ನಮ್ಮ ಆರೋಗ್ಯಕ್ಕೆ ಬೇಕಾಗುವ ಗಿಡಮೂಲಿಕೆಗಳು ಕೆಲವೊಂದು ಸಲ ಮನೆ ಮುಂದೆಯೇ ಇರುತ್ತದೆ.ಆದರೆ ಇದನ್ನು ನಾವು ನಿರ್ಲಕ್ಷಿಸಿ ಬಿಡುತ್ತೇವೆ.ಪ್ರತಿಯೊಂದು ಗಿಡಗಳಿಗೂ ಅದರದ್ದೇ ಆದ ಮಹತ್ವವಿದೆ.ಒಂದಲ್ಲ ಒಂದು ರೀತಿಯಲ್ಲಿ ಅದು ಔಷಧೀಯ ಗುಣವನ್ನು ಹೊಂದಿರುತ್ತದೆ.ಇದ್ಯಾವುದನ್ನು ಪರಿಗಣಿಸದೇ ನಾವು ಸಣ್ಣ ಪುಟ್ಟ ಆರೋಗ್ಯ ಸಮಸ್ಯೆಗಳಿಗೂ ಇಂದು ಆಸ್ಪತ್ರೆಗೆ ಹೋಗಿ ಔಷಧಿಯನ್ನು ಪಡೆದುಕೊಳ್ಳುತ್ತೇವೆ.ಹಾಗಾದರೆ ನಮ್ಮ ಆರೋಗ್ಯವನ್ನು ಕಾಪಾಡಬಲ್ಲ ಗುಣವನ್ನು ಹೊಂದಿರುವ ಸೀಬೆ ಎಲೆಯ ಪ್ರಯೋಜನಗಳೇನು ಎಂಬುದನ್ನು ತಿಳಿದುಕೊಳ್ಳೋಣ..
ಆಯುರ್ವೇದ, ಹೋಮಿಯೋಪತಿಯಂತಹ ನೈಸರ್ಗಿಕ ಔಷಧ ಪದ್ಧತಿಗಳಲ್ಲಿಯೂ ಪೇರಲ ಅಥವಾ ಸೀಬೆ ಎಲೆಗೆ ವಿಶೇಷ ಸ್ಥಾನವಿದೆ. ಇದನ್ನು ಔಷಧಿಗಳ ತಯಾರಿಕೆಯಲ್ಲಿ ವ್ಯಾಪಕವಾಗಿ ಬಳಸಲಾಗುತ್ತದೆ. ಅತಿಸಾರ, ವಿವಿಧ ಗಾಯಗಳು, ಸಂಧಿವಾತ, ಶ್ವಾಸಕೋಶದ ತೊಂದರೆಗಳು, ಹುಣ್ಣು ಸೇರಿದಂತೆ ವಿವಿಧ ಕಾಯಿಲೆಗಳಿಗೆ ಚಿಕಿತ್ಸೆ ನೀಡಲು ಸೀಬೆಕಾಯಿ ಎಲೆಯಿಂದ ತಯಾರಿಸಿದ ಔಷಧಿ ಬಳಸಲಾಗುತ್ತದೆ.
ಚಹಾ ರೂಪದಲ್ಲಿ ಸೇವಿಸಿ:
ಪೇರಲ ಮರವು ಉತ್ತಮ ಔಷಧ ಸಾಮರ್ಥ್ಯವನ್ನು ಹೊಂದಿವೆ. ಇದು ಅತಿಸಾರ ವಿರೋಧಿ, ಸೂಕ್ಷ್ಮಜೀವಿ ವಿರೋಧಿ, ಕ್ಯಾನ್ಸರ್ ವಿರೋಧಿ ಮತ್ತು ಒತ್ತಡದಂತಹ ಸಮಸ್ಯೆ ನಿವಾರಿಸುವ ಗುಣಲಕ್ಷಣಗಳನ್ನು ಹೊಂದಿದೆ. ಪೇರಲ ಎಲೆಗಳನ್ನು ಔಷಧಿ ಮತ್ತು ಗಿಡಮೂಲಿಕೆಯ ಚಹಾ ರೂಪದಲ್ಲೂ ಸೇವಿಸಬಹುದು. ಅಲ್ಲದೆ ಎಲೆಗಳನ್ನು ಪುಡಿಮಾಡಿ ಚರ್ಮದ ಮೇಲೆ ಹಚ್ಚಬಹುದು.
ಗಾಯಗಳನ್ನು ಗುಣಪಡಿಸುತ್ತದೆ:
ಸೀಬೆ ಮರದ ಎಲೆಯ ಬ್ಯಾಕ್ಟೀರಿಯಾ ವಿರೋಧಿ ಗುಣಲಕ್ಷಣಗಳು ಗಾಯವನ್ನು ಗುಣಪಡಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತವೆ. ಶಸ್ತ್ರಚಿಕಿತ್ಸೆಯ ಗಾಯಗಳು, ಸುಟ್ಟಗಾಯಗಳು, ಚರ್ಮದ ಸೋಂಕುಗಳಿಗೆ ಸಂಬಂಧಿಸಿದ ಕೆಲವು ರೀತಿಯ ಬ್ಯಾಕ್ಟೀರಿಯಾಗಳ ವಿರುದ್ಧ ಇದು ಹೋರಾಡುತ್ತದೆ.
ಅಧಿಕ ರಕ್ತದೊತ್ತಡ ಕಡಿಮೆ ಮಾಡುತ್ತದೆ:
ಪೇರಲ ಎಲೆಗಳನ್ನು ತೆಗೆದುಕೊಳ್ಳುವುದರಿಂದ ಕೊಲೆಸ್ಟ್ರಾಲ್ (9.9 ಪ್ರತಿಶತ), ಟ್ರೈಗ್ಲಿಸರೈಡ್ಗಳು (7.7 ಪ್ರತಿಶತ) ಮತ್ತು ರಕ್ತದೊತ್ತಡ (9.0/8.0 mm Hg) ಗಮನಾರ್ಹವಾಗಿ ಕಡಿಮೆಯಾಗುತ್ತದೆ.
ಮಧುಮೇಹಿಗಳಿಗೆ ಉತ್ತಮ:
ಪೇರಲ ಎಲೆಯ ರಸವನ್ನು ನಿಯಮಿತವಾಗಿ ಸೇವಿಸುವುದರಿಂದ ದೀರ್ಘಾವಧಿಯ ಪ್ರಯೋಜನ ತುಂಬಾ ಇದೆ. ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.
ಮುಟ್ಟಿನ ನೋವು ನಿವಾರಣೆ:
ಎಪಿಡೆಮಿಯಾಲಜಿ ಮತ್ತು ಹೆಲ್ತ್ ಸರ್ವೀಸಸ್ ರಿಸರ್ಚ್ ಯೂನಿಟ್ (ಮೆಕ್ಸಿಕೊ) 197 ಮಹಿಳೆಯರ ಮೇಲೆ ನಡೆಸಿದ ಅಧ್ಯಯನವು, ಪೇರಲ ಎಲೆಯ ರಸ ಅಥವಾ ಪುಡಿಯನ್ನು ಸೇವಿಸುವುದರಿಂದ ಮುಟ್ಟಿನ ನೋವು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂದು ಬಹಿರಂಗವಾಗಿದೆ.
ಕರುಳಿಗೆ ರಾಮಬಾಣ:
ಈ ಎಲೆಗಳಿಂದ ಮಾಡಿದ ಔಷಧಿಯನ್ನು ಸೇವಿಸುವುದರಿಂದ ಕರುಳಿನ ಆರೋಗ್ಯ ಸುಧಾರಣೆಯಾಗುತ್ತದೆ ಎಂದು ಹೇಳಲಾಗುತ್ತಿದೆ. ಅಲ್ಲದೆ ಯಕೃತ್ತು ಆರೋಗ್ಯಕರವಾಗಿರಲು ಸಹಾಯ ಮಾಡುತ್ತದೆ.
ಕೂದಲು ಆರೋಗ್ಯಕರವಾಗಿರುತ್ತೆ:
ಹೆಚ್ಚಿನವರಿಗೆ ತಲೆಗೂದಲು ಉದುರುವ ಸಮಸ್ಯೆ ಇದೆ.ಅದರಲ್ಲೂ ಜೀವನ ಶೈಲಿಗೋ, ಒತ್ತಡದ ಜೀವನಕ್ಕೋ ಬಹುತೇಕರಿಗೆ ಕೂದಲು ಉದುರುವ ಸಮಸ್ಯೆಯನ್ನು ಹಂಚಿಕೊಳ್ಳುತ್ತಿದ್ದಾರೆ. ಪೇರಲ ಎಲೆಗಳನ್ನು ಒಂದು ಲೀಟರ್ ನೀರಿನಲ್ಲಿ ಸುಮಾರು 20 ನಿಮಿಷಗಳ ಕಾಲ ಕುದಿಸಬೇಕು. ದ್ರವವನ್ನು ಫಿಲ್ಟರ್ ಮಾಡಿ ತಣ್ಣಗಾಗಿಸಬೇಕು. ಇದನ್ನು ತಲೆಗೆ ಹಚ್ಚಿಕೊಂಡು 2 ಗಂಟೆಗಳ ಕಾಲ ಹಾಗೆಯೇ ಇರಿಸಿ. ಬಳಿಕ ಉಗುರು ಬೆಚ್ಚಗಿನ ನೀರಿನಿಂದ ತೊಳೆದರೆ ಉತ್ತಮ ಫಲಿತಾಂಶ ಸಿಗುತ್ತದೆ.
ಕ್ಯಾನ್ಸರ್ ತಡೆಗಟ್ಟುತ್ತದೆ
ಕ್ಯಾನ್ಸರ್ ಚಿಕಿತ್ಸೆಯ ಔಷಧಿ ಉತ್ಪಾದಕ ಅಡ್ಮ್ಯಾಕ್ ಆಂಕೊಲಜಿ ಪ್ರಕಾರ, ಇದು ಪ್ರಾಸ್ಟೇಟ್ ಕ್ಯಾನ್ಸರ್ ವಿರುದ್ಧ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತದೆ. ಸೀಬೆ ಎಲೆಯ ರಸವು ಕ್ಯಾನ್ಸರ್ ಗೆಡ್ಡೆಯ ಗಾತ್ರವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂದು ಅಧ್ಯಯನಗಳು ತಿಳಿಸಿವೆ. ಜರ್ನಲ್ ಆಫ್ ಮೆಡಿಸಿನಲ್ ಫುಡ್ (2012)ನಲ್ಲಿನ ಮತ್ತೊಂದು ಅಧ್ಯಯನವು, ಈ ಸಸ್ಯವು ಮಾನವ ಪ್ರಾಸ್ಟೇಟ್ ಕ್ಯಾನ್ಸರ್ ವಿರುದ್ಧ ಕೆಲಸ ಮಾಡುವುದನ್ನು ದೃಢಪಡಿಸಿದೆ ಎಂದು ತೋರಿಸಿದೆ.
ಮೊಡವೆ ಸಮಸ್ಯೆ ಮಾಯ:
ಮೊಡವೆ ಉಂಟುಮಾಡುವ ಬ್ಯಾಕ್ಟೀರಿಯಾವನ್ನು ಕೊಲ್ಲುವಲ್ಲಿಯೂ ಪೇರಲ ಎಲೆ ಪರಿಣಾಮಕಾರಿ ಎಂದು ಅಧ್ಯಯನವೊಂದು ತೋರಿಸಿದೆ. ಅದರ ಆಂಟಿಮೈಕ್ರೊಬಿಯಲ್ ಮತ್ತು ಉರಿಯೂತದ ಗುಣಲಕ್ಷಣಗಳು ಅದಕ್ಕೆ ಕಾರಣವಾಗಿರಬಹುದು. ಪೇರಲ ಎಲೆಯಲ್ಲಿರುವ ಆರೋಗ್ಯಕಾರಿ ಅಂಶಗಳು ದೇಹದಲ್ಲಿ ಸುಕ್ಕುಗಳು ಮತ್ತು ವಯಸ್ಸಾದ ಲಕ್ಷಣಗಳನ್ನು ನಿಧಾನಗೊಳಿಸುತ್ತದೆ.