ನ್ಯೂಸ್ ನಾಟೌಟ್: ರಾಜ್ಯಾದ್ಯಂತ ಸುದ್ದಿಯಾದ ಮಂಗಳೂರಿನಲ್ಲಿ ನಡೆದ ಕುಕ್ಕರ್ ಬಾಂಬ್ ಪ್ರಕರಣಕ್ಕೆ ಇದೀಗ ಯಕ್ಷಗಾನ ಬಯಲಾಟದಲ್ಲೂ ಸ್ಫೋಟಿಸಿ ಸುದ್ದಿಯಾಗಿದೆ. ಸಾಮಾಜಿಕ ಜಾಲತಾಣದಲ್ಲಂತೂ ವಿಡಿಯೋ ವೈರಲ್ ಆಗಿದೆ.
ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ಕೃಪಾಪೋಷಿತ ದಶಾವತಾರ ಯಕ್ಷಗಾನ ಮಂಡಳಿಯ ಮೇಳದ ನೂತನ ಪ್ರಸಂಗದಲ್ಲಿ ಕುಕ್ಕರ್ ಹಿಡಿದುಕೊಂಡು ಬರುವ ದೃಷ್ಯ ಕಂಡುಬಂದಿದೆ. ಬಪ್ಪನಾಡು ಮೇಳದ ಮುಖ್ಯ ಹಾಸ್ಯಗಾರ ದಿನೇಶ್ ಕೋಡಪದವು ಅವರು ಕುಕ್ಕರ್ ಸಹಿತ ರಂಗಸ್ಥಳಕ್ಕೆ ಬಂದಿದ್ದಾರೆ. ತನಗೆ ಉಳಿದುಕೊಳ್ಳಲು ಎಲ್ಲೂ ಒಂದು ಕೊಠಡಿ ದೊರಕದಿರುವುದಕ್ಕೆ ಇದೇ ಕಾರಣವೆಂದು ಗೋಣಿಯಿಂದ ಕುಕ್ಕರ್ ಎತ್ತಿ ತೋರಿಸುತ್ತಾರೆ. ಕುಕ್ಕರ್ ನೋಡುತ್ತಲೇ ರಂಗಸ್ಥಳದಲ್ಲಿದ್ದ ಮತ್ತೊಬ್ಬ ಪಾತ್ರಧಾರಿ ಹೆದರಿ ಓಡಿಹೋಗುತ್ತಾನೆ. ಅವರು ರಂಗಸ್ಥಳದ ಹೊರಗಡೆಯಿಂದಲೇ ಅದನ್ನು ಎಸೆದುಬಿಡು ಸ್ಪೋಟ ಆಗುತ್ತದೆ ಎಂದು ಹೇಳುತ್ತಾರೆ. ಆಗ ಹಾಸ್ಯ ಪಾತ್ರಧಾರಿಯು ‘ಇದನ್ನು ನಾನು ಅನ್ನ ಬೇಯಿಸಲು ತಂದಿರುವೆ’ ಎಂದು ಹೇಳುತ್ತಾರೆ. ‘ಮೊನ್ನೆ ಒಂದು ಕಡೆಯಲ್ಲಿ ಇದೇ ರೀತಿಯದ್ದೊಂದು ಸ್ಪೋಟ ಆಗಿದೆ’ ಎಂದು ಪಾತ್ರಧಾರಿ ಹೇಳುತ್ತಾರೆ. ಈ ಮೂಲಕ ನಗರದಲ್ಲಿ ನಡೆದ ಕುಕ್ಕರ್ ಬಾಂಬ್ ಸ್ಫೋಟದ ವಿಚಾರವನ್ನು ಹಾಸ್ಯದ ರೂಪದಲ್ಲಿ ಯಕ್ಷಗಾನದಲ್ಲಿ ತೆರೆದಿಡಲಾಗಿದೆ. ದಿನೇಶ್ ಕೋಡಪದವು ಅವರು ಪ್ರಸ್ತುತ ನಡೆಯುವ ವಿಚಾರಗಳನ್ನು ಹಾಸ್ಯ ರೂಪದಲ್ಲಿ ರಂಗಸ್ಥಳದ ಮೇಲೆ ತರುವಲ್ಲಿ ಎತ್ತಿದ ಕೈ. ಯಕ್ಷಗಾನದಲ್ಲಿ ಕುಕ್ಕರ್ ಬಾಂಬ್ ವಿಷಯವನ್ನು ಜನರಂತೂ ನಕ್ಕು ನಕ್ಕು ಸುಸ್ತಾದರು.