ನ್ಯೂಸ್ ನಾಟೌಟ್: ರಾಜಕೀಯ ನಾಯಕರು ಹೇಳಿಕೆ ನೀಡಿದ ಬೆನ್ನಲ್ಲೇ ಕರ್ನಾಟಕ– ಮಹಾರಾಷ್ಟ್ರ ಗಡಿ ವಿವಾದ ದಿನದಿಂದ ದಿನಕ್ಕೆ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ.
ಗಡಿ ವಿವಾದದ ಕುರಿತು ಕರ್ನಾಟಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಹೇಳಿಕೆ ಖಂಡಿಸಿ ಮರಾಠ ಮಹಾಸಂಘ ಪ್ರತಿಭಟನೆ ನಡೆಸಿದೆ. ಜತೆಗೆ ಈ ಸಂಘಟನೆ ಕಾರ್ಯಕರ್ತರು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಬಸ್ಗಳಿಗೆ ಕಪ್ಪುಬಣ್ಣ ಬಳಿದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪುಣೆ ಜಿಲ್ಲೆಯ ದೌಂಡ್ನ ಬಸ್ ನಿಲ್ದಾಣದಲ್ಲಿ ನಿಪ್ಪಾಣಿ–ಔರಂಗಾಬಾದ್ ಬಸ್ ಮೇಲೆ ಕೇಸರಿ ಹಾಗೂ ಕಪ್ಪು ಬಣ್ಣಗಳಿಂದ ಈ ಖಂಡನಾ ವಾಕ್ಯಗಳನ್ನು ಬರೆದಿದ್ದಾರೆ.
ಈ ಫೋಟೊಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಮರಾಠ ಮಹಾಸಂಘದ ಕಾರ್ಯ ವೈಖರಿಗೆ ಖಂಡನೆ ವ್ಯಕ್ತವಾಗಿದೆ. ಗಡಿ ವಿವಾದ ಕುರಿತು ಇತ್ತೀಚೆಗೆ ಸುದ್ದಿಗಾರರೊಂದಿಗೆ ಮಾತನಾಡಿದ್ದ ಮಹಾರಾಷ್ಟ್ರ ಉಪಮುಖ್ಯಮಂತ್ರಿ ದೇವೇಂದ್ರ ಫಡಣವೀಸ್, ‘ನಿಪ್ಪಾಣಿ, ಬೆಳಗಾವಿಗಳನ್ನು ಮಹಾರಾಷ್ಟ್ರಕ್ಕೆ ಸೇರಿಸುತ್ತೇವೆ’ ಎಂದು ಹೇಳಿಕೆ ನೀಡಿದ್ದರು. ಫಡಣವೀಸ್ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ‘ಮಹಾರಾಷ್ಟ್ರದ ಸೊಲ್ಲಾಪುರ ಮತ್ತು ಅಕ್ಕಲಕೋಟೆ ಕರ್ನಾಟಕದ ಭಾಗವಾಗಬೇಕು ಎಂಬುದು ನಮ್ಮ ಆಗ್ರಹ’ ಎಂದು ತಿರುಗೇಟು ನೀಡಿದ್ದರು. ಕರ್ನಾಟಕ– ಮಹಾರಾಷ್ಟ್ರ ಗಡಿ ವಿವಾದದ ಕುರಿತು ಮಹಾರಾಷ್ಟ್ರ ಉಪಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ಹೇಳಿಕೆ ಕುರಿತು ಪ್ರತಿಕ್ರಿಯಿಸಿರುವ ಅವರು, ‘ಫಡಣವೀಸ್ ಅವರು ಪ್ರಚೋದನಕಾರಿ ಹೇಳಿಕೆ ನೀಡಿದ್ದು, ಅವರ ಕನಸು ಎಂದಿಗೂ ನನಸಾಗುವುದಿಲ್ಲ. ರಾಜ್ಯದ ನೆಲ, ಜಲ, ಗಡಿ ರಕ್ಷಿಸಲು ನಮ್ಮ ಸರ್ಕಾರ ಕಟಿಬದ್ಧವಾಗಿದೆ’ ಎಂದು ಸ್ಪಷ್ಟಪಡಿಸಿದ್ದರು.