ನ್ಯೂಸ್ ನಾಟೌಟ್: ಮಧ್ಯಪ್ರದೇಶದ ಗ್ವಾಲಿಯರ್ನಲ್ಲಿ ಮಹಿಳೆಯೊಬ್ಬರು ವಿಚಿತ್ರ ಮಗುವೊಂದಕ್ಕೆ ಜನ್ಮ ನೀಡಿದ್ದಾರೆ. ಮಗು 2.3 ಕೆ.ಜಿ ತೂಕವಿದ್ದು, ನಾಲ್ಕು ಕಾಲುಗಳನ್ನು ಹೊಂದಿದೆ. ಈ ವಿಚಾರವೀಗ ಜನರಲ್ಲಿ ಕುತೂಹಲ ಹೆಚ್ಚಿಸಿದೆ. ಸಿಕಂದರ್ ಕಾಂಪು ನಿವಾಸಿ ಅರತಿ ಕುಶ್ವಾಹ್ ಎಂಬುವವರೇ ಹೀಗೆ ನಾಲ್ಕು ಕಾಲುಗಳಿರುವ ಮಗುವಿಗೆ ಜನ್ಮ ನೀಡಿದ ಮಹಿಳೆ . ಗ್ವಾಲಿಯರ್ನ ಕಮಲಾ ರಾಜ್ ಆಸ್ಪತ್ರೆಯ ಮಹಿಳೆ ಹಾಗೂ ಮಕ್ಕಳ ವಿಭಾಗದಲ್ಲಿ ಅವರು ಈ ಅಪರೂಪದ ಮಗುವಿಗೆ ಜನ್ಮ ನೀಡಿದ್ದು, ತಾಯಿ ಮಗು ಇಬ್ಬರು ಆರೋಗ್ಯವಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ಮಗು 2.3 ಕೆ.ಜಿ ತೂಗುತ್ತಿದ್ದು, ಜನನದ ನಂತರ ಗ್ವಾಲಿಯರ್ನಲ್ಲಿರುವ ಜಯಾರೋಗ್ಯ ಆಸ್ಪತ್ರೆಯ ವೈದ್ಯರ ತಂಡ ಈ ಮಗುವನ್ನು ತಪಾಸಣೆ ನಡೆಸಿದೆ.
ಈ ಬಗ್ಗೆ ಸುದ್ದಿಸಂಸ್ಥೆ ಎಎನ್ಐ ಜೊaತೆ ಮಾತನಾಡಿದ ಜಯಾರೋಗ್ಯ ಆಸ್ಪತ್ರೆಯ ವೈದ್ಯರ ತಂಡ, ಶಿಶು ನಾಲ್ಕು ಕಾಲುಗಳನ್ನು ಹೊಂದಿದೆ. ದೈಹಿಕ ಅಸಮರ್ಥತೆಯನ್ನು ಮಗು ಹೊಂದಿದೆ. ಕೆಲವು ಭ್ರೂಣಗಳು ಹೆಚ್ಚುವರಿ ಅಂಗಗಳನ್ನು ಹೊಂದಿರುತ್ತವೆ. ವೈದ್ಯಕೀಯ ವಿಜ್ಞಾನದ ಭಾಷೆಯಲ್ಲಿ ಇದನ್ನು ಇಶಿಯೋಪಾಗಸ್ ಎಂದು ಕರೆಯಲಾಗುತ್ತದೆ. ಭ್ರೂಣವೂ ಎರಡು ಭಾಗಗಳಾಗಿ ವಿಭಜನೆಯಾದಾಗ ದೇಹವೂ ಎರಡು ಭಾಗಗಳಲ್ಲಿ ಬೆಳವಣಿಗೆಯಾಗುತ್ತದೆ. ದೇಹದ ಕೆಳಭಾಗ ಎರಡು ಹೆಚ್ಚುವರಿ ಕಾಲುಗಳನ್ನು ಹೊಂದಿದೆ. ಆದರೆ ಆ ಎರಡು ಹೆಚ್ಚುವರಿ ಕಾಲುಗಳು ನಿಷ್ಕ್ರಿಯವಾಗಿವೆ.
ಇದಲ್ಲದೇ ಈ ಅಪರೂಪದ ಮಗುವಿಗೆ ಬೇರೇನಾದರೂ ದೈಹಿಕ ನ್ಯೂನ್ಯತೆಗಳಿವೆಯೇ ಎಂಬುದನ್ನು ಮಕ್ಕಳ ತಜ್ಞ ವೈದ್ಯರು ತಪಾಸಣೆ ಮಾಡಿದ್ದಾರೆ. ತಪಾಸಣೆ ವೇಳೆ ಬೇರೇನೂ ನ್ಯೂನ್ಯತೆ ಇಲ್ಲ ಎಂಬುದು ತಿಳಿದು ಬಂದಿದೆ. ಆಕೆ ಆರೋಗ್ಯವಾಗಿದ್ದರೆ ಆಕೆಯ ಆ ಎರಡು ಬಲ ಇಲ್ಲದ ಕಾಲುಗಳನ್ನು ಶಸ್ತ್ರಚಿಕಿತ್ಸೆ ಮಾಡಿ ತೆಗೆಯಲಾಗುವುದು. ನಂತರ ಆಕೆ ಸಾಮಾನ್ಯರಂತೆ ಬದುಕುತ್ತಾಳೆ ಎಂದು ವೈದ್ಯ ಡಾ. ಧಕಡ್ ಹೇಳಿದ್ದಾರೆ.