ನ್ಯೂಸ್ ನಾಟೌಟ್: ಸುಳ್ಯ ತಾಲೂಕು ೨೬ನೇ ಸಾಹಿತ್ಯ ಸಮ್ಮೇಳನಕ್ಕೆ ದಿನಗಣನೆ ಆರಂಭವಾಗಿದೆ. ಈ ನಡುವೆ ಸಾಹಿತ್ಯ ಸಮ್ಮೇಳನದ ಕಹಳೆ ರಾಜಧಾನಿ ಬೆಂಗಳೂರಿನಲ್ಲಿಯೂ ಜೋರಾಗಿಯೇ ಮೊಳಗಿದೆ.
ಸುಳ್ಯ ತಾಲೂಕು ೨೬ನೇ ಸಾಹಿತ್ಯ ಸಮ್ಮೇಳನದ ಸ್ವಾಗತ ಸಮಿತಿ ಅಧ್ಯಕ್ಷರಾಗಿರುವ ಉಮ್ಮರ್ ಬೀಜದಕಟ್ಟೆ ನೇತೃತ್ವದಲ್ಲಿ ಬುಧವಾರ ಉದ್ಯಾನನಗರಿ ಬೆಂಗಳೂರಿನ ಹೃದಯ ಭಾಗದಲ್ಲಿರುವ ಪ್ರೆಸ್ ಕ್ಲಬ್ ನಲ್ಲಿ ಟೀ ಶರ್ಟ್ ಬಿಡುಗಡೆ ಕಾರ್ಯಕ್ರಮ ನೆರವೇರಿತು.
ಗ್ರಾಮೀಣ ಭಾಗದಲ್ಲಿ ಸಾಹಿತ್ಯ ಸಮ್ಮೇಳನದ ಮಹತ್ವ ಏನು ಅನ್ನುವುದರ ಬಗ್ಗೆ ಉಮ್ಮರ್ ಬೀಜದ ಕಟ್ಟೆ ಮಾಧ್ಯಮ ಪ್ರತಿನಿಧಿಗಳೊಂದಿಗೆ ಸವಿವರವಾಗಿ ವಿವರಿಸಿದರು. ಈ ವೇಳೆ ಮಾತನಾಡಿದ ಅವರು, ಸಂಪಾಜೆ, ಗೂನಡ್ಕ, ಸುಳ್ಯ ತಾಲೂಕಿನ ಹಲವು ಭಾಗಗಳು ಸರಣಿ ಭೂಕಂಪದಿಂದ ಜನ ಭಯಭೀತರಾಗಿದ್ದಾರೆ. ಇಂತಹ ಸಂದರ್ಭದಲ್ಲಿ ಜನರಲ್ಲಿ ಆತ್ಮವಿಶ್ವಾಸ, ಒಗ್ಗೂಡಿವಿಕೆಯ ಅಗತ್ಯ ಇದೆ. ಅಂತಹ ಜನರಿಗೆ ಸಾಹಿತ್ಯದ ಮೂಲಕ ಕನ್ನಡದ ಘೋಷವನ್ನು ಮೊಳಗಿಸಿ ಧೈರ್ಯ ತುಂಬುವ ಕೆಲಸವನ್ನು ನಾವು ಮಾಡುತ್ತಿದ್ದೇವೆ. ಕನ್ನಡ ಭುವನೇಶ್ವರಿಯ ಮೆರವಣಿಗೆ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ದೊರೆಯಲಿದ್ದು ಬೆಳಗ್ಗೆ ೮.೪೫ರಿಂದ ದೊಡ್ಡಡ್ಕ ಬೈಲೆ ರಸ್ತೆಯಿಂದ ಬೀಜದ ಕಟ್ಟೆ ಮಾರ್ಗವಾಗಿ ಸಜ್ಜನ ಸಭಾಭವನಕ್ಕೆ ಮೆರವಣಿಗೆ ಸಾಗಿ ಬರಲಿದೆ. ಬಳಿಕ ಸಮ್ಮೇಳನಾಧ್ಯಕ್ಷ ಕೆ,ಆರ್, ಗಂಗಾಧರ ಅವರ ಸಮ್ಮುಖದಲ್ಲಿ ಹಿರಿಯ ವಿಮರ್ಶಕರಾದ ಎಸ್.ಆರ್.ವಿಜಯ ಶಂಕರ್ ಸಮ್ಮೇಳನದ ಉದ್ಘಾಟನೆ ನೆರವೇರಿಸಲಿದ್ದಾರೆ. ಸಚಿವ ಎಸ್. ಅಂಗಾರ ಸೇರಿದಂತೆ ಅನೇಕ ಮಂದಿ ಗಣ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ರಾಜ್ಯದ ಎಲ್ಲ ಮಾಧ್ಯಮದವರು ನಮ್ಮ ಕಾರ್ಯಕ್ರಮಕ್ಕೆ ಬಂದು ಸಹಕರಿಸಬೇಕು ಎಂದು ಉಮ್ಮರ್ ಬೀಜದ ಕಟ್ಟೆ ತಿಳಿಸಿದರು.
ಇದೇ ವೇಳೆ ಮಾತನಾಡಿದ ಕನ್ನಡ ದ ಖ್ಯಾತ ವಿಮರ್ಷಕ ಎಸ್ ಆರ್ ವಿಜಯಶಂಕರ್ ಅವರು, ಸುಳ್ಯ ತಾಲೂಕು ಅನೇಕ ಮಂದಿ ಬರಹಗಾರರು, ಕಾದಂಬರಿಕಾರರು, ಸಾಹಿತಿಗಳನ್ನು ರಾಜ್ಯಕ್ಕೆ ಪರಿಚಯಿಸಿದೆ. ಕೃಷಿಯನ್ನೇ ನಂಬಿಕೊಂಡಿರುವ ಗ್ರಾಮೀಣ ಭಾಗದಲ್ಲಿ ಶಿಕ್ಷಣವೂ ಸಮೃದ್ಧಿಗೊಂಡಿದೆ. ಇಂತಹ ನೆಲದಲ್ಲಿ ಸಾಹಿತ್ಯ ಸಮ್ಮೇಳನ ನಾಡು ನುಡಿಯ ವಿಚಾರ ಚರ್ಚೆಗೆ ಬರುತ್ತಿರುವುದು ಸಂತಸ ಸಂಗತಿಯಾಗಿದೆ ಎಂದು ತಿಳಿಸಿದರು. ಆರೀಸ್ ಪಿ ಎಂ, ಆಯೂಬ್ ಗೂನಡ್ಕ, ಮಂಜುನಾಥ್ ಹಿರಿಯೂರು ಉಪಸ್ಥಿತರಿದ್ದರು.