ನ್ಯೂಸ್ ನಾಟೌಟ್ :ಹಣ್ಣು ತರಕಾರಿಗಳನ್ನು ತಿನ್ನುವವರಿಗೆ ಆರೋಗ್ಯದ ಸಮಸ್ಯೆ ಕಾಡುವುದು ತುಂಬಾ ವಿರಳ.ಪ್ರತಿದಿನ ಹಣ್ಣು- ತರಕಾರಿಗಳನ್ನು ತಿನ್ನುವುದರಿಂದ ಆರೋಗ್ಯ ಸುಧಾರಣೆಯಾಗುತ್ತದೆ. ಮುಖದ ಸೌಂದರ್ಯ ಹಾಗೂ ಚರ್ಮದ ಕಾಂತಿ ಹೆಚ್ಚುತ್ತದೆ.ರೋಗ ನಿರೋಧಕ ಶಕ್ತಿಯನ್ನು ಇಮ್ಮಡಿಗೊಳಿಸುತ್ತದೆ ತರಕಾರಿ ಹಾಗೂ ಹಣ್ಣುಗಳು.ಅದರಲ್ಲೂ ಕಿವಿ ಹಣ್ಣು ಆರೋಗ್ಯ ದೃಷ್ಟಿಯಿಂದ ತುಂಬಾ ಒಳ್ಳೆಯದು.ದಿನಕ್ಕೊಂದರಂತೆ ಕಿವಿ ಹಣ್ಣು ಸೇವಿಸುತ್ತಾ ಬಂದರೆ ಆರೋಗ್ಯಕ್ಕೆ ತುಂಬಾ ಒಳ್ಳೆಯದು.
ಪ್ರೋಟೀನ್ ಸಮೃದ್ಧ ಕಿವಿ ಹಣ್ಣು:
ಕಿವಿಹಣ್ಣು ಫೈಬರ್, ವಿಟಮಿನ್ ಸಿ, ಫೋಲೇಟ್, ತಾಮ್ರ, ಪೊಟ್ಯಾಸಿಯಮ್, ಆಂಟಿಆಕ್ಸಿಡೆಂಟ್ಗಳು, ವಿಟಮಿನ್ ಇ ಮತ್ತು ವಿಟಮಿನ್ ಕೆ ಯಂತಹ ಸಂಪೂರ್ಣ ಶ್ರೇಣಿಯ ಪೋಷಕಾಂಶಗಳನ್ನು ಹೊಂದಿದೆ. ಮಾರುಕಟ್ಟೆಗಳಲ್ಲಿ ವರ್ಷ ಪೂರ್ತಿ ಈ ಹಣ್ಣುಗಳು ದೊರೆಯುತ್ತವೆ. ಸುಮಾರು 50 ವಿವಿಧ ಪ್ರಬೇಧಗಳಲ್ಲಿ ಈ ಹಣ್ಣು ಕಂಡು ಬರುತ್ತದೆ.ಡೆಂಘೀ ಮತ್ತು ಕಾಮಾಲೆ ಖಾಯಿಲೆ ಇದ್ದರೆ ಕಿವಿ ಹಣ್ಣನ್ನು ತಿನ್ನುವುದರಿಂದ ಪರಿಹಾರ ಕಾಣಬಹುದು. ಫೈಬರ್ ಮತ್ತು ಆಂಟಿ ಆಕ್ಸಿಡೆಂಟ್ಗಳ ಮೂಲವೆಂದು ಪರಿಗಣಿಸಲಾಗುವ ಕಿವಿ ಹಣ್ಣಿನಿಂದ ಡಿಎನ್ಎ ಅನ್ನು ಉತ್ತಮಗೊಳಿಸಬಹುದು.
ಉಸಿರಾಟದ ಸಮಸ್ಯೆ ನೀಗಿಸುತ್ತೆ:
ಕಿವಿ ಹಣ್ಣನ್ನು ನಿಯಮಿತವಾಗಿ ಸೇವಿಸಿದ್ರೆ ಇದು ರೋಗನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ. ಈ ಹಣ್ಣಿನಲ್ಲಿ ವಿಟಮಿನ್ ಸಿ ಇದ್ದು, ಶೀತ, ಕೆಮ್ಮು ಮತ್ತು ಉಸಿರಾಟದ ಸಮಸ್ಯೆಗಳನ್ನು ಗುಣಪಡಿಸಲು ಪ್ರಯೋಜನಕಾರಿ.ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿದೆ.ಉರಿಯೂತ, ರೋಗ ಇತ್ಯಾದಿಗಳಿಂದ ಇದು ರಕ್ಷಿಸುತ್ತದೆ.
ಮಲಬದ್ಧತೆ ನಿವಾರಣೆ:
ಜೀರ್ಣಾಂಗ ವ್ಯವಸ್ಥೆಯನ್ನು ಸುಧಾರಿಸಲು ಕಿವಿ ಹಣ್ಣು ಸಹಕಾರಿ. ಈ ಹಣ್ಣಿನಲ್ಲಿ ಫೈಬರ್ ಅಂಶ ಜಾಸ್ತಿ ಇರುವುದರಿಂದ ಇದು ಮಲಬದ್ಧತೆಯನ್ನು ಹೋಗಲಾಡಿಸಲು ಸಹಕಾರಿ. ಹೊಟ್ಟೆಗೆ ಸಂಬಂಧಿಸಿದ ಅನೇಕ ಸಮಸ್ಯೆಗಳನ್ನು ತೆಗೆದುಹಾಕಲು ಸಹ ಇದು ಉಪಯುಕ್ತವಾಗಿದೆ.ಚರ್ಮ ಮತ್ತು ಕೂದಲಿನ ಸಮಸ್ಯೆಯನ್ನು ಹೋಗಲಾಡಿಸಲು ಕಿವಿ ಹಣ್ಣು ತುಂಬಾ ಪ್ರಯೋಜನಕಾರಿ.ಕಿವಿ ಹಣ್ಣನ್ನು ನಿಯಮಿತವಾಗಿ ಸೇವಿಸಿದರೆ, ಅದು ಹೃದಯವನ್ನು ಬಲಪಡಿಸಲು ಮತ್ತು ರಕ್ತದೊತ್ತಡವನ್ನು ನಿಯಂತ್ರಿಸಲು ಉಪಯುಕ್ತ.