ನ್ಯೂಸ್ ನಾಟೌಟ್: ಕನಸು ಕಾಣುವುದು ಸುಲಭ. ಆದರೆ ಕನಸನ್ನು ನನಸಾಗಿಸುವುದು ಸುಲಭವಲ್ಲ. ಅದಕ್ಕೆ ತಪಸ್ಸಿನಂತಹ ಪರಿಶ್ರಮ ಅಗತ್ಯ. ದಾಮ್ಲೆಯವರ ಸ್ನೇಹದಂತಹ ತಪೋಭೂಮಿಯಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳು ಪುಣ್ಯವಂತರು. ಅವರು ರಾಜ್ಯಕ್ಕೇ ಮಾದರಿಯಾಗಬಹುದು. ಏಕೆಂದರೆ ಇಂತಹ ಅತ್ಯುತ್ತಮ ಕನ್ನಡ ಶಿಕ್ಷಣ ಸಂಸ್ಥೆಯಲ್ಲಿ ಕಲಿತರೆ ಜ್ಞಾನಾಭಿವೃದ್ಧಿ ಸಾಧ್ಯ. ಕನ್ನಡಕ್ಕಾಗಿ ಕಟಿಬದ್ಧರಾಗಿ ಶಾಲೆಯನ್ನು ನಡೆಸುತ್ತಿರುವ ದಾಮ್ಲೆ ದಂಪತಿಗಳ ಶಿಕ್ಷಣ ಸೇವೆ ಪ್ರಶಂಸನೀಯ ಎಂದು ಬೆಂಗಳೂರಿನ ಎಚ್. ಎ. ಎಲ್. ನ ಕನ್ನಡ ಗೆಳೆಯರ ಬಳಗ ಇದರ ಮುಖ್ಯಸ್ಥರಾದ ರಾ. ನಂ. ಚಂದ್ರಶೇಖರ ಅವರು ಹೇಳಿದರು.
ಕಳೆದ ಸೋಮವಾರದಂದು ಸ್ನೇಹ ಶಿಕ್ಷಣ ಸಂಸ್ಥೆಗೆ ಭೇಟಿ ನೀಡಿ ದಾಮ್ಲೆ ದಂಪತಿಗಳ ಕನ್ನಡ ಸೇವೆಯನ್ನು ಸ್ಮರಿಸಿ, ಸನ್ಮಾನಿಸಿ ಮಾತನಾಡಿದರು. ‘ಅಪ್ರಕಾಶಿತ ಸ್ವಾತಂತ್ರ್ಯ ಹೋರಾಟಗಾರರ ಸ್ಮರಣೆ’ ಕೃತಿಯ ಸಂಪಾದಕತ್ವಕ್ಕಾಗಿ ಸ್ನೇಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾಗಿರುವ ಡಾ.ಚಂದ್ರಶೇಖರ ದಾಮ್ಲೆ ಇವರಿಗೆ ‘ಹಾಮಾನಾ ಕನ್ನಡ ಜಾಗೃತಿ ಪುಸ್ತಕ ಬಹುಮಾನ’ವನ್ನು ಈ ಸಂದರ್ಭದಲ್ಲಿ ಪ್ರದಾನ ಮಾಡಲಾಯಿತು. ಬಳಿಕ ವಿದ್ಯಾರ್ಥಿಗಳೆಲ್ಲರಿಗೂ ಏಕಾಗ್ರತೆಯನ್ನು ಹೆಚ್ಚಿಸುವ ರೂಬಿಕ್ ಕ್ಯೂಬ್, ಪೆನ್ನು ಹಾಗೂ ಸಿಹಿತಿಂಡಿ ವಿತರಿಸಿದರು. ಸ್ನೇಹ ಶಿಕ್ಷಣ ಸಂಸ್ಥೆ ವತಿಯಿಂದ ರಾ ನಂ ಚಂದ್ರಶೇಖರ ದಂಪತಿಗಳನ್ನು ಸನ್ಮಾನಿಸಿ, ಸಂಸ್ಥೆಯ ಅಧ್ಯಕ್ಷರಾಗಿರುವ ಡಾ. ಚಂದ್ರಶೇಖರ ದಾಮ್ಲೆ ಅವರು ಮಾತನಾಡಿ, ಕನ್ನಡ ಕಾರ್ಮಿಕರ ರಕ್ಷಣೆಗಾಗಿ ಕನ್ನಡ ಗೆಳೆಯರ ಬಳಗ ಮಹತ್ತರವಾದ ಕೆಲಸ ಮಾಡುತ್ತಿದೆ. ಕನ್ನಡ ಭಾಷೆಯನ್ನು ಉಳಿಸುವ ದೃಷ್ಟಿಯಿಂದ ತನ್ನನ್ನು ತಾನು ತೊಡಗಿಸಿಕೊಂಡಿರುವ ಕನ್ನಡ ಕಾರ್ಮಿಕ ಲೋಕದವರ ಸೇವೆ ಶ್ರೇಷ್ಠವಾದುದು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕನ್ನಡ ಗೆಳೆಯರ ಬಳಗ ಬೆಂಗಳೂರು ಇದರ ಸದಸ್ಯರಾಗಿರುವ ಬಾ. ಹ. ಉಪೇಂದ್ರ, ಬಿ. ವಿ. ರವಿಕುಮಾರ್, ಆರ್. ರಾಮಸ್ವಾಮಿ, ಶ್ರೀಮತಿ ಗಾಯತ್ರಿ ಚಂದ್ರಶೇಖರ್ ಮತ್ತು ಹೆಚ್. ಎನ್. ರಮೇಶ್ ಬಾಬು ಉಪಸ್ಥಿತರಿದ್ದರು. ಶಾಲಾ ಮುಖ್ಯೋಪಾಧ್ಯಾಯಿನಿ ಜಯಲಕ್ಷ್ಮಿ ದಾಮ್ಲೆ ಸ್ವಾಗತಿಸಿ, ಶಿಕ್ಷಕ ದೇವಿಪ್ರಸಾದ ಜಿ. ಸಿ. ವಂದಿಸಿದರು. ಶಿಕ್ಷಕಿ ಸವಿತಾ ಎಂ ನಿರೂಪಿಸಿದರು.
- +91 73497 60202
- [email protected]
- November 23, 2024 2:24 AM