ನ್ಯೂಸ್ ನಾಟೌಟ್: ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಖ್ಯಾತ ದೈವ ನರ್ತಕ ಕುಟ್ಟಿ ಪರವ (೭೬ ವರ್ಷ) ನಿಧನರಾಗಿದ್ದಾರೆ. ಅವರು ಕಳೆದ ಎರಡು ವರ್ಷಗಳಿಂದ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದರು. ನ.೨೧ರಂದು ರಾತ್ರಿ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ ಎಂದು ಕುಟುಂಬ ಮೂಲಗಳು ನ್ಯೂಸ್ ನಾಟೌಟ್ ಗೆ ತಿಳಿಸಿವೆ.
ಕಡಬ ತಾಲೂಕು ಹಳೆ ನೆರೆಂಕಿ ಗ್ರಾಮದ ಮೇಲೂರು ಮನೆಯ ನಿವಾಸಿಯಾಗಿದ್ದ ಕುಟ್ಟಿ ಪರವ ಅವರು ಪತ್ನಿ, ನಾಲ್ವರು ಗಂಡು ಮಕ್ಕಳು, ಒರ್ವ ಪುತ್ರಿ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಕುಟ್ಟಿ ಪರವ ಅವರು ಪಂಜುರ್ಲಿ, ಕಲ್ಲುರ್ಟಿ, ವರ್ಣಾರ ಪಂಜುರ್ಲಿ ದೈವ ನರ್ತನವನ್ನು ಅಮೋಘವಾಗಿ ಕಟ್ಟುತ್ತಿದ್ದರು. ಸಾಕ್ಷಾತ್ ದೈವದ ರೀತಿಯಲ್ಲಿ ಜನಮನಕ್ಕೆ ಹತ್ತಿರವಾಗಿದ್ದರು. ಕೊಕ್ಕಡ ಗ್ರಾಮ, ಗೋಳಿತೊಟ್ಟು ಗ್ರಾಮ ಸೇರಿದಂತೆ ಹಲವು ಗ್ರಾಮಗಳಲ್ಲಿ ಇವರು ದೈವನರ್ತಕರಾಗಿ ಕಳೆದ ೪೦ ವರ್ಷಗಳಿಂದ ಸೇವೆ ಸಲ್ಲಿಸಿದ್ದಾರೆ, ಕೊಕ್ಕಡದ ವೈದ್ಯನಾಥೇಶ್ವರ ದೇವಸ್ಥಾನದಲ್ಲಿರುವ ದೈವಗಳ ನರ್ತಕರಾಗಿಯೂ ಇವರು ಸೇವೆ ಸಲ್ಲಿಸಿದ್ದಾರೆ.