ನ್ಯೂಸ್ ನಾಟೌಟ್ : ಗಂಡ-ಹೆಂಡತಿ ಜಗಳ ಬಿಡಿಸಲು ಬಂದ ಅಣ್ಣನಿಗೆ ಬಾವ ಹಿಗ್ಗಾಮುಗ್ಗಾ ಥಳಿಸಿದ ಘಟನೆ ನವೆಂಬರ್ 25 ರಂದು ಕೌಕ್ರಾಡಿ ಗ್ರಾಮದ ಪಟ್ಲಡ್ಕ ಎಂಬಲ್ಲಿ ನಡೆದಿದೆ.
ಘಟನೆಯಲ್ಲಿ ಗಾಯಗೊಂಡಿರುವ ಅಣ್ಣನನ್ನು (ಹೆಂಡತಿಯ ಅಣ್ಣ) ಆಸ್ಪತ್ರೆಗೆ ದಾಖಲಿಸಲಾಗಿದೆ. ಕೊಕ್ಕಡ ಸಮೀಪದ ಬೋಳದ ಬೈಲು ನಿವಾಸಿ ಮಹಮ್ಮದ್ ಶರೀಫ್ (42) ಗಾಯಾಳು ಎಂದು ತಿಳಿದು ಬಂದಿದೆ. ಸದ್ಯ ಇವರು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ನವೆಂಬರ್ 25 ರಂದು ಮಹಮ್ಮದ್ ಶರೀಫ್ ಅವರ ತಾಯಿ ಶರೀಫ್ ಅವರಿಗೆ ಕರೆ ಮಾಡಿ ತಂಗಿ ಹಾಗು ಅವಳ ಗಂಡ ಜಗಳವಾಡುತ್ತಿದ್ದಾರೆಂದು ತಿಳಿಸಿದ್ದಾರೆ. ತಕ್ಷಣ ತಂಗಿ ಮನೆಗೆ ಬಂದು ವಿಚಾರಿಸಿದ್ದಾರೆ. ಈ ಸಂದರ್ಭ ಮಾತಿಗೆ ಮಾತು ಬೆಳೆದು ಅಜೀಜ್ ರವರು ಶರೀಫ್ ಅವರಿಗೆ ಅವಾಚ್ಯ – ಶಬ್ದಗಳಿಂದ ಬೈದು ಕುತ್ತಿಗೆ ಭಾಗಕ್ಕೆ ಕಡಿಯಲು ಮುಂದಾದರು. ತಪ್ಪಿಸಿಕೊಂಡಾಗ ಮಹಮ್ಮದ್ ಶರೀಫ್ ಅವರ ಎಡ ಕೈ ಅಂಗೈಗೆ ತಾಗಿ ಮೂಳೆ ಮುರಿತದ ರಕ್ತ ಗಾಯವಾಗಿದ್ದು, ಎಡಗೈ ಅಂಗೈಗೆ ತಾಗಿ ರಕ್ತ ಗಾಯವಾಗಿದ್ದು, ನೆಲಕ್ಕೆ ಬಿದ್ದಾಗ ತಲೆಗೂ ಗುದ್ದಿದ ಗಾಯವಾಗಿದೆ.
ಈ ಸಂದರ್ಭ ಪರಿಚಯಸ್ಥ ಪ್ರವೀಣ್ ಮಹಮ್ಮದ್ ಶರೀಫ್ ಅವರನ್ನು ನೆಲ್ಯಾಡಿಯ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಅಂಬ್ಯುಲೆನ್ಸ್ ನ ಮೂಲಕ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ಬಗ್ಗೆ ಗಾಯಾಳು ಮಹಮ್ಮದ್ ಶರೀಫ್ ಉಪ್ಪಿನಂಗಡಿ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.