ನ್ಯೂಸ್ ನಾಟೌಟ್ : ಕೊರೊನಾ ವೈರಸ್ ನ ಹಾವಳಿಯಿಂದ ದೇಶವು ಇನ್ನೇನು ಚೇತರಿಸಿಕೊಳ್ಳುತ್ತಿರುವ ಬೆನ್ನಲ್ಲೇ ದಕ್ಷಿಣ ಭಾರತದಲ್ಲಿ ಝಿಕಾ ವೈರಸ್ ಹಾವಳಿ ಜೋರಾಗಿದೆ. ಕೇರಳದಲ್ಲಿ ಝಿಕಾ ವೈರಸ್ ಹೆಚ್ಚುತ್ತಿದ್ದು ಈ ನಡುವೆ ಇದೀಗ ಕರ್ನಾಟಕದ ರಾಯಚೂರಿನಲ್ಲಿ 5 ವಷದ ಬಾಲಕಿಗೆ ವೈರಸ್ ಪತ್ತೆಯಾಗಿದೆ ಎನ್ನಲಾಗಿದೆ.
ಪುಣೆ ವೈರಾಲಜಿ ಲ್ಯಾಬ್ನಿಂದ ಪಾಸಿಟಿವ್ ರಿಪೋರ್ಟ್ ಬಂದಿದೆ. ಝಿಕಾ ವೈರಸ್ ಸೋಂಕಿನ ಬಾಲಕಿ ಮೇಲೆ ತೀವ್ರ ನಿಗಾ ವಹಿಸಿದ್ದೇವೆ. ಸೋಂಕು ಪತ್ತೆಯಾದ ಬಾಲಕಿ ಟ್ರಾವೆಲ್ ಹಿಸ್ಟರಿ ಈವರೆಗೂ ಲಭ್ಯವಾಗಿಲ್ಲ. ಹೀಗಾಗಿ ರಾಯಚೂರು ಜಿಲ್ಲಾಡಳಿತ ಬಾಲಕಿ ಟ್ರಾವೆಲ್ ಹಿಸ್ಟರಿ ಪತ್ತೆ ಮಾಡುತ್ತಿದೆ.
ಸೊಳ್ಳೆ ಕಡಿತದಿಂದ ಬರುವ ಝಿಕಾ ವೈರಸ್, ಆಂಧ್ರ, ತೆಲಂಗಾಣ ಸೇರಿ ರಾಜ್ಯದ ಬೇರೆ ಯಾವ ಜಿಲ್ಲೆಯ ಲಿಂಕ್ ಇದೆ ಅನ್ನೋದರ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಕೇಂದ್ರದ ವೈದ್ಯರ ತಂಡ ಏಕಾಏಕಿ ದಿಢೀರ್ ಭೇಟಿ ನೀಡಿ ಝಿಕಾ ವೈರಸ್ಗೆ ಒಳಗಾದ ಬಾಲಕಿ ಹಾಗೂ ಕುಟುಂಬಸ್ಥರನ್ನು ಪರೀಕ್ಷೆಗೆ ಒಳಪಡಿಸಿದೆ.ಮೆಡಿಕಲ್ ರಿಪೋರ್ಟ್ಸ್, ಪುಣೆಯ ಲ್ಯಾಬ್ ರಿಪೋರ್ಟ್ನ ಮಾಹಿತಿ ಸಂಗ್ರಹಿಸಲಾಗುತ್ತಿದೆ ಎಂದು ಸಚಿವ ಕೆ .ಸುಧಾಕರ್ ತಿಳಿಸಿದ್ದಾರೆ. ರಾಜ್ಯದಲ್ಲಿ ಇದುವರೆಗೆ ಝಿಕಾ ವೈರಸ್ನ ಯಾವುದೇ ಹೊಸ ಪ್ರಕರಣಗಳು ಕಂಡುಬಂದಿಲ್ಲ. ಯಾವುದೇ ಆತಂಕ ಪಡುವ ಅಗತ್ಯವಿಲ್ಲ ಎಂದು ತಿಳಿಸಿದ ಸಚಿವರು, ಸರ್ಕಾರವು ಪರಿಸ್ಥಿತಿಯನ್ನು ಎಚ್ಚರಿಕೆಯಿಂದ ಮೇಲ್ವಿಚಾರಣೆ ಮಾಡುತ್ತಿದೆ. ಈ ಬಗ್ಗೆ ಆರೋಗ್ಯ ಇಲಾಖೆ ಸಂಜೆ ಪ್ರತ್ಯೇಕ ಮಾರ್ಗಸೂಚಿ ಬಿಡುಗಡೆ ಮಾಡಲಿದೆ ಎಂದು ಸಚಿವರು ತಿಳಿಸಿದ್ದಾರೆ.
ಏನಿದು ಝಿಕಾ ವೈರಸ್?
ವಿಶ್ವ ಆರೋಗ್ಯ ಸಂಸ್ಥೆ (WHO) ಪ್ರಕಾರ, ಝಿಕಾ ವೈರಸ್ ಈಡಿಸ್ ಸೊಳ್ಳೆಗಳ ಮೂಲಕ ಹರಡುತ್ತದೆ ಎನ್ನಲಾಗಿದೆ.ಇದು ಡೆಂಗ್ಯೂ ಮತ್ತು ಚಿಕೂನ್ಗುನ್ಯಾದಂತಹ ಸೋಂಕುಗಳನ್ನು ಹರಡುತ್ತದೆ.
ಝಿಕಾ ವೈರಸ್ ಲಕ್ಷಣಗಳೇನು ?
WHO ಪ್ರಕಾರ, ದದ್ದುಗಳು, ಜ್ವರ, ಕಾಂಜಂಕ್ಟಿವಿಟಿಸ್, ಸ್ನಾಯು ಮತ್ತು ಕೀಲು ನೋವು, ಅಸ್ವಸ್ಥತೆ ಮತ್ತು ತಲೆನೋವು ರೋಗದ ಸಾಮಾನ್ಯ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಹೀಗಿದ್ದೂ, ಝೀಕಾ ವೈರಸ್ ಹೊಂದಿರುವ ಹೆಚ್ಚಿನ ಜನರು ರೋಗಲಕ್ಷಣಗಳನ್ನು ಎಲ್ಲವನ್ನು ಹೊಂದಿರುವುದಿಲ್ಲ. ರೋಗಲಕ್ಷಣಗಳು ಸಾಮಾನ್ಯವಾಗಿ 2ರಿಂದ 7 ದಿನಗಳವರೆಗೆ ಇರುತ್ತದೆ.
ಝಿಕಾ ವೈರಸ್ ನಿವಾರಣೆ ಹೇಗೆ?
ಈ ಸೋಂಕು ತಗುಲಿದವರಿಗೆ ಹೆಚ್ಚು ದ್ರವಾಹಾರ ಸೇವಿಸುವಂತೆ ತಿಳಿಸಲಾಗುತ್ತದೆ. ರೋಗನಿರೋಧಕ ಶಕ್ತಿ ಹೆಚ್ಚಳದ ಆಹಾರ ಸೇವಿಸಲು ಸಲಹೆ ನೀಡಲಾಗಿದೆ.ಇದಕ್ಕೆ ಯಾವುದೇ ನಿರ್ದಿಷ್ಟ ಲಸಿಕೆ ಅಥವಾ ಔಷಧವಿಲ್ಲ . ಸೊಳ್ಳೆ ನಿರೋಧಕ ತೈಲಗಳನ್ನು ಬಳಸಬಹುದು. 23 ದೇಶಗಳಲ್ಲಿ ಈ ಸೋಂಕು ಕಾಣಿಸಿಕೊಂಡಿತ್ತು. ಕೆರೆಬಿಯನ್, ಮಧ್ಯ ಅಮೆರಿಕ, ದಕ್ಷಿಣ ಅಮೆರಿಕ, ಮೆಕ್ಸಿಕೋ, ಈಜಿಪ್ಟ್, ನೈಜೀರಿಯಾ, ಕೊಲಂಬಿಯಾ, ಮಲೇಷಿಯಾ, ಪಾಕಿಸ್ತಾನ, ಥೈಲ್ಯಾಂಡ್ನಲ್ಲಿ ಕಾಣಿಸಿಕೊಂಡಿತ್ತು. ಇದೀಗ ಭಾರತದ ಕೇರಳ ರಾಜ್ಯದಲ್ಲಿಯೂ ಕಂಡುಬಂದಿದೆ.
ಆರೋಗ್ಯ ರಕ್ಷಣೆ ಹಿನ್ನಲೆ ಆರೋಗ್ಯ ಇಲಾಖೆಯಿಂದ ಮುನ್ನೆಚ್ಚರಿಕಾ ಕ್ರಮಗಳನ್ನು ತಿಳಿಸಲಾಗಿದೆ. ಮುಖ್ಯವಾಗಿ ರೋಗ ನಿಯಂತ್ರಣ ಹಾಗೂ ನಿವಾರಣಾ ಕೇಂದ್ರದ ಪ್ರಕಾರ ಗರ್ಭಿಣಿಯರಿಗೆ ಈ ಝಿಕಾ ವೈರಸ್ ಅಪಾಯಕಾರಿ ಎಂದು ಹೇಳಲಾಗುತ್ತಿದೆ. ಮಹಿಳೆಯಿಂದ ಮಗುವಿಗೂ ಈ ಸೋಂಕು ಹರಡುವ ಸಂಭವನೀಯತೆ ಹೆಚ್ಚು. ಇದು ಹುಟ್ಟಲಿರುವ ಮಗುವಿನಲ್ಲಿ ಆರೋಗ್ಯ ತೊಂದರೆಗಳನ್ನು ತರುತ್ತದೆ. ಸೋಂಕಿತ ವ್ಯಕ್ತಿಯೊಂದಿಗೆ ಲೈಂಗಿಕ ಸಂಪರ್ಕ ಹೊಂದಿದರೂ ಸೋಂಕು ಹರಡುತ್ತದೆ.
ಝಿಕಾ ವೈರಸ್ ಬಗ್ಗೆ ಎಚ್ಚರಿಕೆ ವಹಿಸುವುದು ಹೇಗೆ ?
ಕೊರೊನಾ ವೈರಸ್ ಹರಡದಂತೆ ಯಾವೆಲ್ಲ ಮುನ್ನೆಚ್ಚರಿಕೆಗಳನ್ನು ಅನುಸರಿಸಿದ್ದೆವೋ ಅದೇ ನಿಯಮಗಳನ್ನು ಈ ವೈರಸ್ ಹರಡದಂತೆ ಕಡ್ಡಾಯವಾಗಿ ನಿಯಮಗಳನ್ನು ಪಾಲಿಸಬೇಕಾಗಿದೆ.ಮನೆಯಿಂದ ಹೊರ ಹೋಗುವಾಗ ಯಾವಾಗಲೂ ಮಾಸ್ಕ್ ಧರಿಸಿ. ಸೋಂಕು ಸುಲಭವಾಗಿ ತಗುಲದಂತಿರಲು ಕೈಗಳನ್ನು ಆಗಾಗ ಸ್ಯಾನಿಟೈಸ್ ಮಾಡುತ್ತಿರಿ. ಸೋಪನ್ನು ನಿಯಮಿತವಾಗಿ ಬಳಸುತ್ತಿರಿ. ಮಳೆಯಲ್ಲಿ ಒದ್ದೆಯಾಗಿ ಮನೆಗೆ ಬಂದ ಕೂಡಲೇ ಬಿಸಿ ನೀರಿನಲ್ಲಿ ಸ್ನಾನ ಮಾಡಿ. ಶೀತ, ನೆಗಡಿ, ಜ್ವರ ಕಾಣಿಸಿಕೊಂಡರೆ ತಕ್ಷಣ ಮನೆಮದ್ದು ಟ್ರೈ ಮಾಡಬೇಡಿ. ಬದಲಿಗೆ ತಜ್ಞರನ್ನು ಭೇಟಿ ಮಾಡಿ ಚಿಕಿತ್ಸೆ ಪಡೆಯಿರಿ.
ಝಿಕಾ ವೈರಸ್ ತಡೆಗಟ್ಟಲು ಸೊಳ್ಳೆ ಕಡಿತವನ್ನು ತಪ್ಪಿಸಿ. ಇದಕ್ಕಾಗಿ ದೇಹದ ಗರಿಷ್ಠ ಭಾಗವನ್ನು ಮುಚ್ಚಿ. ಬಯಲಿನಲ್ಲಿ ಮಲಗಿದರೆ ಸೊಳ್ಳೆ ಪರದೆ ಬಳಸಿ. ಮನೆ ಮತ್ತು ನಿಮ್ಮ ಸುತ್ತಮುತ್ತ ಸ್ವಚ್ಛತೆ ಬಗ್ಗೆ ಕಾಳಜಿ ವಹಿಸಿ. ಸೊಳ್ಳೆಗಳು ಬೆಳೆಯದಂತೆ ತಡೆಯಲು ನಿಂತ ನೀರನ್ನು ಸಂಗ್ರಹಿಸಲು ಬಿಡಬೇಡಿ. ಅಲ್ಲದೆ ಜ್ವರ, ಗಂಟಲು ನೋವು, ಕೀಲು ನೋವು, ಚರ್ಮ ಕೆಂಪಗಾಗಿಸುವಿಕೆಯಂತಹ ರೋಗ ಲಕ್ಷಣಗಳನ್ನು ಗಮನಿಸಿದರೆ, ತಕ್ಷಣವೇ ವೈದ್ಯರನ್ನು ಭೇಟಿಮಾಡಿ. ಸಾಕಷ್ಟು ವಿಶ್ರಾಂತಿಯೊಂದಿಗೆ ಸಾಧ್ಯವಾದಷ್ಟು ದ್ರವಾಹಾರ ಸೇವಿಸಿದರೆ ಉತ್ತಮ.