ನ್ಯೂಸ್ ನಾಟೌಟ್: ಡಾ | ರೇಣುಕಾ ಪ್ರಸಾದ್ ನಡೆಸಿದ ಪತ್ರಿಕಾಗೋಷ್ಠಿ ಬೆನ್ನಲ್ಲೇ ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ (ರಿ) ಅಧ್ಯಕ್ಷ ಡಾ | ಕೆ.ವಿ ಚಿದಾನಂದ ಕೂಡ ಪತ್ರಿಕಾಗೋಷ್ಠಿ ನಡೆಸಿದ್ದಾರೆ. ಡಾ | ರೇಣುಕಾ ಪ್ರಸಾದ್ ಹೇಳಿಕೆ ಸತ್ಯಕ್ಕೆ ದೂರವಾಗಿದೆ ಎಂದು ತಿಳಿಸಿದ್ದಾರೆ.
ಸಾರ್ವಜನಿಕರಿಗೆ ಒಂದಷ್ಟು ಸ್ಪಷ್ಟನೆ ನೀಡುವ ಅಗತ್ಯವಿದೆ. ಡಾ| ರೇಣುಕಾ ಪ್ರಸಾದ್ ರವರು ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ (ರಿ) ಸುಳ್ಯ ಕುರಿತು ನಡೆಸಿರುವ ಪತ್ರಿಕಾಗೋಷ್ಠಿ ಹಾಗೂ ಅದರಲ್ಲಿ ತಿಳಿಯಪಡಿಸಿದ ವಿಚಾರಗಳು ಸತ್ಯಕ್ಕೆ ದೂರವಾಗಿದೆ. ದುರುದ್ದೇಶಪೂರಿತವಾಗಿದ್ದು ಸಾರ್ವಜನಿಕರನ್ನು ತಪ್ಪು ದಾರಿಗೆ ಎಳೆಯುವ ಮಾಹಿತಿಯಾಗಿರುತ್ತದೆ. ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ ಕೆಳಗಡೆ ಇರುವ ಸಂಸ್ಥೆಗಳಲ್ಲಿ ಯಾವುದೇ ಗೊಂದಲಗಳಿರುವುದಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
ಸುದ್ದಿಗೋಷ್ಠಿಯುದ್ಧಕ್ಕೂ ಸಹೋದರನ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಡಾ | ಕೆ.ವಿ ಚಿದಾನಂದ , ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ (ರಿ)ಗೆ ಈಗ ಡಾ| ರೇಣುಕಾ ಪ್ರಸಾದ್ ಪ್ರಧಾನ ಕಾರ್ಯದರ್ಶಿಗಳಾಗಿರುವುದಿಲ್ಲ. ಆದರೆ ಅವರು ಪ್ರಧಾನ ಕಾರ್ಯದರ್ಶಿ ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ. ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ ನಲ್ಲಿ ಯಾವುದೇ ಗೊಂದಲಗಳಿಲ್ಲ. ಸೊಸೈಟಿಯು ವಿದ್ಯಾ ಸಂಸ್ಥೆಗಳ, ವಿದ್ಯಾರ್ಥಿ, ಸಿಬ್ಬಂದಿ ಪೋಷಕರ ಯಾವುದೇ ರೀತಿಯ ಕುಂದುಕೊರತೆಗಳನ್ನು ಹೋಗಲಾಡಿಸಲು ನಮ್ಮ ಆಡಳಿತ ಮಂಡಳಿ ಸಂಪೂರ್ಣವಾಗಿ ಸಿದ್ಧವಾಗಿದೆ ಎಂದು ತಿಳಿಸಿದರು.
ರೇಣುಕಾ ಪ್ರಸಾದ್ ಅವರು ನೀಡಿದ ಹೇಳಿಕೆಯಿಂದ ನಮ್ಮ ವಿದ್ಯಾ ಸಂಸ್ಥೆಯ ಸಿಬ್ಬಂದಿ, ವಿದ್ಯಾರ್ಥಿಗಳು ಗೊಂದಲಕ್ಕೆ ಒಳಗಾಗಬೇಕಾದ ಅವಶ್ಯಕತೆ ಇಲ್ಲ. ಪ್ರತಿಭಟನೆ ನಡೆಸುವ ಅವಶ್ಯಕತೆಯೂ ಇಲ್ಲ ಎಂದು ಡಾ | ಕೆ.ವಿ ಚಿದಾನಂದ ಸ್ಪಷ್ಟಪಡಿಸಿದರು.
ಡಿ.೨೩ರಿಂದ ಪ್ರತಿಭಟನೆ ನಡೆಸುವ ಎಚ್ಚರಿಕೆಯನ್ನು ನೀಡಿರುವುದು ಉತ್ತಮ ನಡೆಯಲ್ಲ. ಶೈಕ್ಷಣಿಕ ಸಂಸ್ಥೆಗಳನ್ನು ಬಹಿಷ್ಕರಿಸಿ ಪ್ರತಿಭಟನೆ ನಡೆಸುವುದು ಕಾನೂನು ಬಾಹಿರ ಕೃತ್ಯ. ಇಷ್ಟೆಲ್ಲ ಮಾಹಿತಿ ಇರುವ ಹೊರತಾಗಿಯೂ ಸಂಸ್ಥೆಯ ಆಡಳಿತ ಮಂಡಳಿಯ ಗಮನಕ್ಕೆ ತಾರದೆ ಶೈಕ್ಷಣಿಕ ಸಂಸ್ಥೆಗಳನ್ನು ನಿರ್ವಹಿಸದೆ ವಿದ್ಯಾರ್ಥಿ ಹಾಗೂ ಸಿಬ್ಬಂದಿಗೆ ಏನಾದರೂ ಸಮಸ್ಯೆಯಾದರೆ ಪ್ರತಿಭಟನೆಯಲ್ಲಿ ಭಾಗಿಯಾದವರ ವಿರುದ್ಧ ಶಿಸ್ತು ಕ್ರಮ ಜರುಗಿಸಲಾಗುತ್ತದೆ ಎಂದು ಡಾ | ಕೆ.ವಿ ಚಿದಾನಂದ ತಿಳಿಸಿದರು.
ನ್ಯಾಯಾಲಯದ ತೀರ್ಪು ನಮ್ಮ ಪರ ಇದೆ. ಈ ನಡುವೆ ರೇಣುಕಾ ಪ್ರಸಾದ್ ಅವರು ಸಂಸ್ಥೆಯ ಸಿಬ್ಬಂದಿಯನ್ನು ಸಂಸ್ಥೆಯ ವಿರುದ್ಧವೇ ಎತ್ತಿಕಟ್ಟುವ ಪ್ರಯತ್ನ ನಡೆಸುತ್ತಿದ್ದಾರೆ. ಇದು ಕಾನೂನುಬಾಹಿರವಾದ ವಿಚಾರವಾಗಿದೆ ಎಂದು ಡಾ | ಕೆ.ವಿ ಚಿದಾನಂದ ತಿಳಿಸಿದರು. ಮುಂದುವರಿದು ಮಾತನಾಡಿದ ಅವರು ನ್ಯಾಯಾಲಯವು ನಮ್ಮ ಸಂಸ್ಥೆಯ ಆಡಳಿತ ಮಂಡಳಿಯು ತೆಗೆದುಕೊಂಡಿರುವ ನಿರ್ಣಯಗಳನ್ನು ಅಂಗೀಕರಿಸಿ ಸಂಸ್ಥೆಯನ್ನು ಉತ್ತಮ ರೀತಿಯಲ್ಲಿ ನಡೆಸಲು ಅವಕಾಶ ಮಾಡಿಕೊಟ್ಟಿದೆ ಅನ್ನುವುದನ್ನು ನಾನು ಸಾರ್ವಜನಿಕರ ಎದುರು ಇಡುವುದಕ್ಕೆ ಬಯಸುತ್ತೇನೆ ಎಂದು ತಿಳಿಸಿದರು.
ಡಾ |ರೇಣುಕಾ ಪ್ರಸಾದ್ ಅವರನ್ನು ಪ್ರಧಾನ ಕಾರ್ಯದರ್ಶಿ ಸ್ಥಾನದಿಂದ ತೆರವು ಮಾಡಿರುವುದು ಹಾಗೂ ಡಾ| ಜ್ಯೋತಿ ಆರ್ ಪ್ರಸಾದ್ ಮತ್ತು ಡಾ | ಅಭಿಜ್ಞಾ ಅವರನ್ನು ಆಡಳಿತ ಮಂಡಳಿ ನಿರ್ದೇಶಕ ಸ್ಥಾನದಿಂದ ತೆರವುಗೊಳಿಸಿರುವುದು ಅಕಾಡೆಮಿ ಆಫ್ ಲಿಬರಲ್ ಎಜುಕೇಶನ್ ಇದರ ವಾರ್ಷಿಕ ಮಹಾ ಸಭೆಯಲ್ಲಿ ತೆಗೆದುಕೊಂಡ ಬಹುಮತದ ನಿರ್ಣಯವಾಗಿದೆ. ಇವುಗಳನ್ನು ನೀತಿ ನಿಯಮಾವಳಿ ಪ್ರಕಾರವೇ ನಡೆಸಲಾಗಿದೆ. ಆದರೆ ಅವರು ಸದಸ್ಯರಾಗಿ ಮುಂದುವರಿಯಲಿದ್ದಾರೆ ಎಂದು ಡಾ.ಕೆ.ವಿ.ಚಿದಾನಂದ ತಿಳಿಸಿದರು.
ರೇಣುಕಾ ಪ್ರಸಾದ್ ಅವರು ಕಳೆದ ೩೨ ವರ್ಷದಿಂದ ಅಕಾಡೆಮಿಯಲ್ಲಿ ಕಾರ್ಯದರ್ಶಿಯಾಗಿ, ಪ್ರಧಾನ ಕಾರ್ಯದರ್ಶಿಯಾಗಿ ಇದ್ದವರು, ಅವರೇ ಹೇಳುವಂತೆ ಇದು ಸೊಸೈಟಿ ಆಕ್ಟ್ ಪ್ರಕಾರ ನಡೆಯುವ ಸಂಸ್ಥೆ. ಇದು ನಮ್ಮ ಸ್ವಂತ ಆಸ್ತಿ ಅಲ್ಲ. ಇಲ್ಲಿಯ ಅಧಿಕಾರವನ್ನು ರೇಣುಕಾ ಪ್ರಸಾದ್ ಕಾನೂನು ಮೀರಿ ದುರ್ಬಳಕೆ ಮಾಡುವ ಪ್ರಯತ್ನ ಮಾಡಿದಾಗ ಅದನ್ನು ತಡೆಯುವ ಪ್ರಯತ್ನ ಮಾಡಿದ್ದೇವೆ. ಕರೋನಾ ಸಂದರ್ಭದಲ್ಲಿ ಸುಳ್ಳು ಹೇಳಿ ನನ್ನ ಅನುಮತಿ ಇಲ್ಲದೆ ಸಭೆ ನಡೆಸಿದ್ದಾರೆ ಎಂದು ಡಾ | ಕೆ.ವಿ ಚಿದಾನಂದ ಆರೋಪಿಸಿದರು.
ನಾವು ೫೦ ಕೋಟಿ ರು, ಹಣ ಹೊಡೆಯುವುದಕ್ಕೆ ಯೋಚಿಸಿದ್ದೆವು ಅನ್ನುವ ರೇಣುಕಾ ಪ್ರಸಾದ್ ಅವರ ಹೇಳಿಕೆ ಸತ್ಯಕ್ಕೆ ದೂರವಾದ್ದಾಗಿದೆ ಎಂದು ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ (ರಿ) ಪ್ರಧಾನ ಕಾರ್ಯದರ್ಶಿ ಅಕ್ಷಯ್ ಕೆ.ಸಿ ತಿಳಿಸಿದರು. ನಾನೊಬ್ಬ ವೃತ್ತಿ ನಿರತ ಆರ್ಕಿಟೆಕ್ಟ್. ನನ್ನ ವ್ಯವಹಾರಗಳು ನೂರಾರಿದೆ. ಇದರ ಬಗ್ಗೆ ಹೆಚ್ಚಿನ ಮಾಹಿತಿ ಬೇಕಿದ್ದರೆ ಗೂಗಲ್ ನಲ್ಲಿ ಹುಡುಕಾಡಿದರೆ ಸಿಗುತ್ತದೆ. ಹಣದಿಂದ ನನಗೆ ಏನೂ ಆಗಬೇಕಿಲ್ಲ. ಹಣ ಹೊಡೆಯಲು ಯೋಚಿಸಿದ್ದೆವು ಅನ್ನುವುದು ಸುಳ್ಳಿನ ಕಂತೆಯಾಗಿದೆ ಎಂದು ತಿಳಿಸಿದರು.