ನ್ಯೂಸ್ ನಾಟೌಟ್: ಹೆಣ್ಣು ಮಕ್ಕಳ ಸಬಲೀಕರಣಕ್ಕೆ ಸರಕಾರ ಹಲವು ಯೋಜನೆಗಳನ್ನು ರೂಪಿಸಿರುವುದನ್ನು ನೋಡಿದ್ದೇವೆ. ಆದರೆ ಬಸವರಾಜ್ ಬೊಮ್ಮಾಯಿ ನೇತೃತ್ವದ ರಾಜ್ಯ ಸರಕಾರ ಹೆಣ್ಣು ಮಕ್ಕಳ ಆತ್ಮ ರಕ್ಷಣೆಗಾಗಿ ಕರಾಟೆಯನ್ನು ಅಲ್ಪಾವಧಿ ಕೋರ್ಸ್ ಆಗಿ ಪ್ರಾರಂಭ ಮಾಡುವುದಕ್ಕೆ ಚಿಂತನೆ ನಡೆಸಿದೆ. ಸ್ವತಃ ಈ ವಿಚಾರವನ್ನು ಸಿಎಂ ಬೊಮ್ಮಾಯಿ ಇದೀಗ ಬೆಳಗಾವಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ತಿಳಿಸಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಹೆಣ್ಣು ಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣಗಳು ಹೆಚ್ಚುತ್ತಿವೆ. ಅತ್ಯಾಚಾರ ಪ್ರಕರಣಕ್ಕೆ ಸಿಲುಕಿ ಮಹಿಳೆ ನಲುಗಿ ಹೋಗಿದ್ದಾಳೆ. ಇಂತಹ ಸಂದರ್ಭದಲ್ಲಿ ಆಕೆಗೆ ಅಗತ್ಯ ಆತ್ಮ ರಕ್ಷಣೆಯ ಕಲೆಯನ್ನು ಒದಗಿಸುವುದು ಸರಕಾರದ ಕರ್ತವ್ಯವಾಗಿದೆ. ಈ ಹಿನ್ನೆಲೆಯಲ್ಲಿ ಮಾತನಾಡಿದ ಬೊಮ್ಮಾಯಿ, ಮುಂದಿನ ಶೈಕ್ಷಣಿಕ ವರ್ಷದಿಂದ ಯೋಗದೊಂದಿಗೆ ಹೆಣ್ಣು ಮಕ್ಕಳ ಆತ್ಮರಕ್ಷಣೆಗೆ ಅಲ್ಪಾವಧಿ ಕೋರ್ಸುಗಳ ಪ್ರಾರಂಭಕ್ಕೆ ಕರ್ನಾಟಕ ಸರಕಾರ ಚಿಂತನೆ ನಡೆಸಿದೆ. ಪಿಯುಸಿ ಹಂತದಿಂತ ತರಬೇತಿ ನೀಡುವುದು ಸೂಕ್ತ ಎಂದು ಅಭಿಪ್ರಾಯಪಟ್ಟಿದ್ದಾರೆ.
ಬೆಳಗಾವಿಯಲ್ಲಿ ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆ ವತಿಯಿಂದ ಆಯೋಜಿಸಿದ್ದ ಓಬವ್ವ ಆತ್ಮರಕ್ಷಣಾ ಕಲೆ ಕರಾಟೆ ಪ್ರದರ್ಶನ ವೀಕ್ಷಿಸಿದ ಬಳಿಕ ಮಾತನಾಡಿದ ಬೊಮ್ಮಾಯಿ, ಎಲ್ಲಾ ಶಿಕ್ಷಣ ಸಂಸ್ಥೆಗಳು ಅಲ್ಪಾವಧಿ ಕೋರ್ಸುಗಳನ್ನು ಕಲಿಸುವ ಅವಶ್ಯಕತೆ ಇದೆ. ಮುಂದಿನ ಶೈಕ್ಷಣಿಕ ವರ್ಷದಿಂದ ಯೋಗದೊಂದಿಗೆ ಹೆಣ್ಣುಮಕ್ಕಳಿಗೆ ಆತ್ಮರಕ್ಷಣೆಗೆ ಅಲ್ಪಾವಧಿ ಕೋರ್ಸುಗಳನ್ನು ಕೂಡ ಪಿಯುಸಿ ಹಂತದಿಂತ ತರಬೇತಿ ನೀಡುವುದು ಸೂಕ್ತ. ಅದರ ಬಗ್ಗೆ ಒಂದು ನಿರ್ಧಾರಕ್ಕೆ ಬರಲಾಗುವುದು ಎಂದು ತಿಳಿಸಿದರು.
ಆತ್ಮರಕ್ಷಣೆ ಪ್ರತಿ ನಾಗರಿಕನಿಗೆ ಅಗತ್ಯ. ಗೃಹ ಸಚಿವನಾಗಿದ್ದ ಸಂದರ್ಭದಲ್ಲಿ ಕೆಲವು ನಿರ್ಧಾರಗಳನ್ನು ತೆಗೆದುಕೊಂಡಿದ್ದು, ಆತ್ಮರಕ್ಷಣೆಗಾಗಿ ಕರಾಟೆ ತರಬೇತಿಯನ್ನು ಹೆಣ್ಣುಮಕ್ಕಳಿಗೆ ನೀಡಬೇಕೆಂದು ತೀರ್ಮಾನಿಸಲಾಗಿತ್ತು. ವಸತಿ ಶಿಕ್ಷಣ ಸಂಸ್ಥೆ ಇದನ್ನು ಅಳವಡಿಸಿಕೊಂಡು ದೊಡ್ಡ ಪ್ರಮಾಣದಲ್ಲಿ ಕಳೆದ ಒಂದು ವರ್ಷದಲ್ಲಿ ತರಬೇತಿ ನೀಡಿರುವುದು ಶ್ಲಾಘನೀಯ ಎಂದರು.
ಸರಕಾರ ಈ ಕಾರ್ಯಕ್ರಮ ವಿಸ್ತರಿಸಿ ಹೆಣ್ಣುಮಕ್ಕಳ ಸುರಕ್ಷತೆಗೆ ಆದ್ಯತೆ ನೀಡಿದೆ. ನಿರ್ಭಯ ಯೋಜನೆಯನ್ನು 700 ಕೋಟಿ ರೂ.ಗಳ ವೆಚ್ಚದಲ್ಲಿ ಕೈಗೊಳ್ಳಲಾಗಿದೆ. ಇದನ್ನು ಎಲ್ಲಾ ನಗರಗಳಲ್ಲಿ ವಿಸ್ತರಣೆ ಮಾಡಲು ತೀರ್ಮಾನಿಸಲಾಗಿದೆ. ಈ ನಿಟ್ಟಿನಲ್ಲಿ ಎಲ್ಲಾ ಕ್ರಮ ಕೈಗೊಳ್ಳಲಾಗುವುದು ಭರವಸೆ ನೀಡಿದರು.