ನ್ಯೂಸ್ ನಾಟೌಟ್ : ನಿಯತ್ತಿಗೆ ಮತ್ತೊಂದು ಹೆಸರೇ ಶ್ವಾನ. ಮಾಲೀಕ ಹಾಕಿದ ತುತ್ತು ಅನ್ನಕ್ಕೆ ಸಾಯುವವರೆಗೂ ಋಣಿಯಾಗಿರುತ್ತದೆ ಇದು ಅಕ್ಷರಸಹ ಸತ್ಯ ಅನ್ನುವುದು ಎಷ್ಟೋ ಸಂದರ್ಭಗಳಲ್ಲಿ ಸಾಬೀತಾಗಿದೆ. ನಾಯಿಗಳಿಗೆ ಮನುಷ್ಯನ ಮೇಲಿರುವಷ್ಟು ಬಾಂಧವ್ಯ, ಪ್ರೀತಿ ಬೇರೆ ಪ್ರಾಣಿಗಳಿಗೆ ಅಸಾಧ್ಯ. ಯಾವುದೇ ಸ್ವಾರ್ಥವಿಲ್ಲದೆ ಅವು ತನ್ನ ಒಡೆಯನನ್ನು ಪ್ರೀತಿಸುತ್ತವೆ.ಹೌದು, ಇಂತಹ ನಿಸ್ವಾರ್ಥ ಪ್ರೀತಿಯನ್ನು ತೋರಿಸುವ ನಿಷ್ಠಾವಂತ ಮುಗ್ಧ ನಾಯಿಯನ್ನು ದೇವಾಲಯಗಳಲ್ಲಿ ಪೂಜಿಸಲಾಗುತ್ತದೆ!! ಅರೆ! ಅದೆಲ್ಲಿ ಅಂತ ನಿಮಗೆ ಆಶ್ಚರ್ಯವಾಗುತ್ತಿರಬಹುದು.
ಹೌದು, ಈ ದೇವಾಲಯದ ನಿರ್ಮಾಣದ ಕಥೆ ಕೂಡ ಅಷ್ಟೇ ಆಸಕ್ತಿದಾಯಕವಾಗಿದೆ. ಈ ದೇವಾಲಯದ ಹಿಂದೆ ಬಂಜಾರ ಹಾಗೂ ಸಾಕು ನಾಯಿಯ ರೋಚಕ ಕಥೆ ಇದೆ.ಜನರು ಕೂಡ ಈ ದೇಗುಲಕ್ಕೆ ಬಂದು ದರ್ಶನ ಪಡೆದು ಪುನೀತರಾಗುತ್ತಾರೆ. ಅಷ್ಟೊಂದು ಆಳವಾದ ಭಕ್ತಿ ಆ ಭಾಗದ ಜನರಲ್ಲಿದೆ.
ಈ ಪ್ರಸಿದ್ಧ ದೇವಾಲಯದ ಹೆಸರು ಕುಕುರ್ ದೇವ್ ದೇವಾಲಯ. ಛತ್ತೀಸ್ಗಢದ ಬಲೋದ್ ಜಿಲ್ಲೆಯಲ್ಲಿದೆ. ಬಲೋದ್ ಜಿಲ್ಲಾ ಕೇಂದ್ರದಿಂದ ಸರಿ ಸುಮಾರು 6 ಕಿಲೋಮೀಟರ್ ದೂರದಲ್ಲಿರುವ ಖಾಪ್ರಿ ಗ್ರಾಮದಲ್ಲಿದೆ. ಈ ಪುರಾತನ ದೇವಾಲಯವು ಯಾವುದೇ ದೇವತೆಗೆ ಸಮರ್ಪಿತವಾಗಿಲ್ಲ ಆದರೆ ನಾಯಿಗೆ ಮಾತ್ರ ಮೀಸಲಾಗಿದೆ.
ಹಲವರಿಗೆ ನಾಯಿ ಕಚ್ಚುತ್ತೆ ಅನ್ನುವ ಭಯವೂ ಇದೆ ಹಾಗೂ ನಾಯಿ ಕುರಿತಂತೆ ಎಲ್ಲಾ ಭಯವನ್ನು ಹೋಗಲಾಡಿಸಲು ಈ ದೇಗುಲಕ್ಕೆ ಬಂದು ಪ್ರಾರ್ಥನೆ ಮಾಡುತ್ತಾರೆ ಭಕ್ತರು. ದೇವಸ್ಥಾನದಲ್ಲಿ ನಾಯಿಯ ಜೊತೆಗೆ ಶಿವಲಿಂಗವನ್ನೂ ಪೂಜಿಸಲಾಗುತ್ತದೆ. ಕುಕುರದೇವನ ದರ್ಶನದಿಂದ ನಾಯಿಯಿಂದ ಯಾವುದೇ ಭಯವಾಗಲೀ ನಾಯಿ ಕಚ್ಚುವ ಭಯವಾಗಲೀ ಇರುವುದಿಲ್ಲ ಎಂಬುದು ನಂಬಿಕೆ.
ಪ್ರಾಣಿ ನಿಷ್ಠೆ ಮುಂದೆ ತಲೆ ಬಾಗಿದ ರಾಜಕಾರಣಿಗಳು:
ಇಲ್ಲಿ ಸಾಮಾನ್ಯ ಭಕ್ತರಿಂದ ಹಿಡಿದು ರಾಜಕಾರಣಿಗಳು ಕೂಡ ಇಲ್ಲಿ ಬಂದು ನಮಸ್ಕರಿಸುತ್ತಾರೆ. ಯಾವುದೇ ರಾಜಕಾರಣಿ ಈ ಪ್ರದೇಶಕ್ಕೆ ಬಂದರೆ, ಅವರು ಖಂಡಿತವಾಗಿಯೂ ಇಲ್ಲಿಗೆ ಬಂದು ದರ್ಶನ ಪಡೆಯುತ್ತಾರೆ. ಬಲೋದ್ ಪ್ರವಾಸದಲ್ಲಿದ್ದ ಛತ್ತೀಸ್ಗಢ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಕೂಡ ಇಲ್ಲಿಗೆ ಆಗಮಿಸಿ, ದೇಗುಲಕ್ಕೆ ಬಂದು ದೇವರ ದರ್ಶನ ಪಡೆದಿದ್ದಾರೆ.ಕುಕುರ್ದೇವ್ ದೇವಾಲಯದಲ್ಲಿ ಧ್ವನಿಯಿಲ್ಲದ ಪ್ರಾಣಿಯ ನಿಷ್ಠೆ, ಜಾನಪದ ನಂಬಿಕೆಗೆ ತಲೆಬಾಗಿ, ರಾಜ್ಯದ ಸಂತೋಷ, ಸಮೃದ್ಧಿಯನ್ನು ಬಯಸಿದರು.
ವಾಸ್ತವವಾಗಿ ಇದು ಸ್ಮಾರಕ :
ಕುಕುರ್ ದೇವ್ ದೇವಾಲಯವು ವಾಸ್ತವವಾಗಿ ಒಂದು ಸ್ಮಾರಕ. ಇದನ್ನು ನಿಷ್ಠಾವಂತ ನಾಯಿಯ ನೆನಪಿಗಾಗಿ ನಿರ್ಮಿಸಲಾಗಿದೆ ಎಂದು ಹೇಳಲಾಗುತ್ತಿದೆ. ಕ್ರಮೇಣ ಇದು ದೇವಾಲಯದ ರೂಪವನ್ನು ಪಡೆದುಕೊಂಡಿತು ಮತ್ತು ಜಾನಪದ ನಂಬಿಕೆಯೊಂದಿಗೆ ಸಂಬಂಧ ಹೊಂದಿತು.
ದೇವಾಲಯದ ನಿರ್ಮಾಣ ಹೇಗಾಯ್ತು?
ಈ ಕಥೆಯೇ ತುಂಬಾನೇ ಸ್ವಾರಸ್ಯಕರವಾಗಿದೆ. ಜಾನಪದ ನಂಬಿಕೆಗಳ ಪ್ರಕಾರ, ಶತಮಾನಗಳ ಹಿಂದೆ ಬಂಜಾರರು ಅಥವಾ ಲಂಬಾಣಿ ಜನಾಂಗದವರು ತಮ್ಮ ನಾಯಿ ಮತ್ತು ಕುಟುಂಬದೊಂದಿಗೆ ಈ ದೇಗುಲವಿರುವ ಸ್ಥಳಕ್ಕೆ ಬಂದರು. ಒಮ್ಮೆ ಆ ಗ್ರಾಮದಲ್ಲಿ ಕ್ಷಾಮ ಉಂಟಾದಾಗ, ಬಂಜಾರರು ಗ್ರಾಮದ ಲೇವಾದೇವಿಗಾರರಿಂದ ಸಾಲ ತೆಗೆದುಕೊಂಡರು. ಆದರೆ ಅವರು ಸಾಲವನ್ನು ಮರುಪಾವತಿಸಲು ಸಾಧ್ಯವಾಗಲಿಲ್ಲ. ಅಂತಹ ಪರಿಸ್ಥಿತಿಯಲ್ಲಿ, ಅವರು ತನ್ನ ನಂಬಿಗಸ್ತ ನಾಯಿಯನ್ನು ಲೇವಾದೇವಿಗಾರರಿಗೆ ಅಡವಿಟ್ಟು ಅಲ್ಲೇ ಸ್ವಲ್ಪ ದೂರದಲ್ಲಿ ವಾಸ್ತವ್ಯ ಹೂಡಿದರು.
ಸ್ವಲ್ಪ ದಿನದ ನಂತರ ಲೇವಾದೇವಿಗಾರನ ಸ್ಥಳದಿಂದ ಕಳ್ಳರು ಕೆಲ ಅಮೂಲ್ಯ ವಸ್ತುಗಳನ್ನು ಕಳವು ಮಾಡಿ ಗುಂಡಿಯೊಳಗೆ ಹೂತಿಟ್ಟರು. ಆದರೆ ನಾಯಿಯು ಲೂಟಿ ಮಾಡಿದ ಮಾಲು ಬಗ್ಗೆ ತಿಳಿದುಕೊಂಡು ಲೇವಾದೇವಿಗಾರನನ್ನು ಆ ಸ್ಥಳಕ್ಕೆ ಕರೆದೊಯ್ದಿತು. ನಾಯಿ ಹೇಳಿದ ಜಾಗದಲ್ಲಿ ಲೇವಾದೇವಿಗಾರ ಹೊಂಡ ತೋಡಿದಾಗ ಅವನ ಮನೆಯ ಅಮೂಲ್ಯ ವಸ್ತುಗಳೆಲ್ಲ ಸಿಕ್ಕವು. ಇದರಿಂದ ಸಂತಸಗೊಂಡ ಲೇವಾದೇವಿಗಾರ ನಾಯಿಯ ಕುತ್ತಿಗೆಗೆ ಚೀಟಿ ಹಾಕಿ ಅದರ ಮೂಲ ಮಾಲೀಕರಿಗೆ ಕಳುಹಿಸಿ ಕೊಟ್ಟ.
ನಾಯಿಯು ಬಂಜಾರರಿರುವ ಬಳಿ ತಲುಪಿದ ತಕ್ಷಣ, ನಾಯಿಯು ಲೇವಾದೇವಿಗಾರನಿಂದ ತಪ್ಪಿಸಿಕೊಂಡಿದೆ ಎಂದು ಅವರಿಗೆ ಅನಿಸಿತು. ಇದರಿಂದ ಕೋಪಗೊಂಡು ನಾಯಿಯನ್ನು ಹೊಡೆದು ಸಾಯಿಸಿದರು. ಆದರೆ ಕುತ್ತಿಗೆಯಲ್ಲಿದ್ದ ಚೀಟಿಯನ್ನು ಕಂಡು ಬಂಜಾರರು ಪಶ್ಚಾತ್ತಾಪ ಪಟ್ಟರು. ಅದರ ನಂತರ ಅವರು ಅದೇ ಸ್ಥಳದಲ್ಲಿ ನಾಯಿಯನ್ನು ಸಮಾಧಿ ಮಾಡಿದರು ಮತ್ತು ಅದರ ಮೇಲೆ ಸ್ಮಾರಕವನ್ನು ನಿರ್ಮಿಸಿದರು. ಅದು ನಂತರ ದೇವಾಲಯವಾಯಿತು. ನಂತರ ಇದನ್ನು ನಾಗವಂಶಿ ಅರಸರು ನವೀಕರಿಸಿದರು.
ಗಮನ ಸೆಳೆಯುವ ‘ಬಂಜಾರೆ’ ಗ್ರಾಮ :
ಈ ಮೇಲೆ ತಿಳಿಸಿದಂತೆ ಬಂಜಾರೆ ಎಂಬ ಹೆಸರಿನ ಗ್ರಾಮವು ದೇವಾಲಯದ ಸಮೀಪದಲ್ಲಿದೆ. ಖಾಪ್ರಿ ಗ್ರಾಮದ ಕುಕುರ್ದೇವ್ ದೇವಸ್ಥಾನದ ಮುಂಭಾಗದ ರಸ್ತೆ ದಾಟಿದ ತಕ್ಷಣ ಮಾಲಿ ಧೋರಿ ಗ್ರಾಮವು ಪ್ರಾರಂಭವಾಗುತ್ತದೆ.
ನವರಾತ್ರಿ ಮತ್ತು ಮಹಾಶಿವರಾತ್ರಿಯಲ್ಲಿ ವಿಶೇಷ ಪೂಜೆ:
ನವರಾತ್ರಿ ಮತ್ತು ಮಹಾಶಿವರಾತ್ರಿಯಲ್ಲಿ ಭಕ್ತರ ದಂಡೇ ಇಲ್ಲಿ ನೆರೆದಿರುತ್ತದೆ.ನವರಾತ್ರಿಯ ಸಮಯದಲ್ಲಿ ಜನರು ಇಲ್ಲಿ ಬಂದು ತಮ್ಮ ಇಷ್ಟಾರ್ಥಗಳನ್ನು ಸ್ಮರಿಸಿ ದೀಪ ಬೆಳಗಿಸುತ್ತಾರೆ. ಮಹಾಶಿವರಾತ್ರಿಯಂದು ಇಲ್ಲಿ ವಿಶೇಷ ಪೂಜೆಯೂ ನಡೆಯುತ್ತದೆ. ಒಟ್ಟಿನಲ್ಲಿ ಶ್ವಾನ ಪ್ರಿಯರಿಗೆ ಈ ದೇವಾಲಯ ತುಂಬಾ ಪ್ರಿಯವಾದ ದೇಗುಲ.ಈ ವಿಶಿಷ್ಟ ದೇಗುಲಕ್ಕೆ ದೇಶ ಮಾತ್ರವಲ್ಲ ವಿದೇಶಗಳಿಂದಲೂ ಜನ ಸಾಗರವೇ ಹರಿದು ಬರುತ್ತಿದೆ ಎಂದರೆ ಆಶ್ಚರ್ಯ ಪಡಬೇಕಾದ ವಿಚಾರ.