ನ್ಯೂಸ್ ನಾಟೌಟ್: ಮದ್ಯಪಾನದಿಂದ ಅದೆಷ್ಟೋ ಕುಟುಂಬಗಳು ಬೀದಿಗೆ ಬಂದಿದೆ. ಮನುಷ್ಯನಿಗೆ ಕುಡಿತದ ಚಟ ಶುರುವಾದರೆ ಸಾಕು ,ಆತ ಏನು ಮಾಡುತ್ತಾನೆ ಎಂಬುವುದು ಆತನಿಗೇ ಅರಿವಿರುವುದಿಲ್ಲ. ಕುಡುಕ ಇರುವ ಮನೆಯಲ್ಲಿ ಬೊಬ್ಬೆ – ಜಗಳಗಳು ಇದ್ದದ್ದೇ… ಮನೆಯವರಂತೂ ನೆಮ್ಮದಿಯಿಂದ ಮಲುಗುವುದಕ್ಕೂ ಸಾಧ್ಯವಿಲ್ಲ. ಇಲ್ಲೊಬ್ಬ ಕುಡುಕ ಕುಡಿತದ ಅಮಲಿನಲ್ಲಿ ತಮ್ಮನನ್ನೇ ಕೊಲೆಗೈದಿದ್ದಾನೆ. ಈ ಘಟನೆ ಪುತ್ತೂರಿನ ಕೆಮ್ಮಿಂಜೆ ಗ್ರಾಮದ ಕಟ್ಟಡವೊಂದರಲ್ಲಿ ನಡೆದಿದೆ.
ಪುತ್ತೂರಿನ ಕೆಮ್ಮಿಂಜೆಯಲ್ಲಿ ನಿಂಗನ ಗೌಡ ಹಾಗೂ ಒಡಹುಟ್ಟಿದ ತಮ್ಮ ಮಾದೇವಪ್ಪ ಕೂಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದರು. ಇವರು ಮೂಲತಃ ಹಾವೇರಿ ಜಿಲ್ಲೆಯ ಹೊಸೂರಿನವರು. ಗುರುವಾರ ರಾತ್ರಿ ಇವರಿಬ್ಬರೂ ಕಂಠಪೂರ್ತಿ ಕುಡಿದು ಜಗಳ ಮಾಡುತ್ತಿದ್ದರು. ಈ ವೇಳೆ, ನಿಂಗನ ಗೌಡನು, ಮಾದೇವಪ್ಪನ ಮೇಲೆ ಮಾರಮಾರಿ ಹಲ್ಲೆ ಮಾಡಿದ್ದಾನೆ. ಗಂಭೀರ ಗಾಯಗೊಂಡು ಮಾದೇವಪ್ಪ ಸಾವನ್ನಪ್ಪಿದ್ದಾನೆ ಎಂದು ಮೂಲಗಳು ತಿಳಿಸಿವೆ. ಇದೀಗ ಪೊಲೀಸರು ಪುತ್ತೂರು ನಗರ ಠಾಣಾ ಅ.ಕ್ರ 97/2022 ಕಲಂ 302 IPC ರ ಅಡಿಯಲ್ಲಿ ಆರೋಪಿಯ ವಿರುದ್ಧ ಪ್ರಕರಣ ದಾಖಲಿಸಿ ಕೊಂಡಿದ್ದಾರೆ.