ನ್ಯೂಸ್ ನಾಟೌಟ್: ಅಮ್ಮ ಅನ್ನುವ ಪದಕ್ಕೆ ಸಾವಿರ ಅರ್ಥಗಳುಂಟು. ಕರುಳಿನ ಕೂಗಿಗೆ ಇರುವ ಶಕ್ತಿ ಈ ಪ್ರಪಂಚದಲ್ಲಿ ಮತ್ಯಾವುದಕ್ಕೂ ಇಲ್ಲ. ಪ್ರತಿಯೊಂದು ಜೀವಿಗೆ ಅಮ್ಮನೇ ದೇವರು. ಅಂಥಹುದರಲ್ಲಿ ಅಮ್ಮನೇ ಇಲ್ಲವಾದಾಗ ಆಗುವ ನೋವು ಪ್ರಪಂಚದಲ್ಲಿ ಯಾವ ಮಕ್ಕಳಿಗೂ ಬರಬಾರದು.
ಹೌದು, ಇಲ್ಲೊಂದು ಮಗುವಿನ ಕರುಣಾಜನಕ ಕಥೆಯನ್ನು ನಾವು ನಿಮ್ಮ ಮುಂದೆ ಇಡ್ತಿದ್ದೇವೆ. ಈ ಸ್ಟೋರಿಯನ್ನು ಕೇಳಿದಾಗ ಎಂತಹ ಕಲ್ಲು ಹೃದಯವೂ ಒಂದು ಕ್ಷಣ ಕರಗಿ ಹೋಗಬಹುದು. ಈ ಮಗು ಬದುಕಿರುವಷ್ಟು ದಿನ ಅಮ್ಮನ ಚಾಕರಿಯನ್ನೇ ಅವಲಂಭಿಸಿತ್ತು. ಸ್ನಾನ, ಊಟ, ನಿದ್ರೆ ಸೇರಿದಂತೆ ಪ್ರತಿಯೊಂದಕ್ಕೂ ಅಮ್ಮ ಬೇಕೆ ಬೇಕು. ಎಂಡೋಸಲ್ಫನ್ ಎಂಬ ವಿಷ ಮಾರಿಗೆ ಸಿಲುಕಿ ಈ ಬಾಲಕ ತನ್ನ ಜೀವನವನ್ನೇ ಕಳೆದುಕೊಂಡಿದ್ದಾನೆ. ಎದ್ದು ಓಡಾಡಲು ಆಗುವುದಿಲ್ಲ. ಸರಿಯಾಗಿ ಮಾತೂ ಬರುವುದಿಲ್ಲ. ಮಲಗಿದ್ರೆ ಮಲಗಿದ್ದಲ್ಲಿಯೇ, ಕುಳಿತರೆ ಕುಳಿತಲ್ಲಿಯೇ, ಎಲ್ಲದಕ್ಕೂ ಪರರ ಅವಲಂಬನೆ
ಪರಿಸ್ಥಿತಿಯಲ್ಲಿದ್ದ ಮಗು ಇತ್ತೀಚೆಗೆ ಇದ್ದಕ್ಕಿದ್ದಂತೆ ಅಮ್ಮನ (ಸವಿತಾ) ಕಳೆದುಕೊಂಡು ಬಿಟ್ಟಿತ್ತು. ಬಡತನದ ಬೇಗೆಯಲ್ಲಿ ಬೇಯುತ್ತಿರುವ ತಂದೆ ಗಂಗಾಧರ್ಗೆ ಮಗುವನ್ನು ಸಾಕುವುದಕ್ಕೆ ಕಷ್ಟವಾದಾಗ ಮಗುವನ್ನು ಕಣ್ಣೂರಿನ ತಣಲ್ ಆಶ್ರಯ ಕೇಂದ್ರಕ್ಕೆ ಸೇರಿಸಲು ನಿರ್ಧರಿಸಲಾಯಿತು. ಇಡೀ ಊರಿನ ಜನ ಈ ಬಾಲಕನನ್ನು ಬಾರವಾದ ಮನಸ್ಸುಗಳಿಂದ ಆಶ್ರಯ ಕೇಂದ್ರಕ್ಕೆ ಕಳಿಸಿಕೊಟ್ಟ ಸನ್ನಿವೇಶ ಹೃದಯಸ್ಪರ್ಶಿಯಾಗಿತ್ತು.
ಮಗುವನ್ನು ವಾಹನದಲ್ಲಿ ಕರೆದುಕೊಂಡು ಆಶ್ರಯ ಕೇಂದ್ರದತ್ತ ಅಧಿಕಾರಿಗಳು ಪ್ರಯಾಣ ಆರಂಭಿಸಿದರು. ಪ್ರಯಾಣಕ್ಕೂ ಮೊದಲು ಇಡೀ ಊರು ಕಣ್ಣೀರಿಟ್ಟಿತು. ಈ ವೇಳೆ ಸುಶೀಲಾ ಪೆರುಮುಂಡ ಅಮ್ಮನ ಸ್ಥಾನ ತುಂಬಿದರು.
ಕಲ್ಲಪಳ್ಳಿ, ಪಾನತ್ತೂರು , ಕಾಞಂಗಾಡು, ಪಯ್ಯನೂರು, ತಳಿಪರ್ಬುಂ, ಕಣ್ಣೂರು, ಒಳಪಟ್ಟಣವಾಗಿ ಸಾಗಿದ ಒಟ್ಟು ೧೧೦ ಕಿ.ಮೀ. ಪ್ರಯಾಣದಲ್ಲಿ ಸುಶೀಲಾ ಪೆರುಮುಂಡ ಮಗು ಲೋಹಿತ್ ನನ್ನು ಮಡಿಲಿನಲ್ಲಿ ಮಲಗಿಸಿಕೊಂಡು ಸಾಗಿದರು. ಮಾರ್ಗ ಮಧ್ಯೆ ಮಗುವಿಗೆ ಬಿಸ್ಕತ್, ನೀರು ನೀಡಿ ಉಪಚರಿಸಿದರು. ತಾಯಿ ಇಲ್ಲದ ಮಗುವನ್ನು ಇವರು ಹಿಡಿದುಕೊಂಡು ಸಾಗುತ್ತಿದ್ದಂತೆ ಇವರ ಕಣ್ಣಾಲಿಗಳು ಅವರಿಗೇ ಅರಿವಿಲ್ಲದಂತೆ ತೇವಗೊಂಡಿದ್ದವು.
ಇಷ್ಟು ದಿನ ತನ್ನ ಭಾವನೆಗಳಿಗೆ ಜತೆಯಾಗಿದ್ದ ಪ್ರೀತಿಯ ತಮ್ಮನನ್ನು ಆಶ್ರಯ ಕೇಂದ್ರಕ್ಕೆ ಕಳಿಸುವ ಸಂದರ್ಭದಲ್ಲಿ ಹಿರಿಯ ಸಹೋದರ ಯಶ್ವಿತ್ ಕಣ್ಣೀರಿಟ್ಟಿದ್ದಾನೆ. ತಮ್ಮನನ್ನು ನಾನು ಕಳಿಸುವುದಿಲ್ಲ ಎಂದು ಅಂಗಲಾಚಿ ಬೇಡಿಕೊಂಡಿದ್ದಾನೆ, ಬಿಕ್ಕಿಬಿಕ್ಕಿ ಅತ್ತಿದ್ದಾನೆ. ಈ ವೇಳೆ ಪರಪ್ಪ ತಾಲೂಕು ಗ್ರಾಮ ಪಂಚಾಯತ್ ಸದಸ್ಯ ಅರುಣ್ ರಂಗತ್ತಮಲೆ ಬಾಲಕ ಯಶ್ವಿತ್ ನನ್ನು ಸಮಾಧಾನ ಪಡಿಸಿದರು.
‘ನಿನ್ನ ತಮ್ಮನನ್ನು ರಜಾ ದಿನಗಳಲ್ಲಿ ನಿನಗೆ ನೋಡುವುದಕ್ಕೆ ಅವಕಾಶ ಇದೆ. ನೀನು ಯಾವಾಗ ಬೇಕಾದರೂ ಅವನನ್ನು ಹೋಗಿ ನೋಡಬಹುದು, ಅಳಬೇಡ ‘ ಎಂದು ಸಂತೈಸಿದರು. ಯಶ್ವಿತ್ ಸದ್ಯ ಎಲಿಮಲೆಯ ಸರಕಾರಿ ಶಾಲೆಯೊಂದರಲ್ಲಿ ೪ನೇ ತರಗತಿ ವಿದ್ಯಾರ್ಥಿಯಾಗಿದ್ದಾನೆ. ತನ್ನ ತಾಯಿ ಮನೆಯಿಂದ ಆತ ಶಾಲೆಗೆ ಹೋಗುತ್ತಿದ್ದಾನೆ.
ಮಗುವಿನ ಪರಿಸ್ಥಿತಿ ಕಂಡು ನಿಜಕ್ಕೂ ನನ್ನ ಮನಸ್ಸಿಗೆ ತುಂಬಾಬೇಸರವಾಯಿತು. ಆ ಕುಟುಂಬದ ಜವಾಬ್ದಾರಿಯನ್ನು ಊರಿನವರೆಲ್ಲ ಸೇರಿಕೊಂಡು ತೆಗೆದುಕೊಂಡೆವು.ಈಗ ನಾವು ಆ ಮಗುವನ್ನು ಸುರಕ್ಷಿತ ಸ್ಥಳಕ್ಕೆ ಕಳಿಸಿಕೊಟ್ಟಿದ್ದೇವೆ. ಮಗುವಿನ ಮುಂದಿನ ಜೀವನ ಶುಭವಾಗಿರಲಿ ಎಂದು ಪ್ರಾರ್ಥಿಸುತ್ತೇನೆ.
ಅರುಣ್ ರಂಗತ್ತಮಲೆ , ಪರಪ್ಪ ತಾಲೂಕು ಗ್ರಾಮ ಪಂಚಾಯತ್ ಸದಸ್ಯ