ನ್ಯೂಸ್ ನಾಟೌಟ್ :ಮಂಗಳೂರಿನ ಬಾರೊಂದರ ಬಳಿ ಕುಡುಕನೋರ್ವನಿಗೆ ಲಕ್ಷಗಟ್ಟಲೆ ನೋಟು ತುಂಬಿದ್ದ ಪೆಟ್ಟಿಗೆ ಸಿಕ್ಕಿದ್ದ ಪ್ರಕರಣದ ಕುರಿತಂತೆ ಪೊಲೀಸ್ ಆಯುಕ್ತರು ಮಾಹಿತಿ ನೀಡಿದ್ದಾರೆ.
ಪಂಪ್ ವೆಲ್ ಬಸ್ ನಿಲ್ದಾಣ ಸಮೀಪ ಪಾರ್ಕಿಂಗ್ ಸ್ಥಳದಲ್ಲಿ ತಮಿಳುನಾಡು ಮೂಲದ ಶಿವರಾಜ್ ಎಂಬವರಿಗೆ ನೋಟಿನ ಕಂತೆ ಸಿಕ್ಕಿರುವುದರ ಸುದ್ದಿ ಬಾರಿ ವೈರಲ್ ಆಗಿತ್ತು.ಚರ್ಚೆಗೂ ಕಾರಣವಾಗಿತ್ತು.ಇದೀಗ ಪೊಲೀಸ್ ಆಯುಕ್ತರು ಈ ಬಗ್ಗೆ ಮಂಗಳೂರಿನಲ್ಲಿ ಮಾಹಿತಿಯನ್ನು ನೀಡಿದ್ದಾರೆ.
ಪೆಟ್ಟಿಯೊಳಗೆಷ್ಟು ರೂ. ಇತ್ತು?
ಈ ಘಟನೆ ನಡೆಯುತ್ತಿದ್ದಂತೆ ಪೆಟ್ಟಿಗೆಯೊಳಗೆ ೧೦ ಲಕ್ಷ ರೂ. ಇತ್ತು ಎನ್ನುವ ಸುದ್ದಿ ಮಾಧ್ಯಮ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿಯೂ ಹರಿದಾಡಿತ್ತು.ಆದರೆ ಈ ಬಗ್ಗೆ ಮಾತನಾಡಿದ ಪೊಲೀಸ್ ಆಯುಕ್ತರು ನೋಟಿನ ಬಂಡಲ್ ನಲ್ಲಿ ಕೆಲ ನೋಟುಗಳನ್ನು ಶಿವರಾಜ್ ಅವರು ತುಕಾರಾಮ್ ಎನ್ನುವವರಿಗೆ ನೀಡಿದ್ದರು. ಅವರ ಮನೆಯವರು 2.99
ಲ.ರೂ.ಗಳನ್ನು ತಂದು ಪೊಲೀಸರಿಗೆ ಒಪ್ಪಿಸಿದ್ದಾರೆ. ಶಿವರಾಜ್ ಬಳಿ ಇದ್ದ 49,000 ರೂ. ಕೂಡ ಪೊಲೀಸರ ಸುಪರ್ದಿಯಲ್ಲಿದೆ.ಇನ್ನು ಆ ಬಂಡಲ್ ನಲ್ಲಿ ಒಟ್ಟು ಎಷ್ಟು ಹಣವಿತ್ತು? ಬೇರೆ ಯಾರಾದರೂ ಬಂಡಲ್ ನಿಂದ ಹಣ ಪಡೆದು ಕೊಂಡು ಹೋಗಿದ್ದಾರೆಯೇ ? ಆ ಹಣದ ಬಂಡಲ್ ನ್ನು ತಂದಿಟ್ಟವರಾರು? ಎಂಬಿತ್ಯಾದಿ ವಿಚಾರಗಳ ಬಗ್ಗೆ ತನಿಖೆ ಮುಂದುವರಿದಿದೆ ಎಂದು ಆಯುಕ್ತರು ತಿಳಿಸಿದ್ದಾರೆ. ಆ ಬಂಡಲ್ ನಿಂದ ಯಾರಾದರೂ ಹಣ ಪಡೆದುಕೊಂಡು ಹೋಗಿದ್ದರೆ ವಾಪಸ್ ನೀಡಬೇಕು. ಅವರ ವಿರುದ್ಧ ಕೇಸು ದಾಖಲಿಸುವುದಿಲ್ಲ ಎಂದವರು ತಿಳಿಸಿದರು. ಹಣದ ಮೂಲ ಪತ್ತೆಗೆ ತನಿಖೆ ನಡೆಯುತ್ತಿದೆ ಎಂದು ಆಯುಕ್ತರು ವಿವರವಾಗಿ ತಿಳಿಸಿದರು.