ನ್ಯೂಸ್ ನಾಟೌಟ್ :ಕೊಡಗು ಹಲವು ಪ್ರವಾಸಿ ಕೇಂದ್ರಗಳನ್ನು ಹೊಂದಿರುವ ಜಿಲ್ಲೆ.ಅದರಲ್ಲೂ ಮಡಿಕೇರಿ ಎಂದರೆ ಎಲ್ಲರ ಹಾಟ್ ಫೇವರಿಟ್ ಜಾಗ. ಇಲ್ಲಿನ ವಾತಾವರಣವನ್ನು ಜನ ಇಷ್ಟ ಪಡುತ್ತಿದ್ದು ನೂರಾರು ಪ್ರವಾಸಿಗರು ಇಲ್ಲಿ ಬಂದು ಪ್ರಕೃತಿ ರಮಣೀಯ ತಾಣಗಳನ್ನು ನೋಡಿ ಎಂಜಾಯ್ ಮಾಡುತ್ತಾರೆ.
ದರ ಹೆಚ್ಚಳದ ಬಿಸಿ:
ಹೊಸ ವರ್ಷ ಬಂದೇ ಬಿಟ್ಟಿದೆ. ಹೊಸ ವರುಷದ ಸಂಭ್ರದಲ್ಲಿದ್ದ ಕೊಡಗಿಗೆ ಭೇಟಿ ನೀಡುವ ಪ್ರವಾಸಿಗರಿಗೆ ದರ ಏರಿಕೆಯ ತಲೆಬಿಸಿ ಶುರುವಾಗಿದೆ.ನಿರ್ವಹಣೆ ಉದ್ದೇಶದಿಂದ ಆದಾಯ ಕ್ರೋಢೀಕರಣಕ್ಕೆ ಮುಂದಾಗಿರುವ ಕೊಡಗು ವೃತ್ತದ ಅರಣ್ಯ ಇಲಾಖೆ ಕುಶಾಲನಗರ ತಾಲೂಕಿನ ಪ್ರಮುಖ ಪ್ರವಾಸಿ ತಾಣಗಳಾದ ಕಾವೇರಿ ನಿಸರ್ಗಧಾಮ, ದುಬಾರೆ ಹಾಗೂ ಹಾರಂಗಿ ಸಾಕಾನೆ ಶಿಬಿರಗಳ ಪ್ರವೇಶ ದರ ಏರಿಕೆ ಮಾಡಿದೆ.
ಈಗಿನ ದರವೆಷ್ಟು?
ಕಾವೇರಿ ನಿಸರ್ಗಧಾಮದಲ್ಲಿದ್ದ 30 ರೂ. ಪ್ರವೇಶ ದರ 60 ರೂ.ಗಳಿಗೆ ಏರಿಕೆ ಮಾಡಲಾಗಿದೆ. ದುಬಾರೆಗೆ ಪ್ರವೇಶ ಶುಲ್ಕ 50 ರಿಂದ 100 ರೂ. ಹಾಗೂ ಹಾರಂಗಿ ಸಾಕಾನೆ ಶಿಬಿರಕ್ಕೆ 30 ರಿಂದ 50 ರೂ.ಗಳಿಗೆ ಏರಿಕೆ ಮಾಡಲಾಗಿದೆ. ಜನವರಿ 1ರಿಂದ ಈ ಶುಲ್ಕಗಳು ಅನ್ವಯವಾಗಿದೆ.
ದರ ಹೆಚ್ಚಳ ಏಕೆ?
ಈಗಾಗಲೆ ಕಾವೇರಿ ನಿಸರ್ಗಧಾಮದಲ್ಲಿರುವ ಹಳೆಯ ತೂಗುಸೇತುವೆ ಶಿಥಿಲಾವಸ್ಥೆಯಲ್ಲಿರುವ ಕಾರಣ ಈ ಸೇತುವೆ ಮೇಲಿನ ಓಡಾಟವನ್ನು ಬಂದ್ ಮಾಡಲಾಗಿದೆ. ಸೇತುವೆ ದುರಸ್ತಿಗೆ ಅಂದಾಜು 45 ಲಕ್ಷ ರೂ. ಅಗತ್ಯವಿದೆ. ಸೇತುವೆ ದುರಸ್ತಿ ಸೇರಿದಂತೆ ಮಾನವ ಪ್ರಾಣಿ ಸಂಘರ್ಷದ ಪರಿಹಾರ ಮೊತ್ತ ಕೂಡ ಏರಿಕೆಯಾಗಿರುವ ಕಾರಣ ಇದರ ನಿರ್ವಹಣೆ ಉದ್ದೇಶದಿಂದ ಪ್ರವೇಶ ದರ ಏರಿಕೆ ಮಾಡಿ ಆದಾಯ ಕ್ರೋಢೀಕರಣಕ್ಕೆ ಅರಣ್ಯ ಇಲಾಖೆ ಮುಂದಾಗಿದೆ.
ಒಳ್ಳೆಯ ಕೆಲಸಕ್ಕೆ ಬಳಕೆ :
ಇತರೆ ರಾಜ್ಯಗಳಿಗೆ ಹೋಲಿಸಿದರೆ ಕೊಡಗಿನಲ್ಲಿ ಪ್ರವಾಸಿ ತಾಣಗಳ ಪ್ರವೇಶ ಶುಲ್ಕ ಕೊಂಚ ಕಡಿಮೆಯಿದೆ. ಹೀಗಾಗಿ ಶುಲ್ಕ ಏರಿಕೆ ಮಾಡಲಾಗಿದೆ. ಇದರಿಂದ ಬರುವ ಆದಾಯವನ್ನು ಕೊಡಗು ಮಾನವ ಪ್ರಾಣಿ ಸಂಘರ್ಷ ಉಪಶಮನ ನಿಧಿಗಳಿಗೆ ಬಳಕೆ ಮಾಡಲಾಗುತ್ತದೆ ಎಂದು ಅರಣ್ಯ ಇಲಾಖೆ ತಿಳಿಸಿದೆ.
ಪ್ರವಾಸಿಗರ ಸಂಖ್ಯೆ ಹೆಚ್ಚಳ:
ಕೊಡಗಿನಲ್ಲಿ ಪ್ರವಾಸಿಗರ ಸಂಖ್ಯೆಯಲ್ಲಿ ಹೆಚ್ಚಳ ಕಂಡು ಬಂದಿದೆ. ದಿನದಿಂದ ದಿನಕ್ಕೆ ಇಲ್ಲಿನ ಪ್ರವಾಸಿಗರ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ.ಡಿಸೆಂಬರ್ನಲ್ಲಿ ಡಿ.24 ರಿಂದ 30 ರವರೆಗೆ ಪ್ರತಿದಿನ ಅಂದಾಜು 3000 ಪ್ರವಾಸಿಗರು ಆಗಮಿಸಿದ್ದು , ಕ್ರಿಸ್ಮಸ್ ದಿನ 4300 ಮಂದಿ ಭೇಟಿ ನೀಡಿದ್ದಾರೆ.