ನ್ಯೂಸ್ ನಾಟೌಟ್ : ಇದು ಸ್ಪರ್ಧಾತ್ಮಕ ಯುಗ.ಪ್ರತಿಯೊಂದು ಕ್ಷೇತ್ರಗಳಲ್ಲಿಯೂ ಪೈಪೋಟಿ ಸರ್ವೇ ಸಾಮಾನ್ಯವಾಗಿದೆ.ಹೀಗಾಗಿ ಈಗಿನ ಮಕ್ಕಳನ್ನು ಸ್ಪರ್ಧಾತ್ಮಕ ಜಗತ್ತಿಗೆ ತೆರೆದಿಡಲು ಸಾಕಷ್ಟು ತಯಾರಿಗಳು ನಡೆಯುತ್ತಿವೆ.ಶಾಲಾ-ಕಾಲೇಜ್ ಗಳಲ್ಲಿಯೂ ಮಕ್ಕಳಿಗೆ ವಿಶೇಷ ರೀತಿಯಲ್ಲಿ ಶಿಕ್ಷಣವನ್ನು ಹೇಳಿಕೊಡಲಾಗುತ್ತಿದೆ.
ಬಹುಮುಖ್ಯವಾಗಿ ಮಕ್ಕಳಲ್ಲಿ ಕಲಿಕಾ ಕೊರತೆಯನ್ನು ನೀಗಿಸಬೇಕಾಗಿದೆ. ಅದಕ್ಕಾಗಿಯೇ ಕಲಿಕೆಯನ್ನು ಮಕ್ಕಳಲ್ಲಿ ಚೇತರಿಕೆ ಮಾಡಲು ಶಿಕ್ಷಣ ಇಲಾಖೆ ಸಜ್ಜಾಗಿದೆ. ಇನ್ನು ಮುಂದೆ 2022-23 ನೇ ಸಾಲಿನಿಂದ 5 ಮತ್ತು 8ನೇ ತರಗತಿಗಳಿಗೂ ಪಬ್ಲಿಕ್ ಪರೀಕ್ಷೆ ನಡೆಸುವಂತೆ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ!.
ಹೊಸ ಆದೇಶದಲ್ಲೇನಿದೆ?
ಕಲಿಕೆಯಲ್ಲಿ ಮಕ್ಕಳು ಯಾರೂ ಹಿಂದುಳಿಯಬಾರದು. ಶಿಕ್ಷಣದ ಕುರಿತಂತೆ ಎಲ್ಲಾ ಗೊಂದಲಗಳನ್ನು ನಿವಾರಿಸಬೇಕು. ಹೀಗಾಗಿ ಮಕ್ಕಳ ಕಲಿಕಾ ಕೊರತೆಯನ್ನು ನೀಗಿಸಲು ಕಲಿಕಾ ಚೇತರಿಕೆ ಮಾಡಲು ಶಿಕ್ಷಣ ಇಲಾಖೆ ತಯಾರಿ ನಡೆಸಿದೆ. ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ಇವರ ಹಂತದಲ್ಲಿಯೇ ಪ್ರಶ್ನೆ ಪತ್ರಿಕೆ ರೂಪಿಸಿ ಪರೀಕ್ಷೆ ನಡೆಸಿ ಮೌಲ್ಯಮಾಪನ ಮಾಡಬೇಕು. ಫಲಿತಾಂಶವನ್ನು ಶಾಲಾವಾರು ಕ್ಲಸ್ಟರ್ ವಾರು, ತಾಲೂಕುವಾರು ವಿಶ್ಲೇಷಿಸಬೇಕು ಎಂದು ಸೂಚಿಸಲಾಗಿದೆ.
ಆದೇಶ ಏಕೆ?
ಮಕ್ಕಳಲ್ಲಿ ಶಿಕ್ಷಣ ಕೊರತೆಗಳಿದ್ದರೆ ಅದು ತಕ್ಷಣವೇ ಗೊತ್ತಾಗಬೇಕು. ರಾಜ್ಯ ಪಠ್ಯಕ್ರಮದ ಎಲ್ಲಾ ಶಾಲೆಗಳ ವಿದ್ಯಾರ್ಥಿಗಳ ಒಟ್ಟಾರೆ ಸಾಧನೆ ಯಾವ ರೀತಿ ಇದೆ ಎಂಬುದನ್ನು ತಿಳಿಯಲು ಕಷ್ಟವಾಗುತ್ತಿದೆ. ಇದರಿಂದ ಒಟ್ಟಾರೆಯಾಗಿ ಮಕ್ಕಳ ಕಲಿಕೆಯ ಮಟ್ಟವೇನು? ಕೊರತೆಗಳೇನು? ಯಾವ ವಿಷಯದಲ್ಲಿ ಹಿನ್ನಡೆ ಉಂಟಾಗಿದೆ? ಇವುಗಳನ್ನು ನಿವಾರಿಸಲು ಯಾವ ಕ್ರಮಗಳನ್ನು ಅನುಸರಿಸಬೇಕು ಎಂಬುದನ್ನು ನಿರ್ಧರಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಎಲ್ಲಾ ಶಾಲೆಯ ವಿದ್ಯಾರ್ಥಿಗಳ ಕಲಿಕಾ ಪ್ರಗತಿ ಹಾಗೂ ಸಾಮರ್ಥ್ಯಗಳನ್ನಾಧರಿಸಿದ ಏಕರೂಪದ ಸಾಧನಾ ಮತ್ತು ತಂತ್ರ ಬಳಸಿ ಮೌಲ್ಯಮಾಪನ ಮಾಡಿ ವಿಶ್ಲೇಷಣೆ ಮಾಡುವುದು ಅವಶ್ಯವಿದೆ. ಹೀಗಾಗಿ ರಾಜ್ಯದ ಎಲ್ಲಾ ಶಾಲೆಗಳಲ್ಲಿ 5 ಮತ್ತು 8ನೇ ತರಗತಿಗಳಿಗೆ ವಾರ್ಷಿಕ ಪರೀಕ್ಷೆ ಮಾಡಲು ಶಿಕ್ಷಣ ಇಲಾಖೆ ಆದೇಶ ಮಾಡಿದೆ ಎಂದು ತಿಳಿದುಬಂದಿದೆ.
ಪ್ರಯೋಜನಗಳೇನು?
ಎಲ್ಲಾ ಶಾಲೆಯ ವಿದ್ಯಾರ್ಥಿಗಳ ಕಲಿಕಾ ಪ್ರಗತಿಯನ್ನು ಕಲಿಕಾ-ಫಲಗಳನ್ನು ಸಾಮರ್ಥ್ಯಗಳನ್ನಾಧರಿಸಿದ ಏಕರೂಪದ ಸಾಧನಾ ಮತ್ತು ತಂತ್ರ ಬಳಸಿ ಮೌಲ್ಯಮಾಪನ ಮಾಡಿ ವಿಶ್ಲೇಷಣೆ ಮಾಡುವುದು ಅವಶ್ಯವಿದೆ.ಈ ಪ್ರಯುಕ್ತ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಲ [K.S.E.A.B] ಇವರ ಹಂತದಲ್ಲಿ ಪ್ರಶ್ನೆ ಪತ್ರಿಕೆ ರೂಪಿಸಿ, ಸರಬರಾಜು ಮಾಡಿ ಶಾಲಾ ಹಂತದಲ್ಲಿ ಪರೀಕ್ಷೆ ನಿರ್ವಹಿಸಿ ಮೌಲ್ಯಾಂಕನ ವಿಶ್ಲೇಷಣೆ ಮಾಡಿ ಪ್ರಗತಿ ಕುಂಠಿತವಾಗಿರುವ ವಿಷಯವಾರು. ಶಾಲಾವಾರು, ಕ್ಲಸ್ಟರ್/ತಾಲ್ಲೂಕುವಾರು ವಿಶ್ಲೇಷಿಸಿ ಮುಂದಿನ ಶೈಕ್ಷಣಿಕ ವರ್ಷದಲ್ಲಿ ಅಗತ್ಯ ಕ್ರಿಯಾ ಯೋಜನೆಯನ್ನು ರಚಿಸಿ ಭೋಧನಾ-ಕಲಿಕಾ ಪ್ರಕ್ರಿಯೆಯನ್ನು ಬಲವರ್ಧನೆಗೊಳಸುವ ಉದ್ದೇಶ ಹೊಂದಿದೆ. ಆದ್ದರಿಂದ ಸದರಿ ಪರೀಕ್ಷೆ ನಿರ್ವಹಣೆ ಕುರಿತು ಸಂಬಂಧಿಸಿದ ಅನುಷ್ಠಾನಾಧಿಕಾರಿಗಳೊಂದಿಗೆ ಸಭೆಗಳನ್ನು ನಡೆಸಿ, ಚರ್ಚಿಸಿ ನಿರ್ಣಯಿಸಿದಂತೆ ಪರೀಕ್ಷಾ ನಿರ್ವಹಣೆಗೆ ಅಗತ್ಯ ಪೂರ್ವ ಸಿದ್ಧತೆಗಳನ್ನು ಕೈಗೊಳ್ಳಲು ಮಾರ್ಗಸೂಚಿ ಸಿದ್ಧಪಡಿಸಿ ಅನುಬಂದಿಸಿದೆ ಎಂದು ಶಿಕ್ಷಣ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.