ನ್ಯೂಸ್ ನಾಟೌಟ್: ಜೀವನದಲ್ಲಿ ಮಾರ್ಕ್ ಒಂದೇ ಮುಖ್ಯವಲ್ಲ. ಮಾರ್ಕ್ ಬೇಕಾದರೆ ಪಡೆಯಬಹುದು. ಆದರೆ ಹೋದ ಜೀವ ಮತ್ತೆ ಪಡೆಯಲು ಸಾಧ್ಯವೇ..? ಆದರೆ ಇಲ್ಲೊಬ್ಬಳು ವಿದ್ಯಾರ್ಥಿನಿ ಪರೀಕ್ಷೆಯಲ್ಲಿ ಕಡಿಮೆ ಮಾರ್ಕ್ ಪಡೆದಳೆಂದು ಕಾಲೇಜಿನಲ್ಲಿ ಅವಮಾನಿಸಿದ್ದಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಉಡುಪಿಯ ಪೆರ್ಡೂರಿನಲ್ಲಿ ನಡೆದಿದೆ.
ಪೆರ್ಡೂರು ನಿವಾಸಿ ಸುರೇಶ್ ಮೆಂಡನ್ ಪುತ್ರಿ ತೃಪ್ತಿ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿ. ವಿದ್ಯಾರ್ಥಿನಿಯು ಖಾಸಗಿ ಶಿಕ್ಷಣ ಸಂಸ್ಥೆಯಲ್ಲಿ ಪ್ರೌಢಶಿಕ್ಷಣ ಪಡೆದು ಕಳೆದ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಗರಿಷ್ಠ ಅಂಕಗಳಿಸಿದ್ದಳು. ಈ ಹಿನ್ನೆಲೆ ಪಿಯುಸಿ ವಿಜ್ಞಾನ ವಿಭಾಗಕ್ಕೆ ಕಾಲೇಜಿನಿಂದ ಉಚಿತ ಸೀಟ್ ನೀಡಲಾಗಿತ್ತು. ಆದರೆ ಈ ಬಾರಿಯ ಪಿಯುಸಿ ಪರೀಕ್ಷೆಯಲ್ಲಿ ಕಡಿಮೆ ಅಂಕ ಪಡೆದ ಕಾರಣ ಆಡಳಿತ ಮಂಡಳಿ ತೃಪ್ತಿಯನ್ನು ಬೈದಿದ್ದಾರೆ ಎಂದು ಹೇಳಲಾಗಿದೆ. ಕಡಿಮೆ ಮಾರ್ಕ್ ಬಂದಿದ್ದಕ್ಕೆ ಫೈನ್ ಹಾಗೂ ಸಂಪೂರ್ಣ ಫೀಸ್ ಕಟ್ಟಬೇಕೆಂದಿದ್ದಾರೆ ಎಂದು ಕಳೆದ ಮೂರು ದಿನಗಳ ಹಿಂದೆ ತೃಪ್ತಿ ತಂದೆಯ ಬಳಿ ವಿದ್ಯಾರ್ಥಿನಿ ಹೇಳಿಕೊಂಡಿದ್ದಾರೆ ಎಂದು ಹೇಳಲಾಗಿದೆ. ಇದರಿಂದ ಮಾನಸಿಕ ಖಿನ್ನತೆಗೆ ಒಳಗಾದ ತೃಪ್ತಿ ತಮ್ಮ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಈ ಬಗ್ಗೆ ವಿದ್ಯಾರ್ಥಿನಿಯ ತಂದೆ ಸುರೇಶ್ ಮೆಂಡನ್ ಅವರು ನವೆಂಬರ್ 28 ರಂದು ನೀಡಿದ ದೂರಿನಂತೆ ಉಡುಪಿಯ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.