ನ್ಯೂಸ್ ನಾಟೌಟ್ : ಸ್ವತಃ ಬಲವಂತ ಮತಾಂತರ ಆರೋಪ ಎದುರಿಸುತ್ತಿದ್ದ ವ್ಯಕ್ತಿಯೊಬ್ಬರು ರಾಜ್ಯಸರಕಾರ ಜಾರಿಗೆ ತಂದಿರುವ ಮತಾಂತರ ನಿಷೇಧ ಕಾಯ್ದೆಯನ್ನು ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ ಘಟನೆ ಪುತ್ತೂರಿನ ಕಡಬದಲ್ಲಿ ವರದಿಯಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಕಟ್ರುಪಾಡಿ ನಿವಾಸಿ ವಿಕ್ಟರ್ ಮಾರ್ಟಿಸ್ ಎಂಬವರು ಮತಾಂತರ ನಿಷೇಧ ಕಾಯ್ದೆ ಪ್ರಶ್ನಿಸಿ ಸಾರ್ವಜನಿಕ ಹಿತಾಸಕ್ತಿಗೆ ಅರ್ಜಿ ಸಲ್ಲಿಸಿದ್ದಾರೆ. ಮುಖ್ಯ ನ್ಯಾಯಾಧೀಶ ಪಿ.ಬಿ. ವರಾಲೆ ನೇತೃತ್ವದ ನ್ಯಾಯ ಪೀಠದ ಮುಂದೆ ಅರ್ಜಿ ನ. ೨೧ ರಂದು ವಿಚಾರಣೆಗೆ ಬಂದಿತ್ತು. ಅರ್ಜಿದಾರರ ಪರ ವಕೀಲರು ವಾದ ಮಂಡಿಸಿ, ರಾಜ್ಯ ಸರಕಾರ ( ಕರ್ನಾಟಕ ಧಾರ್ಮಿಕ ಸ್ವಾತಂತ್ರ್ಯ ಹಕ್ಕು ರಕ್ಷಣಾ ಕಾಯ್ದೆ-೨೦೨೦) ನ್ನು ಜಾರಿಗೊಳಿಸಿದ್ದು, ಇದು ಸಂವಿಧಾನಕ್ಕೆ ವಿರೋಧವಾಗಿದೆ. ಕೂಡಲೇ ರದ್ದುಗೊಳಿಸಬೇಕೆಂದು ವಿಕ್ಟರ್ ಪರ ವಕೀಲ ಮನವಿ ಮಾಡಿದ್ದಾರೆ. ಆದರೆ ಸರಕಾರದ ಪರ ವಾದ ಮಂಡಿಸಿದ ವಕೀಲರಾದ ಜನರಲ್ ಪ್ರಭುಲಿಂಗ. ಕೆ . ರವರು ಅರ್ಜಿದಾರರ ವಿರುದ್ದವೇ ಬಲವಂತದ ಮತಾಂತರ ಆರೋಪದಲ್ಲಿ ೨ ಕ್ರಿಮಿನಲ್ ಪ್ರಕರಣಗಳಿದ್ದು ಸ್ವತಃ ಆರೋಪ ಎದುರಿಸುತ್ತಿರುವ ವ್ಯಕ್ತಿಯ ಅರ್ಜಿ ಪರಿಗಣಿಸಬಾರದು ಎಂದು ಮನವಿಮಾಡಿದರು . ಇದನ್ನು ಪುರಸ್ಕರಿಸಿದ ನ್ಯಾಯಪೀಠ, ಆರೋಪಿ ಸಲ್ಲಿಸಿರುವ ಅರ್ಜಿಯನ್ನು ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನಾಗಿ ಪರಿಗಣಿಸಲಾಗದು ಎಂದು ಹೇಳಿ ವಿಚಾರಣೆಯನ್ನು ನ.೨೮ ಕ್ಕೆ ಮುಂದೂಡಿದೆ.