ನ್ಯೂಸ್ ನಾಟೌಟ್ :ಕೆವಿಜಿ ಮೆಡಿಕಲ್ ಕಾಲೇಜಿನಲ್ಲಿ ವೈದ್ಯಕೀಯ ವಿಷಯಗಳ ಮೇಲಿನ ಮಾಸಿಕ ವೈದ್ಯಕೀಯ ಶೈಕ್ಷಣಿಕ ಚರ್ಚಾರ್ಹ ಕಾರ್ಯಗಾರವು ಕಾಲೇಜಿನ ಸಭಾಂಗಣದಲ್ಲಿ ನಿನ್ನೆ ನಡೆಯಿತು.ಕಿವಿ, ಗಂಟಲು ವಿಭಾಗ , ಜಂಟಿಯಾಗಿ ಶಸ್ತ್ರ ಚಿಕಿತ್ಸೆ,ರೋಗಲಕ್ಷಣ ಶಾಸ್ತ್ರ, ಮತ್ತು ವಿಕಿರಣ ಶಾಸ್ತ್ರ ವಿಭಾಗದ ಕಿರಿಯ ವೈದ್ಯರುಗಳು ತಮ್ಮ ವಿಭಾಗದಲ್ಲಿ ತಾವು ರೋಗಿಗಳನ್ನು ಪರೀಕ್ಷಿಸಿದಾಗ ಕಂಡುಬಂದ ಚರ್ಚಾರ್ಹ ರೋಗಲಕ್ಷಣಗಳನ್ನು ಮಾಸಿಕ ವೈದ್ಯಕೀಯ ಶೈಕ್ಷಣಿಕ ಕಾರ್ಯಗಾರದಲ್ಲಿ ಮಂಡಿಸಿದರು.
ಕಳೆದ ಒಂದು ವರ್ಷದಿಂದ ರೋಗಿಯೊಬ್ಬರ ಮೂಗಿನಲ್ಲಿ ನಿರ್ಲಕ್ಷಿತ ವಸ್ತು ಸಿಕ್ಕಿ ಹಾಕಿಕೊಂಡಿತ್ತು. ಅತ್ಯಾಧುನಿಕ ಉಪಕರಣದಿಂದ ಡಾ. ಮೋಹನ್ ಅಪ್ಪಾಜಿ ಅವರ ಮಾರ್ಗದರ್ಶನದಲ್ಲಿ ಅದನ್ನು ಯಶಸ್ವಿಯಾಗಿ ಹೊರ ತೆಗೆಯಲಾಯಿತು.ಈ ವಿಧಾನವನ್ನು ಸವಿವರವಾಗಿ ಇ ಎನ್ ಟಿ ಯ ಕಿರಿಯ ಸ್ಥಾನೀಯ ವೈದ್ಯೆ ಡಾ. ನೀರಜಾ ಎಸ್ .ನಾಯರ್ ಪ್ರಸ್ತುತ ಪಡಿಸಿ ಇದೇ ರೀತಿಯ ಮತ್ತೊಂದು ಘಟನೆಯನ್ನು ವಿವರಿಸಿದರು. ವ್ಯಕ್ತಿಯೊಬ್ಬರು ಕಾರು ಅಪಘಾತದಲ್ಲಿ ಗಾಯಗೊಂಡಿದ್ದರು, ಈ ವೇಳೆ ಕಾರಿನ ಸ್ಟೀಯರಿಂಗ್ ನ ಬಿಡಿಭಾಗವೊಂದು ಮೂಗನ್ನು ಸೇರಿಕೊಂಡಿತ್ತು. ಸುಮಾರು ಒಂದು ವರುಷದ ಬಳಿಕ , ರೋಗಿಯನ್ನು ಪರೀಕ್ಷೆಗೊಳಪಡಿಸಿದಾಗ ಮೂಗಿನ ರಂಧ್ರದಲ್ಲಿ ಅದು ಪತ್ತೆಯಾಗಿತ್ತು.ಡಾ. ಮೋಹನ್ ಅಪ್ಪಾಜಿ ಮತ್ತು ತಂಡದ ವೈದ್ಯರು ರೋಗಿಯ ಮೂಗಿನಿಂದ ಹೊರತೆಗೆದ ವಿಧಾನವನ್ನು, ಮತ್ತು ಸಾಧಕ ಬಾಧಕಗಳನ್ನು ವೈದ್ಯಕೀಯ ಚರ್ಚಾ ಕಾರ್ಯಾಗಾರದಲ್ಲಿ ಮಂಡಿಸಿದರು.
ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಕೆ ವಿ ಜಿ ಮೆಡಿಕಲ್ ಕಾಲೇಜಿನ ವೈದ್ಯಕೀಯ ನಿರ್ದೇಶಕ ಡಾ. ಕೆ ವಿ ಚಿದಾನಂದ , ತನ್ನ ವೃತ್ತಿಜೀವನದಲ್ಲಿ ಕಂಡಂತಹ ಕೆಲವು ಫಾರಿಜಿನ್ ಬಾಡಿ ಬಾಧಿತ ರೋಗಿಗಳ ರೋಗಲಕ್ಷಣಗಳ ಬಗ್ಗೆ ತಿಳಿಸಿದರು. ವೈದ್ಯಕೀಯ ಸಮಸ್ಯೆಗಳು ಕೆಲವು ಬಾರಿ ಗ್ರಹಿಸಲಾಗದ ರೀತಿಯಲ್ಲಿರುತ್ತವೆ, ನಿರಂತರ ಕಲಿಕೆಯ ತುಡಿತ ನಮ್ಮನ್ನು ಉತ್ತಮ ವೈದ್ಯರನ್ನಾಗಿಸುತ್ತದೆ ಎಂದು ಅಭಿಪ್ರಾಯ ಪಟ್ಟರು.
ಮೆಡಿಕಲ್ ಕಾಲೇಜ್ ನ ಶಸ್ತ್ರ ಚಿಕಿತ್ಸೆ ವಿಭಾಗದ ಡಾ. ಬಾಲಕೃಷ್ಣ ಪ್ರಾಧ್ಯಾಪಕರು, ಮುಖ್ಯಸ್ಥರು ಇವರ ಮಾರ್ಗದರ್ಶನದಲ್ಲಿ ರೋಗಿಯೊಬ್ಬರ ಸ್ತನದ ಕ್ಷಯರೋಗ ( Tubercular) ಅನ್ನು ಯಶಸ್ವಿಯಾಗಿ ಶಸ್ತ್ರ ಚಿಕಿತ್ಸೆಯ ಮೂಲಕ ತೆಗೆದು , ಔಷಧಿ ಮುಖಾಂತರ ಗುಣಪಡಿಸಿದ್ದೇವೆ. ಇದರ ರೋಗ ನಿರ್ಣಯದಲ್ಲಿ ರೋಗಲಕ್ಷಣ ಶಾಸ್ತ್ರ ( pathology) ವಿಭಾಗದವರ ಪಾತ್ರ ಮುಖ್ಯವಾಗಿತ್ತು. ಇದು ಅತಿ ವಿರಳವಾದ ಕಾಯಿಲೆ ಎಂದು ಮೆಡಿಕಲ್ ಕಾಲೇಜ್ ನ ಶಸ್ತ್ರ ಚಿಕಿತ್ಸಾ ಸ್ಥಾನೀಯ ವೈದ್ಯೆ ಡಾ. ಪ್ರಿಯದರ್ಶಿನಿ ಎಸ್ ನಾಯಕ್ ಪ್ರಸ್ತುತ ಪಡಿಸಿದರು.
ಕಾರ್ಯಾಗಾರದ ಆಯೋಜಕರಾಗಿ ಶರೀರ ರಚನಾ ಶಾಸ್ತ್ರ ವಿಭಾಗದ ಪ್ರಾದ್ಯಾಪಕ ಡಾ.ಸಚಿನ್ ಕೆ.ಯಸ್. ಕ್ಷಯ ರೋಗ ತಜ್ಞ ಡಾ.ಪ್ರೀತಿರಾಜ್ ಬಲ್ಲಾಳ್, ಕಿವಿ, ಗಂಟಲು ಶಾಸ್ತ್ರ ವಿಭಾಗದ ಡಾ. ಮೊಹಮ್ಮದ್ ಜಲವ ಮತ್ತು ರೋಗ ಲಕ್ಷಣ ಶಾಸ್ತ್ರ ವಿಭಾಗದ ಡಾ. ಅಂಜಲಿ ಅಮಿತ್ ಕಾರ್ಯಕ್ರಮವನ್ನು ನಿರ್ವಹಿಸಿದರು ಮಕ್ಕಳ ತಜ್ಞೆ ಡಾ.ಅಮೃತ ಕೆ.ಯವರು ಕಾರ್ಯಾಗಾರವನ್ನು ನಡೆಸಿಕೊಟ್ಟರು. ಈ ಕಾರ್ಯಕ್ರಮದಲ್ಲಿ ಕೆ.ವಿ.ಜಿ. ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಡೀನ್ ಡಾ. ನೀಲಾಂಬಿಖೈ ನಟರಾಜನ್ ಹಾಗೂ ಸಂಸ್ಥೆಯ ಎಲ್ಲ ವಿಭಾಗದ ಮುಖ್ಯಸ್ಥರು,ಸ್ನಾತಕೋತ್ತರ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಸುಮಾರು ೨೦೦ಕ್ಕೂ ಅಧಿಕ ವೈದ್ಯರು ಮತ್ತು ಪ್ರಾದ್ಯಾಪಕರು ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದರು.