಕಂಡುಕೊಂಡಿದ್ದು ಪರೋಪಕಾರ ಎಂಬ ದಾರಿಯನ್ನು. ಅದರಂತೆ ಅವರು ಮೂಡುಬಿದಿರೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳಿಗೆ ಭೇಟಿ ನೀಡಿದರು. ಅಲ್ಲಿನ ಪ್ರತಿ ಮನೆಗೂ ಹೋಗಿ ತಮ್ಮ ಕನಸಿನ ಬಗ್ಗೆ ಹೇಳಿಕೊಂಡು ಧನ ಸಂಗ್ರಹಿಸಿದರು. ಬಂದ ಹಣದಿಂದ ಮೂಡುಬಿದಿರೆಯಲ್ಲಿರುವ ಸ್ಫೂರ್ತಿ ಭಿನ್ನ ಸಾಮರ್ಥ್ಯದ ಮಕ್ಕಳ ಶಾಲೆ ಹಾಗೂ ತರಬೇತಿ ಕೇಂದ್ರಕ್ಕೆ 10,650 ರೂಪಾಯಿಗಳನ್ನು ಸಂಗ್ರಹಿಸಿ ಹಸ್ತಾಂತರಿಸಿದ್ದಾರೆ. ಇವರಿಗೆ ಮೂಡುಬಿದಿರೆ ವ್ಯಾಪ್ತಿಯ ಕಲ್ಲಬೆಟ್ಟುವಿನ ಪ್ರೀತಿ, ವಸಂತಿ ಎಂಬ ಇಬ್ಬರು ಟೈಲರ್ಗಳು ನೆರವಾಗಿದ್ದಾರೆ. ಅಂತಿಮವಾಗಿ ಹಣವನ್ನು ಸ್ಫೂರ್ತಿ ಭಿನ್ನ ಸಾಮರ್ಥ್ಯದ ಮಕ್ಕಳ ಶಾಲೆ ಹಾಗೂ ತರಬೇತಿ ಕೇಂದ್ರದ ಸಂಸ್ಥಾಪಕ ಪ್ರಕಾಶ್.ಜೆ ಶೆಟ್ಟಿಗಾರ್ ಅವರಿಗೆ ನೀಡಿದ್ದಾರೆ.
ಇಬ್ಬರು ಕಾಲೇಜು ವಿದ್ಯಾರ್ಥಿನಿಯರು ತಮ್ಮಿಂದ ಆದಷ್ಟು ಸಹಾಯವನ್ನು ಪ್ರಯತ್ನಪೂರ್ವಕವಾಗಿ ಹಠದಿಂದ ಮಾಡಿ ಮುಗಿಸಿದ್ದಾರೆ. ಇದೀಗ ಎಲ್ಲ ಕಡೆ ಇವರಿಗೆ ಮೆಚ್ಚುಗೆಯ ಸುರಿಮಳೆಯೇ ಹರಿದಿದೆ. ಇಂತಹ ಸತ್ಕಾರ್ಯ ಸಮಾಜದ ಎಲ್ಲ ವರ್ಗದ ಜನರಿಗೆ ಸ್ಪೂರ್ತಿದಾಯಕವಾಗಿದೆ.