ನ್ಯೂಸ್ ನಾಟೌಟ್: ಸುಳ್ಯದ ಅಡಿಕೆ ಕೃಷಿಕರು ಹಳದಿ ರೋಗದಿಂದ ಕಂಗಾಲಾಗಿದ್ದಾರೆ. ಇದೀಗ ಅದರ ಜೊತೆಗೆ ಅಡಿಕೆ ಚುಕ್ಕಿ ರೋಗ ಕೂಡ ರೈತರನ್ನು ಸಂಪೂರ್ಣವಾಗಿ ಮುಳುಗಿಸುವ ಆತಂಕ ಎದುರಾಗಿದೆ. ಇದೆಲ್ಲದರ ನಡುವೆ ಸರಕಾರ ಇದನ್ನು ಗಂಭೀರವಾಗಿ ಪರಿಗಣಿಸಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾಣಿಸಿಕೊಂಡಿರುವ ಎಲೆಚುಕ್ಕಿ ರೋಗದ ಸಂಶೋಧನೆಗಾಗಿ ಇಸ್ರೇಲಿನ ವಿಜ್ಞಾನಿಗಳೊಂದಿಗೆ ಚರ್ಚಿಸಲು ರಾಜ್ಯ ತೋಟಗಾರಿಕಾ ಸಚಿವ ಮುನಿರತ್ನ ನಿರ್ಧರಿಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆ ಸುಳ್ಯ ತಾಲೂಕಿನ ಮರ್ಕಂಜ ಗ್ರಾಮದಲ್ಲಿ ಭಾನುವಾರ ಎಲೆಚುಕ್ಕಿ ರೋಗದಿಂದ ನಾಶವಾಗಿರುವ ವಿವಿಧ ಗ್ರಾಮದಲ್ಲಿ ಅಡಿಕೆ ತೋಟಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬಂದರು, ಮೀನುಗಾರಿಕೆ ಹಾಗು ಒಳನಾಡು ಜಲ ಸಾರಿಗೆ ಸಚಿವ ಎಸ್.ಅಂಗಾರ ಅವರ ಜೊತೆಯಲ್ಲಿ ಸಚಿವ ಮುನಿರತ್ನ ಅವರು ವಿವಿಧ ತೋಟಗಳಿಗೆ ಭೇಟಿ ನೀಡಿ ರೈತರ ಜೊತೆ ಸಮಾಲೋಚನೆ ನಡೆಸಿದರು. ಹಳದಿ ರೋಗ ಹಾಗೂ ಎಲೆಚುಕ್ಕಿ ರೋಗ ವ್ಯಾಪಕವಾಗಿ ಹರಡಿ ತೋಟ ನಾಶವಾಗಿರುವ ಕೃಷ್ಣ ಕಿಶೋರ್ ಅಡಿಕೆಹಿತ್ಲು, ವೆಂಕಟ್ರಮಣ ಅಂಗಡಿಮಜಲು, ವಿಶ್ವಾಸ್ ಹಾಗು ವಶಿಷ್ಠ ಮಾಪಲತೋಟ ಅವರ ತೋಟಗಳನ್ನು ಸಚಿವರಿಬ್ಬರು ವೀಕ್ಷಿಸಿದರು. ಕಳೆದ ಹಲವು ವರ್ಷಗಳಿಂದ ಮರ್ಕಂಜ ಭಾಗದಲ್ಲಿ ಹಳದಿ ರೋಗ ಬಾದೆ, ಬೇರು ಹುಳ ಬಾದೆ ಕಾಣಿಸಿಕೊಂಡಿದೆ. ಇದೀಗ ಎಲೆ ಚುಕ್ಕಿ ರೋಗವು ವ್ಯಾಪಕವಾಗಿ ಹಬ್ಬಿದೆ. ಹಳದಿ ಪೀಡಿತ ತೋಟಗಳಲ್ಲಿ ಎಲೆಚುಕ್ಕಿ ವೇಗವಾಗಿ ಹರಡುತ್ತಿದೆ. ಹಳದಿ ಎಲೆ ಪೀಡಿತ ತೋಟಗಳು ಕೆಲವು ವರ್ಷ ಫಸಲು ನೀಡುತ್ತವೆ. ಆದರೆ ಎಲೆ ಚುಕ್ಕಿ ರೋಗ ತಗುಲಿದ ತೋಟಗಳು ಬಹಳ ಬೇಗ ನಾಶವಾಗುತ್ತಿದೆ ಎಂದು ಬೆಳೆಗಾರರು ಸಚಿವರಿಗೆ ವಿವರಿಸಿದರು. ನಿರಂತರ ಸಂಶೋಧನೆ ನಡೆಸಿ ಇದಕ್ಕೆ ಶಾಶ್ವತ ಪರಿಹಾರ ಹುಡುಕುವ ಕೆಲಸ ಸರಕಾರ ಮಾಡುತ್ತದೆ ಎಂದು ಸಚಿವರು ಕೃಷಿಕರಿಗೆ ಭರವಸೆ ನೀಡಿದರು. ಸದ್ಯ ಈ ಬಗ್ಗೆ ಸಂಶೋಧನೆ ನಡೆಯುತ್ತಿದ್ದು ರೈತರಿಗೊಂದು ಶಾಶ್ವತ ಪರಿಹಾರ ದೊರೆಯಲಿದೆ.