ನ್ಯೂಸ್ ನಾಟೌಟ್: ಬಸ್ ಪ್ರಯಾಣ ಅಂದ್ರೆ ಯಾರಿಗೆ ತಾನೇ ಇಷ್ಟ ಇರಲ್ಲ. ಮಕ್ಕಳಿಗಂತೂ ಕಿಟಕಿ ಬಳಿ ಕೂತು ಪ್ರಯಾಣಿಸುವುದೇ ಖುಷಿ. ಅಂದ ಹಾಗೆ ಬಸ್ ಸ್ಟ್ಯಾಂಡೇ ಬಸ್ ಆದರೆ ಹೇಗಿರುತ್ತೆ? ನಿಮಗೂ ಅಚ್ಚರಿ ಆಗಬಹುದು. ಬಸ್ ಸ್ಟ್ಯಾಂಡ್ ಬಸ್ ಆಗಲು ಹೇಗೆ ಸಾಧ್ಯ? ಅಂತ ನೀವು ಪ್ರಶ್ನೆ ಮಾಡಬಹುದು. ಆದರೆ ಇಲ್ಲೊಂದು ಕಡೆ ಬಸ್ ಸ್ಟ್ಯಾಂಡೇ ಬಸ್ ಆಗಿ ಪರಿವರ್ತನೆಯಾಗಿದೆ. ಸಾಮಾಜಿಕ ಜಾಲತಾಣಗಳಲ್ಲಂತೂ ಇದರ ಫೋಟೋ ವೈರಲ್ ಆಗುತ್ತಿದೆ.
ಹೇಗಿದೆ ಬಸ್ ಸ್ಟ್ಯಾಂಡ್?
ಇಂಥಹದ್ದೊಂದು ವಿಶೇಷ ಬಸ್ ನಿಲ್ದಾಣ ಕಂಡು ಬಂದಿರುವುದು ಉಡುಪಿಯ ನಿಟ್ಟೆ ಬೆಳ್ಮಣ್ಣು , ಮಂಚಕಲ್ಲು ಮಾರ್ಗವಾಗಿ ಶಂಕರಪುರ ದಾಟಿ ಸುಭಾಶನಗರ (ಕುಂಜಾರುಗಿರಿ ಕ್ರಾಸ್) ದಲ್ಲಿ. ಸುಮಾರು ೪೦ ವರ್ಷಗಳ ಹಿಂದೆಯೇ ಈ ಬಸ್ ಸ್ಟಾಪ್ ನಿರ್ಮಿಸಲಾಗಿದೆ. ಇಲ್ಲಿ ಪ್ರಯಾಣಿಕರು ಬಸ್ ಪ್ರಯಾಣದ ಸುಂದರ ಕನಸುಗಳನ್ನು ರಿಯಲ್ ಬಸ್ ಬರುವುದಕ್ಕೆ ಮೊದಲೇ ಅನುಭವಿಸಬಹುದು. ಊರಿನವರೂ ಕೂಡ ಈ ಬಸ್ ಸ್ಟ್ಯಾಂಡ್ ಅನ್ನು ವಿಶೇಷ ಕಾಳಜಿಯಿಂದ ನೋಡಿಕೊಂಡಿದ್ದಾರೆ.
ಏನೇನಿದೆ?
ಬಸ್ ನಿಲ್ದಾಣದ ಒಳಗೆ ಎತ್ತರದ ಡ್ರೈವರ್ ಸೀಟ್, ಫಸ್ಟ್ ಏಡ್ ಕಿಟ್, ಸಮಾಜಮುಖಿ ಚಿಂತನೆಯ ಗೋಡೆ ಬರಹಗಳು ಜನರನ್ನು ಹೆಚ್ಚು ಆಕರ್ಷಿಸುತ್ತದೆ.
ಗ್ರಂಥಾಲಯದ ಕನಸು
ಇಂತಹ ಮಾದರಿ ಬಸ್ ತಾಣಗಳನ್ನು ಇನ್ನಷ್ಟು ಹೆಚ್ಚು ನಿರ್ಮಿಸಬೇಕು. ಸದ್ಯ ಯಾರಾದರೂ ಬಸ್ ಸ್ಟ್ಯಾಂಡ್ನ ಒಳಗೆ ಸಣ್ಣ ಕಪಾಟೊಂದನ್ನು ನಿರ್ಮಿಸಿಕೊಡುವುದಕ್ಕೆ ಮುಂದಾದರೆ ಅಲ್ಲಿಗೆ ಬೇಕಾದಷ್ಟು ಪುಸ್ತಕವನ್ನು ಕೊಡುತ್ತೇವೆ. ಬಸ್ ನಿಲ್ದಾಣಕ್ಕೆ ಬರುವ ಜನರು ಸ್ವಲ್ಪ ಹೊತ್ತು ಪುಸ್ತಕಗಳನ್ನು ಓದಿ ಹೋಗಲಿ. ಜತೆಗೆ ಊರಿಗೆ ಒಂದೊಳ್ಳೆ ಗ್ರಂಥಾಲಯ ಕೂಡ ಆಗುತ್ತದೆ ಎನ್ನುವ ಮನದ ಆಸೆಯನ್ನು ಉಡುಪಿಯ ಕಂಡೀರಾ ಫೇಸ್ ಬುಕ್ ಪುಟದಲ್ಲಿ ಮಂಜುನಾಥ್ ಕಾಮತ್ ವ್ಯಕ್ತಪಡಿಸಿದ್ದಾರೆ.