ನ್ಯೂಸ್ ನಾಟೌಟ್: ಸುಳ್ಯದಲ್ಲಿ ನಡೆಯುತ್ತಿರುವ ಬೃಹತ್ ಕೃಷಿ ಮೇಳ ಇದೀಗ ಆಕರ್ಷಣೆಯ ಕೇಂದ್ರ ಬಿಂದುವಾಗಿದೆ.
ಅದರಲ್ಲೂ ಕೃಷಿ ಮೇಳದಲ್ಲಿ ವಿಶೇಷ ಜಾತಿಯ ಹಲಸಿನ ಹಣ್ಣಿನ ಗಿಡಗಳು ಎಲ್ಲರ ಗಮನ ಸೆಳೆಯುತ್ತಿದೆ.ಕೇವಲ ಒಂದೇ ವರ್ಷದಲ್ಲಿ ಹಲಸಿನ ಹಣ್ಣನ್ನು ನೀಡಬಲ್ಲ ಗಿಡಗಳಿಗೆ ಗ್ರಾಹಕರು ಮುಗಿಬಿದ್ದಿದ್ದಾರೆ. ಹೆಚ್ಚು ಕಡಿಮೆ ಇಪ್ಪತ್ತು ನಮೂನೆಯ ಹಲಸಿನ ಹಣ್ಣಿನ ಗಿಡಗಳು ಇಲ್ಲಿದ್ದು ಸರ್ವ ಋತು ಹಲಸಿನ ಗಿಡಕ್ಕೆ ಹೆಚ್ಚಿನ ಬೇಡಿಕೆಯಿದೆ. ಇದಿಷ್ಟು ಮಾತ್ರವಲ್ಲದೇ ರಂಬೂಟನ್,ಮಾವಿನ ಗಿಡಗಳು ಇಲ್ಲಿದ್ದು ಗ್ರಾಹಕರ ಮನಸೆಳೆಯುತ್ತಿದೆ.
ಸಾಮಾನ್ಯವಾಗಿ ಹಲಸಿನ ಗಿಡಗಳನ್ನು ನೆಟ್ಟು ಹಲವು ವರ್ಷಗಳ ಬಳಿಕ ಫಸಲು ಬರುವುದಿದೆ. ಆದರೆ ಇಲ್ಲಿನ ವಿಶೇಷ ಜಾತಿಯ ಹಲಸಿನ ಹಣ್ಣಿನ ಗಿಡಗಳು ನೆಟ್ಟು ಎರಡೇ ವರ್ಷದಲ್ಲಿ ಸವಿಯಾದ ಹಲಸಿನ ಹಣ್ಣನ್ನು ನೀಡಬಲ್ಲುದು.ಮಾತ್ರವಲ್ಲ ಸರ್ವ ಋತು ಹಲಸು ಇದಾಗಿದ್ದು, ಈ ವಿಶೇಷ ಜಾತಿಯ ಹಲಸಿನ ಹಣ್ಣಿನ ಗಿಡಕ್ಕೆ ಭಾರಿ ಬೇಡಿಕೆಯಿದೆಯೆಂದು ಹಣ್ಣಿನ ಗಿಡಗಳ ಸ್ಟಾಲ್ ಮಾಲೀಕ ಫಾಯಿಸ್ ಪುತ್ತೂರು ಅಭಿಪ್ರಾಯ ಪಡುತ್ತಾರೆ.
ಹಲಸಿನ ಹಣ್ಣಿನ ಗಿಡಗಳನ್ನು ನೆಟ್ಟು ಎರಡು ವರ್ಷ ಆಗುತ್ತಿದ್ದಂತೆ ರುಚಿರುಚಿಯಾದ ಹಲಸಿನ ಹಣ್ಣನ್ನು ನೀವು ಸವಿಯಬಹುದು. ಚಂದ್ರ ಹಲಸು ಗಿಡ್ಡ ಜಾತಿಯ ಹಲಸಿನ ಗಿಡ ಇದಾಗಿದ್ದು ಹೆಚ್ಚು ಎತ್ತರವೂ ಬೆಳೆಯುವುದಿಲ್ಲ.ನೂರಾರು ಹಲಸಿನ ಹಣ್ಣುಗಳನ್ನು ಬಿಡುವ ಗಿಡ ಇದಾಗಿದ್ದು, ಗ್ರಾಹಕರು ವಿಭಿನ್ನ ಜಾತಿಯ ಹಲಸಿನ ಗಿಡಗಳನ್ನು ಖರೀದಿ ಮಾಡುತ್ತಿದ್ದಾರೆ.
ಇತ್ತೀಚೆಗೆ ಇಲ್ಲಿನ ವಾತಾವರಣಕ್ಕೆ ಸೂಕ್ತವಾದ ಬೆಳೆ ಎಂದರೆ ಅದು ರಂಬೂಟನ್.ಅನೇಕರು ಈ ಬೆಳೆಯನ್ನು ಬೆಳೆದು ಯಶ ಕಂಡಿದ್ದಾರೆ.ವಿದೇಶಿ ಹಣ್ಣಿನ ಬೆಳೆಯನ್ನು ಬೆಳೆದು ಪರ್ಯಾಯ ಬೆಳೆಯಲ್ಲಿ ಯಶಸ್ಸು ಕಂಡ ಕೃಷಿಯಲ್ಲಿ ರಂಬೂಟನ್ ಕೂಡ ಒಂದು. ಗಿಡ ನೆಟ್ಟು ಎರಡು ವರ್ಷದಲ್ಲಿ ಬರುವ ಈ ಗಿಡಗಳಿಗೆ ಕೃಷಿ ಮೇಳದಲ್ಲಿ ಗ್ರಾಹಕರು ಆಸಕ್ತಿಯನ್ನು ತೋರಿಸುತ್ತಿದ್ದಾರೆ ಎಂದು ಮಾಲಕರು ಹೇಳುತ್ತಾರೆ.
ಒಟ್ಟಿನಲ್ಲಿ ಕೃಷಿ ಮೇಳ ಹತ್ತು ಹಲವು ಕೃಷಿ ಸಂಬಂಧಿತ ವಿಷಯಗಳಿಗೆ ಕೃಷಿ ಮಿತ್ರರನ್ನು ತನ್ನತ್ತ ಸೆಳೆಯುತ್ತಿದೆ.ಈಗಾಗ್ಲೇ ಎರಡು ದಿನದ ಕೃಷಿ ಮೇಳವನ್ನು ಕಣ್ತುಂಬಿಕೊಳ್ಳಲು ಸುಳ್ಯ ಸೇರಿದಂತೆ ದೂರದೂರಿನಿಂದ ಜನ ಆಗಮಿಸುತ್ತಿದ್ದು ,ಕೃಷಿ ಮಾಹಿತಿಯನ್ನು ಪಡೆದುಕೊಳ್ಳುತ್ತಿದ್ದಾರೆ.