ನ್ಯೂಸ್ ನಾಟೌಟ್: ಕಳೆದ ಕೆಲವು ತಿಂಗಳ ಹಿಂದೆ ನಾಪತ್ತೆಯಾಗಿದ್ದ ಸಂಪಾಜೆ ಗ್ರಾಮದ ಇಬ್ಬರು ಮಹಿಳೆಯರನ್ನು ಪತ್ತೆ ಹಚ್ಚುವಲ್ಲಿ ಸುಳ್ಯ ಪೊಲೀಸರು ಯಶಸ್ವಿಯಾಗಿದ್ದಾರೆ. ಒಬ್ಬಾಕೆ ಬೆಳ್ತಂಗಡಿಯಲ್ಲಿ ಪತ್ತೆಯಾಗಿದ್ದರೆ ಮತ್ತೊಬ್ಬಳು ದೂರದ ಪುಣೆಯಲ್ಲಿ ಪತ್ತೆಯಾಗಿದ್ದಾಳೆ. ವಿಶೇಷವೆಂದರೆ ಇವರಿಬ್ಬರು ಪ್ರತ್ಯೇಕ ಪ್ರಕರಣಗಳಲ್ಲಿ ಸಂಪಾಜೆಯಿಂದ ಒಂದೇ ದಿನ ನಾಪತ್ತೆಯಾಗಿದ್ದರು. ಇದೀಗ ಒಂದೇ ದಿನ ಪತ್ತೆಯಾಗಿ ಅಚ್ಚರಿ ಮೂಡಿಸಿದ್ದಾರೆ.
ಒಂದು ತಿಂಗಳ ಹಿಂದೆ ಇಬ್ಬರು ಮಹಿಳೆಯರು ನಾಪತ್ತೆಯಾಗಿದ್ದರು. ನಿಗೂಢವಾಗಿ ನಾಪತ್ತೆಯಾದ ಬೆನ್ನಲ್ಲೇ ಹಲವಾರು ಅನುಮಾನಗಳು ವ್ಯಕ್ತವಾಗಿದ್ದವು. ಆದರೆ ಸುಳ್ಯ ಪೊಲೀಸರು ವಿವಿಧ ಕಡೆಗಳಿಂದ ಮಾಹಿತಿ ಸಂಗ್ರಹಿಸಿ ಕೊನೆಗೂ ಎರಡೂ ನಾಪತ್ತೆ ಪ್ರಕರಣವನ್ನು ಭೇದಿಸಿರುವುದು ಶ್ಲಾಘನೀಯ ವಿಚಾರ. ಈ ಬಗ್ಗೆ ಬಂದಿರುವ ಮಾಹಿತಿ ಪ್ರಕಾರ ನಾಪತ್ತೆಯಾಗಿದ್ದ ಇಬ್ಬರು ಮಹಿಳೆಯರಲ್ಲಿ ಒಬ್ಬಳಾದ ಮಹಾಲಕ್ಷ್ಮೀ ಎಂಬಾಕೆ ಬೆಳ್ತಂಗಡಿಯಲ್ಲಿ ರಬ್ಬರ್ ಟ್ಯಾಪಿಂಗ್ ಕೆಲಸಕ್ಕೆ ಸೇರಿದ್ದಳು. ಈ ಮಾಹಿತಿ ತಿಳಿದ ತಕ್ಷಣ ಪೊಲೀಸರು ಅವಳನ್ನು ಸುಳ್ಯ ಠಾಣೆಗೆ ಕರೆ ತಂದಿದ್ದಾರೆ.
ನಾಪತ್ತೆಯಾಗಿದ್ದ ಮತ್ತೋರ್ವ ಸಂಪಾಜೆಯ ಮಹಿಳೆ ಪ್ರಿಯಕರನೊಂದಿಗೆ ಪುಣೆಯಲ್ಲಿ ಪ್ರತ್ಯಕ್ಷವಾಗಿದ್ದಾಳೆ. ಈಕೆಯ ಮಾಹಿತಿ ಪಡೆದು ಪೊಲೀಸರು ಪುಣೆಗೆ ಹೋದಾಗ ಆಕೆ ತಾನು ಬರುವುದೇ ಇಲ್ಲ. ನನಗೆ ಪತಿ ಬೇಡ ಪ್ರಿಯಕರ ಸಾಕು ಎಂದು ಹಠ ಹಿಡಿದಿದ್ದಾಳೆ. ಈ ಹಿನ್ನೆಲೆಯಲ್ಲಿ ಆಕೆ ಮತ್ತು ಪ್ರಿಯಕರನ ಹೇಳಿಕೆಗಳನ್ನು ಪಡೆದುಕೊಂಡು ಪೊಲೀಸರು ವಾಪಸ್ ಆಗಿದ್ದಾರೆ. ಕೈಪಡ್ಕ ಮೂಲದ ನಾಗವೇಣಿ ವಯಸ್ಸಿಗೆ ಮೂರು ಮಕ್ಕಳ ತಾಯಿ ಅನ್ನುವುದು ವಿಶೇಷ.