ವರದಿ: ನಿಶಾ, ಬೆಳ್ತಂಗಡಿ
ನ್ಯೂಸ್ ನಾಟೌಟ್: ಕಾಡು ಇದ್ದರೆ ನಾಡು,ಅರಣ್ಯ ಸಂರಕ್ಷಣೆ ನಮ್ಮೆಲ್ಲರ ಹೊಣೆ,ಅರಣ್ಯವನ್ನು ಮುಂದಿನ ಪೀಳಿಗೆಗೆ ಉಳಿಸುವಂತಹ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ.ಈ ನಿಟ್ಟಿನಲ್ಲಿ ಮೂಡಬಿದ್ರೆ ಆಳ್ವಾಸ್ ನಲ್ಲಿ ನಡೆಯುತ್ತಿರುವಂತಹ ಜಾಂಬೂರಿಯಲ್ಲಿ ಅರಣ್ಯ ಮೇಳ ವಿಶೇಷ ರೀತಿಯಲ್ಲಿ ಜನರನ್ನು ಆಕರ್ಷಿಸುತ್ತಿದೆ. ಅರಣ್ಯ ಸಂರಕ್ಷಣೆ, ಪ್ರಾಣಿ ಸಂಕುಲ, ಸಸ್ಯಸಂಪತ್ತು, ಜಲಸಂಪತ್ತು ಹೀಗೆ ವಿವಿಧ ಆಯಾಮಗಳಲ್ಲಿ ಪರಿಸರದ ಸೊಬಗನ್ನು ಮಕ್ಕಳಿಗೆ ಪರಿಚಯಿಸುವ ವಿಶಿಷ್ಟ ಪ್ರಯತ್ನ ಆಳ್ವಾಸ್ ಸಾಂಸ್ಕೃತಿಕ ಜಾಂಬೂರಿಯಲ್ಲಿ ನಡೆಯುತ್ತಿದೆ.
ಅರಣ್ಯದ ಚಿತ್ರಣವೇ ಅದ್ಭುತ:
ಜಾಂಬೂರಿಯಲ್ಲಿ ನಡೆಯುತ್ತಿರುವ ಐದು ಮೇಳಗಳಲ್ಲಿ ಒಂದಾದ ಅರಣ್ಯ ಮೇಳ ನೈಸರ್ಗಿಕತೆಯನ್ನು ಹೋಲುವಂತೆ ಭಿನ್ನವಾಗಿ ಮಾಡಲಾಗಿದೆ. ಇಲ್ಲಿನ ಅರಣ್ಯದ ಚಿತ್ರಣ ನೋಡುಗರನ್ನು ದಿಗ್ಭ್ರಾಂತರನ್ನಾಗಿಸುತ್ತಿದೆ.ದೇಶದಾದ್ಯಂತ ವಿವಿಧ ಕಡೆಗಳಿಂದ ಬಂದಿರುವ ವಿದ್ಯಾರ್ಥಿಗಳು, ಶಿಕ್ಷಕರು, ತರಬೇತುದಾರರು, ಸಂಪನ್ಮೂಲ ವ್ಯಕ್ತಿಗಳು, ಹಾಗೂ ಸಾರ್ವಜನಿಕರು ಅರಣ್ಯ ಸೌಂದರ್ಯ ವೀಕ್ಷಿಸಿ ಆಶ್ಚರ್ಯಚಕಿತರಾಗಿದ್ದಾರೆ.
ಆಕರ್ಷಣೆ ಕೇಂದ್ರ ಬಿಂದು ಹುಲಿ,ಮೊಸಳೆ:
ಆಳ್ವಾಸ್ ಕ್ಯಾಂಪಸ್ಗೆ ತಾಗಿಕೊಂಡಿರುವ ಪರಿಸರ ಪ್ರೇಮಿ ಡಾ.ಎಲ್.ಸಿ ಸೋನ್ಸ್ ಅವರ ಏಳು ಎಕರೆ ಜಾಗದಲ್ಲಿ ಕಾಡಿನ ಪರಿಕಲ್ಪನೆ ಯೊಂದು ಮೂಡಿಬಂದಿದ್ದು, ಮನೋಜ್ಞವಾಗಿದೆ.ಕಾಡನ್ನು ಪ್ರವೇಶಿಸುವ ಮೊದಲು ಅರಣ್ಯ ಇಲಾಖೆಯ ಮಾಹಿತಿ ಕೇಂದ್ರ ವಿದ್ದು, ಇಲಾಖೆಯ ಮಾಹಿತಿಯಿರುವ ಕರಪತ್ರಗಳನ್ನು ಇಲ್ಲಿ ಮಕ್ಕಳಿಗೆ ನೀಡಲಾಗುತ್ತದೆ. ಜತೆಗೆ ಕಾಡು ಪ್ರವೇಶಿಸುವ ಮಾರ್ಗಸೂಚಿಗಳನ್ನು ಕೂಡ ಇಲ್ಲಿ ತಿಳಿಸಲಾಗುತ್ತದೆ.ಮುಂದಕ್ಕೆ ಹೋದಾಗ ಹುಲಿಯೊಂದು ಬಾಯ್ತೆರದು ನಿಂತಿರುವ ಆಕೃತಿಯಿದ್ದು, ಅದರ ಬಾಯಿಯೊಳಗಿಂದಲೇ ಒಳ ಪ್ರವೇಶಿಸಬೇಕಾಗುತ್ತದೆ. ಇನ್ನೊಂಧು ಕಡೆ ಸುಮಾರು 40 ಅಡಿ ಉದ್ದದ ಮೊಸಳೆ ಯೊಂದು ಬಾಯ್ತೆರೆದು ಕೊಂಡಿರುವ ದೃಶ್ಯ ನೈಜ ಮೊಸಳೆಯಂತೆ ಭಾಸವಾಗುತ್ತದೆ. ಇದರ ಬಾಯಿ ಮೂಲಕ ಒಳಪ್ರವೇಶಿಸಿ ಇನ್ನೊಂದು ಬದಿಯಲ್ಲಿ ಹೊರ ಬಂದಾಗ ಭಯದ ಜತೆಗೆ ಕುತೂಹಲವನ್ನುಂಟು ಮಾಡುತ್ತದೆ ಈ ಅರಣ್ಯ ಮೇಳ.
ವಿಶೇಷ ಅನುಭವ:
ಇನ್ನೊಂದು ಕಡೆ ರೈತ ಮತ್ತು ಕಾಡಿಗಿರುವ ಸಂಬಂಧಗಳ ಪರಿಚಯವನ್ನು ಸುಂದರವಾಗಿ ಚಿತ್ರಿಸಲಾಗಿದೆ. ಕಮ್ಮಾರನ ಕಸುಬು, ಆತ ತಯಾರಿಸಿದ ವಸ್ತುಗಳ ಮಾರಾಟ ಮತ್ತು ಪ್ರದರ್ಶನ, ಗುರುಕುಲ ಮಾದರಿಯ ಶಿಕ್ಷಣ ಪದ್ಧತಿ ತನ್ನ ನಕ್ಷತ್ರ ಮತ್ತು ರಾಶಿಗೆ ಹೋಲಿಕೆಯಾಗುವ ಅರಣ್ಯ ಸಸಿಗಳ ಮಾಹಿತಿ ,ಕಾಡಾನೆಯ ದರ್ಶನ, ಮತ್ತೊಂದೆಡೆ ವಿಶ್ರಾಂತಿ ಪಡೆಯುತ್ತಿರುವ ಹುಲಿ ಹೀಗೆ ಕಾಡಿನೊಳಗಿನ ನೈಜ ಪ್ರಾಣಿಗಳನ್ನು ನೋಡಿದಷ್ಟೆ ಅನುಭವ ಮತ್ತು ಆನಂದವು ಜಾಂಬೂರಿಯ ಅರಣ್ಯದಲ್ಲಿ ಸಿಗಲಿದೆ..
ಝುಳು ಝುಳು ನೀರಿನ ನಿನಾದ:
ನಾಗಬನ, ಪಕ್ಕದಲ್ಲಿ ಜಲಪಾತ, ಇದರೊಂದಿಗೆ ಝುಳು ಝುಳು ಹರಿಯುವ ನೀರಿನ ನಿನಾದ. ಆ ನೀರು ಕೆರೆಯನ್ನು ಸೇರುವ ದೃಶ್ಯ ಒಂದೆಡೆಯಾದರೆ ಕುದುರೆಮುಖದ ಅರಣ್ಯವನ್ನು ನೆನಪಿಸುವ ರೀತಿಯಲ್ಲಿ ಸಿದ್ಧಗೊಂಡ ಹಸಿರ ವನ ಈ ಸೌಂದರ್ಯವನ್ನು ತೂಗುಸೇತುವೆ ಮೇಲೆ ನಿಂತು ಕಣ್ತುಂಬಿ ಸಂಭ್ರಮಿಸುವ ಅವಕಾಶವನ್ನು ಇಲ್ಲಿ ಕಲ್ಪಿಸಲಾಗಿದೆ.ಕಾಡನ್ನು ಇನ್ನೂ ಸುತ್ತಾಡಬೇಕೆಂಬ ಅಪೇಕ್ಷೆ ಇರುವವರಿಗೆ ಕೊನೆಯಲ್ಲಿ ಟ್ರಕ್ಕಿಂಗ್ ವ್ಯವಸ್ಥೆಯನ್ನು ಮಾಡಲಾಗಿದೆ. ಹೀಗೆ ಆಳ್ವಾಸ್ ಜಾಂಬೂರಿಯ ಅರಣ್ಯ ಪ್ರವೇಶಿಸಿದವರಿಗೆ ಅರಣ್ಯದ ಅನುಭವ ಮತ್ತು ಅನೇಕ ಕುತೂಹಲ, ಅಚ್ಚರಿಗಳನ್ನು ಕಾಣುವ ಅವಕಾಶ ಸಿಗಲಿದೆ.
ಒಳ್ಳೆಯ ಅವಕಾಶ:
ಒಂದು ದಿನದಲ್ಲಿ ಸುಮಾರು ೩೫ ರಿಂದ ೪೦ ಸಾವಿರದವರೆಗೆ ವೀಕ್ಷಕರು ಅರಣ್ಯವನ್ನು ವೀಕ್ಷಣೆ ಮಾಡಿದ್ದು, ಜನರು ನಿರಂತರವಾಗಿ ಬರುತ್ತಲೇ ಇದ್ದರೆ. ಅರಣ್ಯವನ್ನು ಹೇಗಿತ್ತು? ಯಾವೆಲ್ಲ ಪ್ರಾಣಿ-ಪಕ್ಷಿಗಳು ಅರಣ್ಯದಲ್ಲಿ ವಾಸಿಸುತ್ತಿದ್ದವು? ಎಂಬುದನ್ನು ಅಚ್ಚುಕಟ್ಟಾಗಿ ತೋರಿಸಿದ್ದಾರೆ. ಬೇರೆ ಬೇರೆ ಊರುಗಳಿಂದ ಬಂದಿರುವ ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಸಾರ್ವಜನಿಕರು ಅರಣ್ಯದ ಸೊಬಗನ್ನು ಸವಿಯುತ್ತಿದ್ದು, ಇದೇ ಮೊದಲ ಬಾರಿಗೆ ಅದ್ಭುತವಾಗಿ ನಿರ್ಮಿಸಲಾಗಿರುವ ಅರಣ್ಯ ಪ್ರದೇಶವನ್ನು ನೇರವಾಗಿ ನೋಡುತ್ತಿದ್ದೇವೆ. ಇದು ನಮಗೆ ಸಿಕ್ಕಿರುವ ಉತ್ತಮ ಅವಕಾಶ, ಇಲ್ಲಿ ಬರಲಾರದ ಸ್ನೇಹಿತರು ಒಂದು ಉತ್ತಮ ಅವಕಾಶವನ್ನು ಕಳೆದುಕೊಂಡಿದ್ದಾರೆ ಎಂದು ಅಭಿಪ್ರಾಯಪಟ್ಟಿದ್ದಾರೆ.